[ಆಮ್ಲಜನಕ ಸಾಂದ್ರಕ ಮುಟ್ಟುಗೋಲು] ವ್ಯಾಪಾರ ಮಾಡುವುದು ಅಪರಾಧವೇ? ಪೊಲೀಸರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ

ಮೊದಲು ಬಂಧಿಸುವ, ನಂತರ ತನಿಖೆ ಮಾಡುವ ಟ್ರೆಂಡ್ ತನಿಖಾ ಸಂಸ್ಥೆಯಲ್ಲಿ ಕಂಡು ಬರುತ್ತಿದೆ ಎಂದು ಕಿಡಿಕಿಡಿಯಾದ ನ್ಯಾಯಾಲಯ.
Oxygen Concentrator, Saket Court
Oxygen Concentrator, Saket Court

ಸರ್ಕಾರವೇ ಬೆಲೆ ನಿಯಂತ್ರಣ ಮಾಡದೆ ಇರುವಾಗ “ಅತಿ ದುಬಾರಿ ದರ”ದಲ್ಲಿ ಆಮ್ಲಜನಕ ಸಾಂದ್ರಕವನ್ನು ಮಾರುತ್ತಿದ್ದಾರೆ ಎಂದು ಖಾಸಗಿ ವ್ಯಕ್ತಿಗಳನ್ನು ಬಂಧಿಸಿದ್ದರ ಹಿಂದಿನ ತರ್ಕವನ್ನು ಕಟುವಾಗಿ ಟೀಕಿಸಿರುವ ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ಕಿವಿ ಹಿಂಡಿದೆ.

ಸಾಕೇತ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅನಿಲ್‌ ಕುಮಾರ್‌ ಗಾರ್ಗ್‌ ಅವರು ಪ್ರಕರಣದ ವಿಚಾರಣೆ ವೇಳೆ, ಪ್ರತಿಯೊಂದು ವ್ಯಾಪಾರವು “ವೆಚ್ಚ-ಲಾಭದ ತರ್ಕ”ದ ಮೇಲೆ ನಿಂತಿದ್ದು, ವ್ಯಾಪಾರ ಮಾಡುವವರೊಂದಿಗೆ ಸರ್ಕಾರವು ನ್ಯಾಯಯುತವಾಗಿ ವರ್ತಿಸಬೇಕು ಎಂದರು.

ದೆಹಲಿ ಪೊಲೀಸರು ಇತ್ತೀಚೆಗೆ ಲೋಧಿ ಕಾಲೋನಿ ಮತ್ತು ಮೆಹ್ರೌಲಿಗಳಲ್ಲಿ ದಾಳಿ ಮಾಡಿ ಮ್ಯಾಟ್ರಿಕ್ಸ್‌ ಸೆಲ್ಯುಲರ್ ಸಂಸ್ಥೆಯು ಮಾರಾಟಕ್ಕೆ ಸಂಗ್ರಹಿಸಿರಿಸಿದ್ದ ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್‌ ಕಾನ್ಸಂಟ್ರೇಟರ್ಸ್‌) ಜಪ್ತಿ ಮಾಡುವುದರ ಜೊತೆಗೆ ಗೌರವ್ ಸೂರಿ, ಗೌರವ್‌ ಖನ್ನಾ ಹಾಗೂ ಇತರ ಉದ್ಯೋಗಿಗಳನ್ನು ಬಂಧಿಸಿತ್ತು. ಈ ಸಂಬಂಧ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು.

ವಿಚಾರಣೆ ವೇಳೆ ನ್ಯಾಯಾಲಯವು, “ಸರ್ಕಾರವು ಬೆಲೆಯನ್ನು ನಿಯಂತ್ರಿಸಿಲ್ಲ. ಹೀಗಿರುವಾಗ ಬೇಡಿಕೆ ಮತ್ತು ಪೂರೈಕೆಯ ಶಕ್ತಿಗಳು ಇದಕ್ಕೆ ಅನ್ವಯವಾಗದೆ ಇರುತ್ತವೆಯೇ? ಸರ್ಕಾರವು ಇದನ್ನು ಮರೆತಿದೆಯೇ? ವ್ಯಾಪಾರ ಮಾಡುವುದು ಅಪರಾಧವೇ?” ಎಂದು ಪ್ರಶ್ನಿಸಿತು.

