ಔಷಧ ಚೀಟಿ, ಮರಣೋತ್ತರ ಪರೀಕ್ಷೆ ವರದಿಗಳನ್ನು ಸ್ಫುಟವಾಗಿ ಬರೆಯಿರಿ: ವೈದ್ಯರಿಗೆ ಒರಿಸ್ಸಾ ಹೈಕೋರ್ಟ್ ಸೂಚನೆ

ಹಾವು ಕಡಿತ ಪ್ರಕರಣದಲ್ಲಿ ಮರಣೋತ್ತರ ವರದಿ ಓದಲು ಕಷ್ಟವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ನಿರ್ದೇಶನ ನೀಡಿತು.
ಒರಿಸ್ಸಾ ಹೈಕೋರ್ಟ್, ಡಾ.
ಒರಿಸ್ಸಾ ಹೈಕೋರ್ಟ್, ಡಾ.

ಔಷಧ ಚೀಟಿ, ಮರಣೋತ್ತರ ಪರೀಕ್ಷೆ ವರದಿಯಂತಹ ವೈದ್ಯಕೀಯ- ಕಾನೂನು ದಾಖಲೆಗಳನ್ನು ಸ್ಫುಟವಾಗಿ ಬರೆಯಲು ಎಲ್ಲಾ ವೈದ್ಯರಿಗೆ ನಿರ್ದೇಶನ ನೀಡುವಂತೆ ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಒರಿಸ್ಸಾ ಹೈಕೋರ್ಟ್‌ ಈಚೆಗೆ ಸೂಚಿಸಿದೆ.

ಗೀಚಿ ಬರೆಯುವ ಪ್ರವೃತ್ತಿ ವೈದ್ಯರಲ್ಲಿ ಫ್ಯಾಷನ್ ಆಗಿ ಮಾರ್ಪಟ್ಟಿದ್ದು ಸಾಮಾನ್ಯ ಜನ ಅಥವಾ ನ್ಯಾಯಾಂಗ ಅಧಿಕಾರಿಗಳು ಓದಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್‌ ಕೆ ಪಾಣಿಗ್ರಾಹಿ ಹೇಳಿದರು.

"ಈ ವಿಚಾರವನ್ನು ಗಮನಿಸಿ ಔಷಧ ಚೀಟಿ, ಮರಣೋತ್ತರ ಪರೀಕ್ಷೆ ವರದಿಯಂತಹ ವೈದ್ಯಕೀಯ- ಕಾನೂನು ದಾಖಲೆಗಳನ್ನು ಬರೆಯುವಾಗ ಸೂಕ್ತವಾದ ಕೈಬರಹದಲ್ಲಿ ಅಥವಾ ಬೆರಳಚ್ಚಿನ ರೂಪದಲ್ಲಿ ಬರೆಯುವಂತೆ ಎಲ್ಲಾ ವೈದ್ಯಕೀಯ ಕೇಂದ್ರಗಳು, ಖಾಸಗಿ ಚಿಕಿತ್ಸಾಲಯಗಳು, ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯ ಆದೇಶಿಸಿತು.

ಹಾವು ಕಡಿತ ಪ್ರಕರಣದಲ್ಲಿ ಎಕ್ಸ್‌ಗ್ರೇಷಿಯಾ (ವಿಶೇಷ ಪರಿಹಾರ) ನೀಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಲೇವಾರಿ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಅರ್ಜಿದಾರರ ಹಿರಿಯ ಮಗ ಹಾವು ಕಚ್ಚಿ ಮೃತಪಟ್ಟಿದ್ದ.

ಮರಣೋತ್ತರ ಪರೀಕ್ಷೆ ವರದಿಯನ್ನು ಓದಲು ಸಾಧ್ಯವಾಗದೇ ಹೋದುದರಿಂದ ಅದನ್ನು ಬರೆದ ವೈದ್ಯರು ವಿಚಾರಣೆ ವೇಳೆ ಹಾಜರಿರುವಂತೆ ನ್ಯಾಯಾಲಯ ಸೂಚಿಸಿತು.

