ಒಟಿಟಿ ವೇದಿಕೆ ಟಿವಿ ವಾಹಿನಿಯಲ್ಲ, ಅದಕ್ಕೆ ಸರ್ಕಾರದ ಅನುಮತಿ ಬೇಕಿಲ್ಲ: ಟಿಡಿಎಸ್ಎಟಿ

ಮೇಲ್ನೋಟಕ್ಕೆ ಟ್ರಾಯ್ ನಿಯಮಾವಳಿಗಳ ನಿಯಂತ್ರಣ 2 (ಆರ್) ಅಡಿಯಲ್ಲಿ 'ವಿತರಣಾ ವೇದಿಕೆ' ವ್ಯಾಖ್ಯಾನಕ್ಕೆ ಒಟಿಟಿ ವೇದಿಕೆಗಳು ಒಳಪಡುವುದಿಲ್ಲ ಎಂದು ನ್ಯಾಯಮಂಡಳಿ ತಿಳಿಸಿತು.
OTT Platforms, Netflix, Disney+, Hotstar, Prime Video
OTT Platforms, Netflix, Disney+, Hotstar, Prime Video

ಓವರ್-ದಿ-ಟಾಪ್ (ಒಟಿಟಿ) ವೇದಿಕೆಗಳು ಟಿವಿ ವಾಹಿನಿಗಳಲ್ಲ ಮತ್ತು ಮೇಲ್ನೋಟಕ್ಕೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯಿದೆ ವ್ಯಾಪ್ತಿಯಿಂದ ಅವರು ಹೊರಗಿವೆ ಎಂದು ದೂರಸಂಪರ್ಕ ವ್ಯಾಜ್ಯ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (ಟಿಡಿಎಸ್‌ಎಟಿ) ಹೇಳಿದೆ [ಅಖಿಲ ಭಾರತ ಡಿಜಿಟಲ್ ಕೇಬಲ್ ವೇದಿಕೆ ಮತ್ತು ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ಮೇಲ್ನೋಟಕ್ಕೆ ಟ್ರಾಯ್‌ ನಿಯಮಾವಳಿಗಳ ನಿಯಂತ್ರಣ 2(ಆರ್) ಅಡಿಯಲ್ಲಿ 'ವಿತರಣಾ ವೇದಿಕೆ' ವ್ಯಾಖ್ಯಾನಕ್ಕೆ ಒಟಿಟಿ ವೇದಿಕೆಗಳು ಒಳಪಡುವುದಿಲ್ಲ ಎಂದು ನ್ಯಾಯಮಂಡಳಿ ಅಧ್ಯಕ್ಷ ನ್ಯಾ. ಧೀರೂಭಾಯಿ ನಾರನ್‌ಭಾಯ್ ಪಟೇಲ್ ಮತ್ತು ಸದಸ್ಯ ಸುಬೋಧ್ ಕುಮಾರ್ ಗುಪ್ತಾ ಅವರು ಹೇಳಿದ್ದಾರೆ.

'ಡಿಸ್ನಿ+ ಹಾಟ್‌ಸ್ಟಾರ್' ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಮೊಬೈಲ್ ಸಾಧನಗಳಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡುವ ಸ್ಟಾರ್ ಕ್ರಮ ತಾರತಮ್ಯದಿಂದ ಕೂಡಿದ್ದು ಟ್ರಾಯ್‌ ಮಾರ್ಗಸೂಚಿಗಳನ್ನು ಅದು ಉಲ್ಲಂಘಿಸಿದೆ ಎಂದು ಆರೋಪಿಸಿ ಸ್ಟಾರ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಅಖಿಲ ಭಾರತ ಡಿಜಿಟಲ್ ಕೇಬಲ್ ವೇದಿಕೆ (ಎಐಡಿಸಿಎಫ್‌) ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮಂಡಳಿ ಈ ವಿಚಾರ ತಿಳಿಸಿತು.  

ತನ್ನ ವಾಹಿನಿ, ಸ್ಟಾರ್‌ ಸ್ಪೋರ್ಟ್ಸ್ ಪ್ರಸಾರ ಮಾಡಲು ಸ್ಟಾರ್‌, ಕೇಬಲ್ ಆಪರೇಟರ್‌ಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ತನ್ನ 'ಡಿಸ್ನಿ + ಹಾಟ್‌ಸ್ಟಾರ್' ಅಪ್ಲಿಕೇಶನನ್ನು ಉಚಿತವಾಗಿ ದೊರಕಿಸಿಕೊಡುತ್ತಿದ್ದು ಇದರಿಂದ ಗ್ರಾಹಕರಿಗೆ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಪಂದ್ಯಗಳನ್ನು ಪ್ರಸಾರ ಮಾಡದಂತೆ ನಿರ್ಬಂಧಿಸಬೇಕು ಇಲ್ಲವೇ ಟಿವಿ ವಾಹಿನಿಯನ್ನು ಉಚಿತವಾಗಿ ಒದಗಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು. ವ್ಯಾಖ್ಯಾನ ಸಮಗ್ರವಾಗಿರುವುದರಿಂದ ನಿಯಂತ್ರಣ 2 (ಆರ್‌), ಒಟಿಟಿ ವೇದಿಕೆಗಳನ್ನು ಒಳಗೊಂಡಿಲ್ಲ ಎಂದು ಸ್ಟಾರ್‌ ವಾದಿಸಿತ್ತು.

ವಾದಗಳನ್ನು ಆಲಿಸಿದ ನ್ಯಾಯಾಲಯ ಮೇಲ್ನೋಟಕ್ಕೆ ಟ್ರಾಯ್‌ ನಿಯಮಾವಳಿಗಳ ನಿಯಂತ್ರಣ 2(ಆರ್‌) ಅಡಿಯಲ್ಲಿ 'ವಿತರಣಾ ವೇದಿಕೆ' ವ್ಯಾಖ್ಯಾನಕ್ಕೆ ಒಟಿಟಿ ವೇದಿಕೆಗಳು ಒಳಪಡುವುದಿಲ್ಲ. ಅನುಕೂಲತೆಯ ಸಮಂಜಸತೆಯು (ಬ್ಯಾಲೆನ್ಸ್ ಆಫ್‌ ಕನ್ವೀನಿಯನ್ಸ್‌) ಅರ್ಜಿದಾರರ ಪರವಾಗಿ ಇಲ್ಲ ಜೊತೆಗೆ ತಡೆಯಾಜ್ಞೆ ನೀಡದಿದ್ದರೆ ಅರ್ಜಿದಾರರಿಗೆ ಸರಿಪಡಿಸಲಾಗದಂತಹ ನಷ್ಟವೇನೂ ಆಗುವುದಿಲ್ಲ ಎಂದು ಅದು ತಿಳಿಸಿತು. ಇದೇ ವೇಳೆ ಅರ್ಜಿದಾರರಿಗೆ ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿದ ಪೀಠ, ಪ್ರಕರಣವನ್ನು ಡಿಸೆಂಬರ್ 18ಕ್ಕೆ ಮುಂದೂಡಿತು.

Kannada Bar & Bench
kannada.barandbench.com