ಹೈಕೋರ್ಟ್‌ ವೆಬ್‌ತಾಣದಲ್ಲಿ ಹಾಕಲಾದ ಆದೇಶ ಪ್ರತಿಯು ಪ್ರಮಾಣಿತ ಪ್ರತಿಯಷ್ಟೇ ಅಧಿಕೃತತೆ ಉಳ್ಳದ್ದು: ಕರ್ನಾಟಕ ಹೈಕೋರ್ಟ್‌

ಪ್ರಮಾಣಿತ ಪ್ರತಿಯನ್ನು ನೀಡಲಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಯಾರೇ ಆಗಲಿ ನ್ಯಾಯಾಲಯದ ಆದೇಶವನ್ನು ಉಪೇಕ್ಷಿಸುವಂತಿಲ್ಲ ಎಂದು ಹೇಳಿದ ನ್ಯಾ. ಸೂರಜ್‌ ಗೋವಿಂದರಾಜ್‌ ನೇತೃತ್ವದ ಪೀಠ.
Karnataka HC
Karnataka HC

ಹೈಕೋರ್ಟ್‌ ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲಾದ ಆದೇಶದ ಮುದ್ರಿತ ಪ್ರತಿಯು (ಪ್ರಿಂಟೌಟ್‌) ಪ್ರಮಾಣಿತ ಆದೇಶದಷ್ಟೇ ಅಧಿಕೃತವೂ, ಅನ್ವಯಿಕವೂ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ [ಎಸ್‌ ಎ ಸುಭಾನ್ ವರ್ಸಸ್‌ ರಶೀದ್‌ ಖಾನ್‌].

ನ್ಯಾ. ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಇತ್ತೀಚೆಗೆ ಈ ಕುರಿತು ಆದೇಶ ನೀಡಿದ್ದು, ಪ್ರಮಾಣಿತ ಪ್ರತಿಯನ್ನು (ಸರ್ಟಿಫೈಡ್‌ ಕಾಪಿ) ನೀಡಲಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಯಾರೇ ಆಗಲಿ ನ್ಯಾಯಾಲಯದ ಆದೇಶವನ್ನು ಉಪೇಕ್ಷಿಸಲಾಗದು ಎಂದು ಹೇಳಿದೆ.

ಈ ಕುರಿತು ನೀಡಲಾದ ಆದೇಶದಲ್ಲಿ ಪೀಠವು, “ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲಾದ ಆದೇಶ ಪ್ರತಿಯ ಪ್ರಿಂಟೌಟ್‌ ಅನುಪಾಲನೆ ಮಾಡಬೇಕಾದ ಆದೇಶವೇ ಆಗಿರುತ್ತದೆ. ಅದು ಆದೇಶದ ಪ್ರಮಾಣಿತ ಪ್ರತಿ (ಟ್ರೂಕಾಪಿ) ಹೊಂದಿರುವ ಸತ್ಯತೆ, ಅನ್ವಯಿಕತೆ ಹಾಗೂ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರಮಾಣಿತ ಪ್ರತಿಯನ್ನು ನೀಡಲಾಗಿಲ್ಲ ಎನ್ನುವ ಏಕೈಕ ಕಾರಣಕ್ಕೆ ಯಾವುದೇ ವ್ಯಕ್ತಿ ಈ ನ್ಯಾಯಾಲಯವು ಹೊರಡಿಸಿರುವ ಆದೇಶದ ಪ್ರತಿಯನ್ನು ಉಪೇಕ್ಷಿಸಲಾಗದು,” ಎಂದು ಹೇಳಿದೆ.

ಮುಂದುವರೆದು ನ್ಯಾಯಾಲಯವು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯೊಂದಿಗೆ ಹೈಕೋರ್ಟ್‌ನ ದಿನಂಪ್ರತಿ ಪ್ರಕ್ರಿಯೆಗಳು, ಆದೇಶಗಳು, ತೀರ್ಪುಗಳನ್ನು ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಲು ಸಾಧ್ಯವಾಗಿರುವುದನ್ನು ದಾಖಲಿಸಿತು. “ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಗಮನ ಹಾಗೂ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳಲ್ಲಿ ಅದರ ಬಳಕೆಯು ವ್ಯಾಪಕವಾಗುವುದರೊಂದಿಗೆ ಅದಕ್ಕೆ ಸೂಕ್ತ ರೀತಿಯ ಪ್ರಾಮುಖ್ಯತೆ ಮತ್ತು ಅಧಿಕೃತತೆಯನ್ನು ನೀಡಬೇಕು. ಪ್ರಮಾಣಿತ ಪ್ರತಿಯ ಅವಶ್ಯಕತೆಯು ಇಂದು ಹಳತಾಗತೊಡಗಿದೆ,” ಎಂದು ಪೀಠವು ಹೇಳಿತು.

ಪ್ರಮಾಣೀಕರಣವು ಆದೇಶಕ್ಕಾಗಲಿ, ಅದರೊಳಗಿನ ವಿಷಯಕ್ಕಾಗಲಿ ಮಾಡಲಾದುದಲ್ಲ. ಬದಲಿಗೆ ಅದು ಕೇವಲ ಪ್ರತಿಯನ್ನು ಮಾತ್ರವೇ ಪ್ರಮಾಣೀಕರಿಸುತ್ತದೆ ಎಂದು ಈ ವೇಳೆ ನ್ಯಾಯಾಲಯವು ಸ್ಪಷ್ಟಗೊಳಿಸಿತು.

ಅರ್ಜಿದಾರ ಸುಬಾನ್‌ ಎನ್ನುವವರು ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಡೆಯಾಜ್ಞೆ ಯಾಚಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿದ ವೇಳೆ ಮೇಲಿನ ಅಂಶಗಳನ್ನು ಹೇಳಿದೆ. ಅಧೀನ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ಆದೇಶಕ್ಕೆ ಅರ್ಜಿದಾರರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದಿದ್ದರು. ಅಧೀನ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಲು ಮುಂದಾದ ಅಮೀನರ (ಬೇಲಿಫ್‌) ಗಮನಕ್ಕೆ ಅರ್ಜಿದಾರರು ಹೈಕೋರ್ಟಿನ ತಡೆಯಾಜ್ಞೆ ವಿಚಾರವನ್ನು ತಂದಿದ್ದರು. ಆದರೆ, ಪ್ರಮಾಣಿತ ಪ್ರತಿಯನ್ನು ಮಾತ್ರವೇ ಒಪ್ಪುವುದಾಗಿ ಹೇಳಿದ್ದ ಅಮೀನರು ಹೈಕೋರ್ಟ್‌ ವೆಬ್‌ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ಆದೇಶದ ಪ್ರಿಂಟೌಟ್‌ ಅನ್ನು ಅರ್ಜಿದಾರರಿಂದ ಒಪ್ಪಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com