ಕಾರ್ಯಕರ್ತರು ಪ್ರಚೋದನಕಾರಿ ಘೋಷಣೆ ಕೂಗಿದರೆ ಸಮಾವೇಶ ಆಯೋಜಿಸಿದ್ದ ಸಂಘಟಕರೂ ಜವಾಬ್ದಾರರು: ಕೇರಳ ಹೈಕೋರ್ಟ್‌

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಸಮಾವೇಶದಲ್ಲಿ ಅಪ್ರಾಪ್ತ ಬಾಲಕನೊಬ್ಬ ಪ್ರಚೋದನಾಕಾರಿ ಘೋಷಣೆ ಕೂಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯ ವೇಳೆ ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
Justice PV Kunhikrishnan, Kerala High Court
Justice PV Kunhikrishnan, Kerala High Court

ರಾಜಕೀಯ ಸಮಾವೇಶಗಳಲ್ಲಿ ಯಾವುದೇ ಕಾರ್ಯಕರ್ತ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದರೆ ಸಮಾವೇಶ ಸಂಘಟಕರೂ ಅದಕ್ಕೆ ಜವಾಬ್ದಾರರಾಗುತ್ತಾರೆ ಎಂದು ಶುಕ್ರವಾರ ಕೇರಳ ಹೈಕೋರ್ಟ್‌ ಹೇಳಿದೆ (ಆರ್‌ ರಾಮರಾಜ ವರ್ಮ ವರ್ಸಸ್‌ ಕೇರಳ ರಾಜ್ಯ).

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಆಯೋಜಿಸಿದ್ದ ಸಮಾವೇಶದಲ್ಲಿ ಅಪ್ರಾಪ್ತ ಬಾಲಕನೋರ್ವ ಪ್ರಚೋದನಾಕಾರಿ ಘೋಷಣೆ ಕೂಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್‌ ಅವರು ಕಾರ್ಯಕರ್ತರ ವರ್ತನೆಯನ್ನು ನಿಯಂತ್ರಿಸುವುದು ಸಮಾವೇಶದ ಸಂಘಟಕರ ಕರ್ತವ್ಯವಾಗಿದೆ ಎಂದರು.

“ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸದಸ್ಯರು ಪ್ರಚೋದನಾಕಾರಿ ಘೋಷಣೆ ಹಾಕಿದರೆ ಸಮಾವೇಶ ಸಂಘಟಿಸುವ ವ್ಯಕ್ತಿಗಳೂ ಅದಕ್ಕೆ ಜವಾಬ್ದಾರರಾಗುತ್ತಾರೆ. ಸಮಾವೇಶ ಸಂಘಟಿಸಿದಾಗ ಅದರಲ್ಲಿ ಭಾಗವಹಿಸುವ ಕಾರ್ಯಕರ್ತರನ್ನು ನಿಯಂತ್ರಿಸುವುದು ನಾಯಕರ ಕರ್ತವ್ಯವಾಗಿರುತ್ತದೆ” ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ.

ಸಮಾವೇಶದಲ್ಲಿ ವ್ಯಕ್ತಿಯೊಬ್ಬರ ಹೆಗಲ ಮೇಲೆ ಕೂತು ಪ್ರಚೋದನಾಕಾರಿ ಘೋಷಣೆ ಹಾಕುತ್ತಿದ್ದ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಸಮಾವೇಶದಲ್ಲಿ ಭಾಗಿಯಾಗಿದ್ದ ಸದಸ್ಯರು ತಮ್ಮ ನಾಯಕರ ಅರಿವಿಗೆ ತಂದು ಘೋಷಣೆ ಕೂಗಿದ್ದಾರೋ ಅಥವಾ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ವ್ಯಕ್ತಿಗಳೊಂದಿಗೆ ಸಂಘಟಕರು ಏನಾದರೂ ಶಾಮೀಲಾಗಿದ್ದಾರೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಮೇಲ್ನೋಟಕ್ಕೆ ಘಟನೆಗೆ ಸಂಘಟಕರೇ ಜವಾಬ್ದಾರರು. ಆದ್ದರಿಂದ, ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಿ ಪೊಲೀಸರು ತನಿಖೆ ನಡೆಸಬೇಕು. ಈ ತೀರ್ಪಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಿಂದ ಮುಕ್ತವಾಗಿ ಪೊಲೀಸರು ತನಿಖೆ ಮಾಡಬೇಕು. ನೆಲದ ಕಾನೂನನ್ನು ಉಲ್ಲಂಘಿಸಿದ ಎಲ್ಲ ವ್ಯಕ್ತಿಗಳ ವಿರುದ್ಧ ಕಾನೂನಿಗೆ ಅನುಸಾರವಾಗಿ ಪೊಲೀಸರು ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಆದೇಶದಲ್ಲಿ ಹೇಳಿದ ನ್ಯಾಯಾಲಯವು ರಿಟ್‌ ಮನವಿಯನ್ನು ಮುಕ್ತಾಯಗೊಳಿಸಿತು.

Related Stories

No stories found.
Kannada Bar & Bench
kannada.barandbench.com