
ಅಮೆರಿಕದ ಕಾನೂನು ಸಂಸ್ಥೆ ಪರ್ಕಿನ್ಸ್ ಕೊಯಿಯನ್ನು ಗುರಿಯಾಗಿಸಿಕೊಂಡು ಡೊನಾಲ್ಡ್ ಟ್ರಂಪ್ ಆಡಳಿತ ಮಾರ್ಚ್ 6ರಂದು ಹೊರಡಿಸಿದ ಕಾರ್ಯಾಂಗ ಆದೇಶದ ವಿರುದ್ಧ ದೇಶದ 500ಕ್ಕೂ ಹೆಚ್ಚು ಕಾನೂನು ಸಂಸ್ಥೆಗಳು ಶುಕ್ರವಾರ ಅಮಿಕಸ್ ಬ್ರೀಫ್ ಸಲ್ಲಿಸಿವೆ.
ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರದ ಪಕ್ಷಕಾರರು ನ್ಯಾಯಾಲಯ ತನ್ನ ತೀರ್ಪು ನೀಡಲು ಸಹಾಯ ಮಾಡುವ ಮಾಹಿತಿ, ಪರಿಣತಿಯುಳ್ಳ ವಿಚಾರ ಅಥವಾ ಒಳನೋಟಗಳನ್ನು ಒದಗಿಸಲು ಅಮಿಕಸ್ ಕ್ಯೂರಿ ಬ್ರೀಫ್ (ನ್ಯಾಯಾಲಯಕ್ಕೆ ಸಹಾಯ ಮಾಡುವ ವಕೀಲರ ಸಂಕ್ಷಿಪ್ತ ವಿವರಣೆ) ಅನುವು ಮಾಡಿಕೊಡುತ್ತದೆ. ಈ ಸಂಕ್ಷಿಪ್ತ ವಿವರಣೆಗಳು ಉನ್ನತ ಮಟ್ಟದ ಪ್ರಕರಣಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ನೀತಿ ಅಥವಾ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಿರ್ಣಾಯಕವಾಗಿವೆ.
ಟ್ರಂಪ್ ಆದೇಶ ಪ್ರಶ್ನಿಸಿ ಸಹಿ ಮಾಡಿರುವ ಸಂಸ್ಥೆಗಳಲ್ಲಿ ಮುಂಗರ್, ಟೋಲೆಸ್ & ಓಲ್ಸನ್; ಆರ್ನಾಲ್ಡ್ & ಪೋರ್ಟರ್; ಕೋವಿಂಗ್ಟನ್ & ಬರ್ಲಿಂಗ್; ಜೆನ್ನರ್ & ಬ್ಲಾಕ್; ವಿಲ್ಮರ್ ಕಟ್ಲರ್ ಪಿಕರಿಂಗ್ ಹೇಲ್ ಅಂಡ್ ಡೊರ್ ಪ್ರಮುಖವಾದವು.
ಡೆಮಾಕ್ರಟಿಕ್ ಪಕ್ಷದ ಕಕ್ಷಿದಾರರನ್ನು 2016ರ ಚುನಾವಣೆ ವೇಳೆ ಪರ್ಕಿನ್ಸ್ ಕೊಯಿ ಪ್ರತಿನಿಧಿಸಿದ್ದಕ್ಕೆ ಸಂಬಂಧಿಸಿದ ವಿವಾದ ಇದಾಗಿದೆ. ಟ್ರಂಪ್-ರಷ್ಯಾ ತನಿಖೆಗೆ ಸಂಬಂಧಿಸಿದಂತೆ ಕಾನೂನು ಸಂಸ್ಥೆ ವಿರುದ್ಧ ಆರೋಪ ಕೇಳಿಬಂದಿತ್ತು. ಸಂಸ್ಥೆಯ ಕೆಲ ವಕೀಲರು ಸರ್ಕಾರಿ ಅಧಿಕಾರಿಗಳಿಗೆ ದಿಕ್ಕುತಪ್ಪಿಸುವ ಮಾಹಿತಿ ನೀಡಿದ್ದಾರೆ ಎಂದು ದೂರಲಾಗಿತ್ತು.