Also Read
ಕಾನೂನುಬದ್ಧವಾಗಿಯೇ ಆಮ್ಲಜನಕ ಸಾಂದ್ರಕ ಮಾರಾಟ: ದೆಹಲಿ ಹೈಕೋರ್ಟ್‌ಗೆ ಮ್ಯಾಟ್ರಿಕ್ ಸೆಲ್ಯುಲಾರ್ ವಿವರಣೆ

“ಸರ್ಕಾರವು ನ್ಯಾಯಸಮ್ಮತವಾಗಿರಬೇಕು. ನಾವು ಈಗಲೂ ಮದ್ಯವನ್ನು ಮಾರಾಟ ಮಾಡುತ್ತಿದ್ದೇವಲ್ಲಾ… ಅವರು (ಆರೋಪಿಗಳು) 7.5 ಸಾವಿರ ಸಾಂದ್ರಕಗಳನ್ನು ತಂದಿದ್ದಾರೆ. ಅದನ್ನು ಕೆಲವರು ಕೊಳ್ಳುವವರೂ ಇದ್ದಾರೆ. ಈಗ ನೋಡಿದರೆ ಎಲ್ಲವೂ ಇಲ್ಲಿ ಹೀಗೆ ಬಿದ್ದಿದೆ,” ಎಂದು ಸರ್ಕಾರದ ಧೋರಣೆಯ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.

ಮುಂದುವರೆದು, “ಸರ್ಕಾರದ ಕೆಲಸ ಭಯೋತ್ಪಾದಕರ ಕೆಲಸವಲ್ಲ. ನೀವು ಕಾನೂನು ಪ್ರಕ್ರಿಯೆಯ ಅನ್ವಯ ಸಾಗಬೇಕು… ಬಹುಶಃ ನಿಮಗೆ ಕಾನೂನಿನ ಪಾಲನೆ ಇಷ್ಟವಿಲ್ಲವೆನಿಸುತ್ತದೆ… ನೀವು ಜನರನ್ನು ಹೀಗೆ ಹಿಂಸಿಸಬಹುದೇ?” ಎಂದು ಪ್ರಶ್ನಿಸಿತು. ನ್ಯಾಯಾಲವು ಸಕ್ಷಮ ಪ್ರಾಧಿಕಾರಗಳು ರೂಪಿಸಿರುವ ಕಾನೂನುಗಳನ್ನು ಪಾಲಿಸಬೇಕಿದ್ದು, ಪ್ರಸ್ತುತ ಸಂದರ್ಭದಲ್ಲಿ ಆಮ್ಲಜನಕ ಸಾಂದ್ರಕಗಳ ಬೆಲೆಯನ್ನು ಮಿತಿಗೊಳಿಸುವ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯ ತಿಳಿಸಿತು.

