ಜನ ಸಾಯಬೇಕೆಂದು ಬಯಸಿದ್ದೀರಾ? ಆಮ್ಲಜನಕ ಕೋಟಾ ಯಾವಾಗ ಹೆಚ್ಚಿಸಲಿದ್ದೀರಿ ಹೇಳಿ: ಕೇಂದ್ರಕ್ಕೆ ಚಾಟಿ ಬೀಸಿದ ಹೈಕೋರ್ಟ್‌

ರಾಜ್ಯದಲ್ಲಿ ಆಮ್ಲಜನಕದ ಬೇಡಿಕೆಯ ಪ್ರಮಾಣ 1,792 ಮೆಟ್ರಿಕ್ ಟನ್ ಇದ್ದು ಕೇಂದ್ರ ಸರ್ಕಾರವು ಕೇವಲ 802ರಿಂದ 865 ಮೆಟ್ರಿಕ್‌ ಟನ್‌ಗೆ ಪೂರೈಕೆಯನ್ನು ಹೆಚ್ಚಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.‌
Oxygen Cylinders, Karnataka High Court
Oxygen Cylinders, Karnataka High Court

ಕೋವಿಡ್‌ ಪ್ರಕರಣಗಳ ಹೆಚ್ಚಳ ಮತ್ತು ಮರಣ ಪ್ರಮಾಣ ಏರುತ್ತಿರುವುದರ ನಡುವೆಯೂ ಕರ್ನಾಟಕಕ್ಕೆ ಆಮ್ಲಜನಕ ಪೂರೈಸುವಲ್ಲಿ ಬದ್ಧತೆ ತೋರದ ಕೇಂದ್ರ ಸರ್ಕಾರದ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತೀವ್ರ ಕಿಡಿ ಕಾರಿದೆ.

ರಾಜ್ಯಕ್ಕೆ 1,792 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿದ್ದರೂ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಕೆಯನ್ನು ಕೇವಲ 802ರಿಂದ 865 ಮೆಟ್ರಿಕ್‌ ಟನ್‌ಗೆ ಮಾತ್ರ ಏರಿಕೆ ಮಾಡಿದೆ ಎಂದು ಪೀಠಕ್ಕೆ ಮಂಗಳವಾರ ಮಾಹಿತಿ ನೀಡಲಾಯಿತು.

ಈ ವೇಳೆ, ಕೇಂದ್ರ ಸರ್ಕಾರದ ಈ ಧೋರಣೆಯನ್ನು ತೀವ್ರವಾಗಿ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಹಾಗೂ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಪೀಠವು, “ ಇನ್ನೂ ಎಷ್ಟು ಜನ ಸಾಯಬೇಕು? ಎರಡು ದಿನಗಳ ನಂತರ ನೀವು ಆಮ್ಲಜನಕವನ್ನು ಹೆಚ್ಚಿಸಲಿದ್ದೀರಾ? ಎಲ್ಲಿ ಕಡಿಮೆ ಪ್ರಕರಣಗಳಿವೆಯೇ ಅಲ್ಲಿ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತಿದೆ. ಇದಕ್ಕೆ ಏನಾದರೂ ಸಮರ್ಥನೆ ಇದೆಯಾ? ಹೇಳಿ, ಯಾವಾಗ ಕೋಟಾವನ್ನು ಹೆಚ್ಚಿಸುತ್ತೀರಿ… ಜನ ಸಾಯಬೇಕು ಎಂದು ನೀವು ಬಯಸುತ್ತೀರೇನು?” ಎಂದು ಕಠಿಣವಾಗಿ ಪ್ರಶ್ನಿಸಿತು.

ಈ ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಸಂಬಂಧ ಬುಧವಾರ ಸಭೆ ನಡೆಸಲಿದ್ದೇವೆ ಎಂದು ಕೇಂದ್ರದ ಪರ ವಕೀಲರು ತಿಳಿಸಿದರು. ಇದರಿಂದ ತೃಪ್ತಗೊಳ್ಳದ ಪೀಠವು, “ಕುಮಾರ್ (ಕೇಂದ್ರ ಸರ್ಕಾರದ ವಕೀಲರು) ನೀವು ಹೇಳಿಕೆಯನ್ನು ನೀಡಲು ಸಾಧ್ಯವಾಗದೆ ಇರುವುದು ತುಂಬಾ ದುರದೃಷ್ಟಕರ. ಹಾಸಿಗೆಗಳು ಇಲ್ಲ ಎನ್ನುವ ಕಾರಣಕ್ಕೆ ಆಸ್ಪತ್ರೆಗಳು ರೋಗಿಗಳನ್ನು ದಾಖಲಾತಿ ಮಾಡಿಕೊಳ್ಳುತ್ತಿಲ್ಲ,” ಎಂದು ಅಸಮಧಾನ ವ್ಯಕ್ತಪಡಿಸಿತು. ಮುಂದುವರೆದು, "ಇಂದು ನೀವು ಹೇಗೆ ಆಮ್ಲಜನಕ ಒದಗಿಸುತ್ತೀರಿ ಎಂದು ಹೇಳಿ? ಇಂದು ನೀವು ಅದನ್ನು ಹೆಚ್ಚಿಸಬೇಕು. ಇಲ್ಲದೆ ಹೋದರೆ ಜನ ಸಾಯುತ್ತಾರೆ” ಎಂದಿತು.

