ಕೆಂಪಿರುವೆಗಳನ್ನು ಬಳಸಿ ತಯಾರಿಸಲಾಗಿರುವ ‘ಕಯ್ (ಕುಕುಟಿ) ಚಟ್ನಿ’ಯಿಂದ ಕೋವಿಡ್-19 ತಡೆಯಬಹುದು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಒಡಿಶಾ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. (ಎರ್. ನಾಯಧರ್ ಪಧಿಯಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).
ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಮತ್ತು ನ್ಯಾಯಮೂರ್ತಿ ಬಿ.ಪಿ.ರೌತ್ರೆ ಅವರಿದ್ದ ಪೀಠ ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡಲು ನ್ಯಾಯಾಲಯ ಯಾವ ರೀತಿಯಲ್ಲೂ ಸಜ್ಜುಗೊಂಡಿಲ್ಲ. ಇದು ತಜ್ಞ ಸಂಸ್ಥೆಗಳು, ಸಿಎಸ್‌ಐಆರ್ ಮತ್ತು ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಗಳಿಗೆ ಬಿಡಬೇಕಾದ ಸಂಗತಿ” ಎಂದು ಹೇಳಿದೆ. ಅಲ್ಲದೆ ಅಧಿಕಾರಿಗಳಿಗೆ ಯಾವುದೇ ನೋಟಿಸ್ ನೀಡಲು ನಿರಾಕರಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
"…ಮನವಿ ಸ್ವೀಕರಿಸಲು ನ್ಯಾಯಾಲಯ ಒಲವು ತೋರುತ್ತಿಲ್ಲ... ಅದೇ ರೀತಿ, ಬುಡಕಟ್ಟು ಸಮುದಾಯಗಳು ಕೆಂಪಿರುವೆ ಚಟ್ನಿ ಅಥವಾ ಸೂಪ್ ಬಳಸುವುದು ಅವರ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಯನ್ನು ಆಧರಿಸಿದೆ. ಅದಕ್ಕೆ ಪ್ರತಿಕ್ರಿಯಿಸಲು ನ್ಯಾಯಾಲಯ ಸಜ್ಜುಗೊಂಡಿಲ್ಲ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿದಾರರು ಮಯೂರ್‌ಭಂಜ್ ಜಿಲ್ಲೆಯ ತಕತ್ಪುರದ ಸಹಾಯಕ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಬತುಡಿ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಅವರು ಹಸಿರು ಮೆಣಸಿನಕಾಯಿಯೊಂದಿಗೆ ಕೆಂಪಿರುವೆಗಳನ್ನು ಬಳಸಿ ತಯಾರಿಸಲಾಗುವ ‘ಕಾಯ್ (ಕುಕುಟಿ) ಚಟ್ನಿ’ ರೋಗನಿರೋಧಕ ಶಕ್ತಿ ಹೆಚ್ಚಿಸುವ ದಿವ್ಯೌಷಧ ಎಂದು ವಾದಿಸಿದ್ದರು.
ಈ ಸಂಬಂಧ ಅರ್ಜಿದಾರರು ಸಲ್ಲಿಸಿದ್ದ ಪತ್ರವನ್ನು ಕೇಂದ್ರ ಆಯುಷ್ ಸಚಿವಾಲಯ, ಸಿಎಸ್‌ಐಆರ್ ಈಗಾಗಲೇ ತಿರಸ್ಕರಿಸಿದ್ದವು. ಇದನ್ನು ಗಮನಿಸಿದ ನ್ಯಾಯಾಲಯ ತಜ್ಞ ಸಂಸ್ಥೆಗಳ ನಿರ್ಧಾರ ಕುರಿತು ಮೇಲ್ಮನವಿ ಸಲ್ಲಿಸುವ ಅರ್ಹತೆ ಅರ್ಜಿಗೆ ಇಲ್ಲ ಎಂದು ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯ ಅವಲೋಕನಗಳನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. "ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಗೆ ಸಂಬಂಧಿಸಿದಂತೆ, ಕೆಂಪಿರುವೆಗಳ ಆಂತರಿಕ ಬಳಕೆ ಬಗ್ಗೆ 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆಯ ಮೊದಲ ಆವೃತ್ತಿಯಲ್ಲಿ ಉಲ್ಲೇಖಿಸಲಾದ ಆಯುರ್ವೇದದ ಶಾಸ್ತ್ರೀಯ ಪುಸ್ತಕಗಳಲ್ಲಿ ಯಾವುದೇ ಉಲ್ಲೇಖ ಕಂಡುಬಂದಿಲ್ಲ ಎಂದು ಅದು ತಿಳಿಸಿದೆ. ಚಟ್ನಿ ಆಯುರ್ವೇದ ಔಷಧ ಎಂದು ಮೌಲ್ಯೀಕರಿಸಲು ಅರ್ಜಿದಾರರು ಕೇಳಿಕೊಂಡಿದ್ದಾರೆ.... 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ಮತ್ತು 1945ರ ನಿಯಮಾವಳಿಗಳ ಪ್ರಕಾರ ಕೊರೊನಾ ರೋಗಿಯ ಬಳಕೆಗಾಗಿ ಕೆಂಪಿರುವೆ ಚಟ್ನಿ ಅಥವಾ ಸೂಪ್ ತಯಾರಿಸುವುದು 'ಆಯುರ್ವೇದ ಔಷಧಗಳ ವ್ಯಾಪ್ತಿಯಿಂದ ಹೊರಗಿದೆ ಎಂಬುದಾಗಿ ಹೇಳಬಹುದು” ಎಂದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.