ಇದೇ ಸಂದರ್ಭದಲ್ಲಿ, ಅಕ್ರಮ ಮತ್ತು ಅನೈತಿಕತೆಯ ಬಗ್ಗೆ ನ್ಯಾಯಾಲಯ ಹೀಗೆ ಹೇಳಿತು, “ಅಕ್ರಮ ಮತ್ತು ಅನೈತಿಕತೆಗಳು ಎರಡು ಬೇರೆಬೇರೆ ಸಂಗತಿಗಳು. ನಾನು ಇಲ್ಲಿ ಅಕ್ರಮವಾಗಿರುವುದನ್ನು ಗಮನಿಸಬೇಕು. ಏಕೆಂದರೆ, ನಾನು ಇಲ್ಲಿ ಪಿಐಎಲ್‌ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಅಲಿಸುತ್ತಿಲ್ಲ,” ಎಂದು ಅದು ಪ್ರಕರಣದ ನ್ಯಾಯಿಕ ಮಿತಿಯನ್ನು ಸೂಚಿಸಿತು. ಅಲ್ಲದೆ, ಇದೇ ವೇಳೆ ದೆಹಲಿ ಹೈಕೋರ್ಟ್‌ ಆಕ್ಸಿಜನ್‌ ಸಿಲಿಂಡರ್‌ಗಳ ಬೆಲೆಯನ್ನು ನಿಯಂತ್ರಿಸಲು ನಿರ್ದೇಶಿಸಿ ಹೊರಡಿಸಿದ ಆದೇಶದ ಬಗ್ಗೆಯೂ ಗಮನಸೆಳೆಯಿತು.

“ನ್ಯಾಯಾಲಯವು (ಹೈಕೋರ್ಟ್‌) ಜನರನ್ನು ಜೈಲಿಗೆ ತಳ್ಳಿ ಎಂದು ಹೇಳಲಿಲ್ಲ. ಹೀಗೆ ಮಾಡುವುದರಿಂದ ನೀವು ಹೈಕೋರ್ಟ್‌ ಅನ್ನು ಸಂಪ್ರೀತಗೊಳಿಸಲು ಸಾಧ್ಯವಿಲ್ಲ. ಹೈಕೋರ್ಟ್‌ ಪ್ರತಿದಿನವೂ ನಿಮಗೆ (ಬೆಲೆ) ನಿಯಂತ್ರಿಸಿ ಎಂದು ಹೇಳುತ್ತಿದೆ, ಅದರೆ ನೀವು ಅದನ್ನು ಮಾಡಿಲ್ಲ…” ಎಂದು ಚಾಟಿ ಬೀಸಿತು.

ಅರೋಪಿಗಳೆಲ್ಲರೂ ಅಕ್ರಮವಾಗಿ ಹಣ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ನಂಬಿಸಿ, “ಸಂಚು ರೂಪಿಸಿ” ಆಮದು ಮಾಡಿಕೊಂಡಿರುವ ಆಮ್ಲಜನಕ ಸಾಂದ್ರಕಗಳನ್ನು “ದುಬಾರಿ ಬೆಲೆ”ಗೆ ಮಾರುತ್ತಿದ್ದಾರೆ ಎನ್ನುವುದು ಪ್ರಾಸಿಕ್ಯೂಷನ್‌ ವಾದವಾಗಿತ್ತು. ಆದರೆ, ಈ ಕುರಿತು ಮೌಖಿಕವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, ಎಲ್ಲ ಸಾಂದ್ರಕಗಳನ್ನೂ ಸೂಕ್ತ ಕಸ್ಟಮ್‌ ತೆರಿಗೆ ಪಾವತಿಸುವ ಮೂಲಕವೇ ಅಮದು ಮಾಡಿಕೊಳ್ಳಲಾಗಿದೆ. ಮಾರಾಟವನ್ನು ಮೊಬೈಲ್‌ ಅಪ್ಲಿಕೇಷನ್ ಮೂಲಕ ಮಾಡಲಾಗಿದೆ. ಎಲ್ಲವನ್ನೂ ಇನ್ವಾಯ್ಸ್‌ಗಳ‌ (ಬೆಲೆಪಟ್ಟಿ) ಮುಖಾಂತರವೇ ಮಾರಾಟ ಮಾಡಿದ್ದು, ಜಿಎಸ್‌ಟಿ ಹಾಕಲಾಗಿದೆ ಎನ್ನುವ ಅರ್ಜಿದಾರರ ವಾದವನ್ನು ಪ್ರಾಸಿಕ್ಯೂಷನ್‌ಗೆ ಅಲ್ಲಗೆಳೆಯಲಾಗಿಲ್ಲ ಎಂದಿತು. ‌ ಮುಂದುವರೆದು, ಈಚಿನ ದಿನಗಳಲ್ಲಿ ಮೊದಲು ಬಂಧಿಸಿ ನಂತರ ತನಿಖೆ ನಡೆಸುವ ಪರಿಪಾಠವನ್ನು (ಟ್ರೆಂಡ್‌) ತನಿಖಾ ಸಂಸ್ಥೆಗಳು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿತು.