ಇಡೀ ಸಂಸ್ಥೆಯ ಬದಲು ಕೆಲ ನಿರ್ದಿಷ್ಟ ವಕೀಲರ ವಿರುದ್ಧ ಆರೋಪ ಕೇಳಿಬಂದಿದ್ದರೂ ಟ್ರಂಪ್ ಅವರು ಹೊರಡಿಸಿದ ಕಾರ್ಯಾಂಗ ಆದೇಶ ಇಡಿಯಾಗಿ ಪರ್ಕಿನ್ಸ್ ಕೊಯಿಯನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ. ಇದು ಇಡೀ ಸಂಸ್ಥೆಗೆ ವ್ಯಾಪಕ ನಿರ್ಬಂಧಗಳನ್ನು ಹೇರುತ್ತದೆ. ಸಂಸ್ಥೆಯ ವಕೀಲರಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯುತ್ತದೆ. ಸರ್ಕಾರದೊಂದಿಗಿನ ಒಪ್ಪಂದಗಳು ರದ್ದಾಗಿ ಸಂಸ್ಥೆ ಮತ್ತು ಅದರ ವಕೀಲರು ಸರ್ಕಾರಿ ಕಟ್ಟಡಗಳನ್ನು ಪ್ರವೇಶಿಸದಂತೆ ನಿರ್ಬಂಧಿಸಿದೆ ಎಂದು ಆಕ್ಷೇಪಿಸಲಾಗಿದೆ.
ಪರ್ಕಿನ್ಸ್ ಕೊಯಿ ಎಲ್‌ಎಲ್‌ಪಿ ಮತ್ತು ಅಮೆರಿಕ ನ್ಯಾಯಾಂಗ ಇಲಾಖೆ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ 500ಕ್ಕೂ ಹೆಚ್ಚು ಕಾನೂನು ಸಂಸ್ಥೆಗಳು ಸಲ್ಲಿಸಿರುವ ಅಮಿಕಸ್ ಬ್ರೀಫ್, ʼಕಾರ್ಯಾಂಗ ಆದೇಶ ಕಾನೂನು ವೃತ್ತಿಯ ಮೇಲೆ ಅಸಾಂವಿಧಾನಿಕ ದಾಳಿ ನಡೆಸಲಿದ್ದು ಕಾನೂನು ಆಳ್ವಿಕೆಗೇ ಬೆದರಿಕೆ ಹಾಕುತ್ತದೆʼ ಎಂದು ಆರೋಪಿಸಿದೆ.
ರಾಜಕೀಯ ಕಾರಣಗಳಿಗಾಗಿ ವಕೀಲರನ್ನು ಗುರಿಯಾಗಿಸಿಕೊಂಡಿರುವ ಸರ್ವಾಧಿಕಾರಿ ಸರ್ಕಾರಗಳಂತೆ ಕಾನೂನು ಸಂಸ್ಥೆಗಳ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳುವುದನ್ನು ಸಾಮಾನ್ಯಗೊಳಿಸಬಾರದು ಅದು ಎಚ್ಚರಿಕೆ ನೀಡಿದೆ.
ಇದೀಗ ಪ್ರಕರಣ ನ್ಯಾಯಾಧೀಶ ಬೆರಿಲ್ ಎ ಹೋವೆಲ್ ಅವರ ಮುಂದಿದ್ದು, ಪರ್ಕಿನ್ಸ್ ಕೊಯಿ ಕಾನೂನು ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಹೊರಡಿಸಲಾದ ಕಾರ್ಯಾಂಗ ಆದೇಶದ ವಿರುದ್ಧ ಈಗಾಗಲೇ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಆದರೆ ಶಾಶ್ವತ ತಡೆಯಾಜ್ಞೆ ನೀಡುವಂತೆ ಕಾನೂನು ಸಂಸ್ಥೆಗಳು ಮನವಿ ಮಾಡಿವೆ.