ತದನಂತರ, “ಕೇಂದ್ರದ ಪರ ವಕೀಲರು ಸಭೆಯನ್ನು ನಡೆಸದೆ ಯಾವುದೇ ಹೇಳೀಕೆಯನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ,” ಎಂದು ಪೀಠವು ದಾಖಲಿಸಿತು.

ಇನ್ನೂ ಎಷ್ಟು ಜನ ಸಾಯಬೇಕು? ಎರಡು ದಿನಗಳ ನಂತರ ನೀವು ಆಮ್ಲಜನಕವನ್ನು ಹೆಚ್ಚಿಸಲಿದ್ದೀರಾ? ಎಲ್ಲಿ ಕಡಿಮೆ ಪ್ರಕರಣಗಳಿವೆಯೇ ಅಲ್ಲಿ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತಿದೆ. ಇದಕ್ಕೆ ಏನಾದರೂ ಸಮರ್ಥನೆ ಇದೆಯಾ? ಹೇಳಿ, ಯಾವಾಗ ಕೋಟಾವನ್ನು ಹೆಚ್ಚಿಸುತ್ತೀರಿ… ಜನ ಸಾಯಬೇಕು ಎಂದು ನೀವು ಬಯಸುತ್ತೀರೇನು?

ಕರ್ನಾಟಕ ಹೈಕೋರ್ಟ್‌

ವಿಚಾರಣೆ ವೇಳೆ ಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿತು:

  • ಆಮ್ಲಜನಕದ ಕೋಟಾವನ್ನು ಹೆಚ್ಚಿಸುವ ಬಗ್ಗೆ ಕೇಂದ್ರವು ಪರಿಶೀಲಿಸಬೇಕು ಮತ್ತು ಈ ಕುರಿತು ನಾಳೆ ನ್ಯಾಯಾಲಯಕ್ಕೆ ತಿಳಿಸಬೇಕು;

  • ವಿವಿಧ ನಗರಗಳಿಗೆ ಆಮ್ಲಜನಕವನ್ನು ಹಂಚುವ ಕುರಿತು ಪ್ರಸಕ್ತ ಇರುವ ಮಾರ್ಗಸೂಚಿಯನ್ನು ದಾಖಲೆಯ ರೂಪದಲ್ಲಿ ಸರ್ಕಾರವು ಸಲ್ಲಿಸಬೇಕು;

  • ಆಮ್ಲಜನಕ ಮುಗಿವ ಸಂದರ್ಭದಲ್ಲಿ ತಕ್ಷಣ ಆಮ್ಲಜನಕದ ಬಿಡುಗಡೆಗೆ ಅಗ್ರಹಿಸಿ ಆಸ್ಪತ್ರೆಯೊಂದು ಮನವಿ ಸಲ್ಲಿಸಲು ಸದ್ಯ ಯಾವುದಾದರೂ ವ್ಯವಸ್ಥೆ ಇದೆಯೇ ಎನ್ನುವುದನ್ನು ತಿಳಿಸಬೇಕು.

ಇದೇ ವೇಳೆ, ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್‌ ಔಷಧ ಬೇಡಿಕೆಯ ಪ್ರಮಾಣವು ಏಪ್ರಿಲ್‌ 30 ರಂತೆ 35 ಸಾವಿರ ವಯಲ್‌ಗಳಿದ್ದರೆ, ಪೂರೈಕೆಯು ಕೇವಲ 15,800 ಮಾತ್ರವೇ ಇದೆ ಎನ್ನುವುದನ್ನು ಸಹ ಪೀಠವು ಗಮನಿಸಿತು. “ಅಗತ್ಯವಿರುವ ಶೇ.೫೦ರಷ್ಟು ಸಹ ರೆಮ್‌ಡಿಸಿವಿರ್‌ ರಾಜ್ಯಕ್ಕೆ ದೊರೆಯುತ್ತಿಲ್ಲ,” ಎಂದ ಪೀಠವು ಈ ವಿಷಯವಾಗಿ ಬುಧವಾರ ವಿವರವಾದ ಆದೇಶವನ್ನು ಹೊರಡಿಸುವುದಾಗಿ ತಿಳಿಸಿತು.

Related Stories

No stories found.
Kannada Bar & Bench
kannada.barandbench.com