ಆಮ್ಲಜನಕ ಸಾಂದ್ರಕಗಳು “ಚೈನಾ ಮಾಲು” ಅಗಿರುವುದರಿಂದ ಅವುಗಳ ಸಾಚಾತನ ಹಾಗೂ ದಕ್ಷತೆಯನ್ನು ಅರಿಯಲು ಎರಡು ಸಾಂದ್ರಕಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎನ್ನುವ ಪ್ರಾಸಿಕ್ಯೂಷನ್‌ ವಾದವನ್ನೂ ಸಹ ನ್ಯಾಯಾಲಯ ತಳ್ಳಿಹಾಕಿತು. ಒಂದು ವೇಳೆ ಅವುಗಳ ಗುಣಮಟ್ಟ ಪ್ರಶ್ನಾರ್ಹವಾಗಿದೆ ಎಂದರೆ ಅವುಗಳನ್ನು ಏಕೆ ಅಮದು ಮಾಡಿಕೊಳ್ಳುವುದರಿಂದ ತಡೆಯಲಾಗಿಲ್ಲ ಎಂದು ಪ್ರಾಸಿಕ್ಯೂಷನ್‌ಗೆ ಚುರುಕು ಮುಟ್ಟಿಸಿತು.

”ನಾವು (ಸರ್ಕಾರದ) ನೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನೀವೇಕೆ ನೀತಿನಿಯಮದ ವಿರುದ್ಧ ವಾದಿಸುತ್ತಿದ್ದೀರಿ. ಸರ್ಕಾರವು ಹೇಳಿದರೆ ಅದು ಸಾಚಾ… ಖಾಸಗಿ ವ್ಯಕ್ತಿಗಳು ಮಾಡಿದರೆ ಕಳಪೆಯೇ…” ಎಂದು ತರಾಟೆಗೆ ತೆಗೆದುಕೊಂಡಿತು.

“ಎಫ್‌ಐಆರ್‌ ಕಡ್ಡಾಯವೇ ಹೊರತು, ಬಂಧನವಲ್ಲ. ತನಿಖೆಯು ಯೋಜನಾಬದ್ಧವಾಗಿರಬೇಕೇ ಹೊರತು ಇನ್ನೊಬ್ಬರನ್ನು ಬೆದರಿಸುವುದಕ್ಕೆ ಮೂಲವಾಗಬಾರದು” ಎಂದು ಇದೇ ವೇಳೆ ಪೊಲೀಸರಿಗೆ ತಿಳಿಹೇಳಿತು. “ಸತ್ಯವನ್ನು ನಿರ್ಮಮಕಾರದಿಂದ ನೋಡಲು” ತನಿಖಾ ಸಂಸ್ಥೆಗೆ ಸೂಚಿಸಿದ ನ್ಯಾಯಾಲಯವು, “ನೀವು ಮತ್ತೊಬ್ಬರ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗದು.. ಇದನ್ನು ಕಾಪಾಡಲೆಂದೇ ನ್ಯಾಯಾಲಯಗಳು ಇರುವುದು,” ಎಂದು ತಿಳಿಸಿತು.

ಜಾಮೀನಿಗೆ ಸಂಬಂಧಿಸಿದ ಆದೇಶವನ್ನು ನ್ಯಾಯಾಲಯ ನಾಳೆ ನೀಡಲಿದೆ.

Related Stories

No stories found.
Kannada Bar & Bench
kannada.barandbench.com