"ಇಂತಹ ಬರಹ ಓದಲು ಅದನ್ನು ಬರೆದವರು ಇಲ್ಲವೇ ಕೈಬರಹ ತಜ್ಞರನ್ನೇ ಕರೆಸಿಕೊಳ್ಳಬೇಕೆ ವಿನಾ ಸಾಮಾನ್ಯವಾಗಿ ಓದಿದರೆ ಇದು ಅರ್ಥವಾಗುವುದಿಲ್ಲ" ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಮರಣೋತ್ತರ ವರದಿ ಬರೆಯುವಲ್ಲಿ ವೈದ್ಯರ ಅಲಕ್ಷ್ಯದ ಧೋರಣೆ ವೈದ್ಯಕೀಯ- ಕಾನೂನು ದಾಖಲೆಗಳನ್ನು ಅರ್ಥೈಸಿಕೊಲ್ಳುವುದರ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು ನ್ಯಾಯಾಂಗ ವ್ಯವಸ್ಥೆಯು ನಿರ್ದಿಷ್ಟ ತೀರ್ಮಾನಕ್ಕೆ ಬರಲು ಕಷ್ಟಕರವಾಗುತ್ತದೆ ಎಂದು ಅದು ಹೇಳಿದೆ.

ವೈದ್ಯಕೀಯ ವೃತ್ತಿಪರರ ಬಿಡುವಿಲ್ಲದ ಕೆಲಸವನ್ನು ಕೋವಿಡ್‌ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ನ್ಯಾಯಾಲಯ ಶ್ಲಾಘಿಸಿತಾದರೂ ಔಷಧ ಚೀಟಿ ಮತ್ತು ವೈದ್ಯಕೀಯ ಕಾನೂನು ದಾಖಲೆಗಳನ್ನು ಕೆಟ್ಟ ಲಿಪಿಯಲ್ಲಿ ಬರೆಯಲಾಗುತ್ತದೆ ಎಂಬ ಸಾಮಾನ್ಯ ಭಾವನೆ ಇದ್ದು ಇದು ಸಾಕ್ಷ್ಯಗಳ ಪರಾಮರ್ಶೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ನುಡಿಯಿತು.

ಆದ್ದರಿಂದ ಕಳಪೆಯಾಗಿ ಬರೆಯುವ ವೈದ್ಯರು ತಮ್ಮ ಮನೋಭಾವ ಬದಲಿಸಿಕೊಂಡು ಸ್ಫುಟವಾಗಿ ಅಥವಾ ಬೆರಳಚ್ಚಿನ ರೂಪದಲ್ಲಿ ಅಥವಾ ಉತ್ತಮ ಕೈಬರಹರೂಪದಲ್ಲಿ ಬರೆಯಬೇಕು ಇದರಿಂದ ನ್ಯಾಯಾಂಗ ವ್ಯವಸ್ಥೆ ವೈದ್ಯರ ಕೈಬರಹ ಓದುವಾಗ ಅನಗತ್ಯ ಪ್ರಾಯಾಸಪಡುವುದು ತಪ್ಪುತ್ತದೆ ಎಂದು ನ್ಯಾಯಾಲಯ ವಿವರಿಸಿತು.

ಹಾವು ಕಡಿತ ಪ್ರಕರಣದಲ್ಲಿ, ಅಂತಹ ಪ್ರಕರಣಗಳಿಗೆ ಸೂಚಿಸಿದ ಅರ್ಜಿ ಸಲ್ಲಿಸುವ ಮೂಲಕ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಸೂಕ್ತ ಅಧಿಕಾರಿಗಳಿಂದ ಪರಿಹಾರ ಪಡೆಯುವಂತೆ ನ್ಯಾಯಾಲಯ ಅರ್ಜಿದಾರರಿಗೆ ನಿರ್ದೇಶನ ನೀಡಿತು. ಅರ್ಜಿಯನ್ನು ಸ್ವೀಕರಿಸಿದ ಒಂದು ತಿಂಗಳೊಳಗೆ ಕಾನೂನಿನ ಪ್ರಕಾರ ಅದನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.  

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Rasa @ Rasananda Bhoi v. State of Odisha & Ors.pdf
Preview

Related Stories

No stories found.
Kannada Bar & Bench
kannada.barandbench.com