ತಮ್ಮದೇ ಪಕ್ಷದ ನಾಯಕ ಹೂಡಿದ್ದ ಪಿಐಎಲ್ ವಿರುದ್ಧ ಹಿರಿಯ ವಕೀಲ, ಕಾಂಗ್ರೆಸ್ ನೇತಾರ ಚಿದಂಬರಂ ವಾದ: ವಕೀಲರ ಪ್ರತಿಭಟನೆ

“ನಿಮ್ಮಂತಹವರ ನಾಯಕತ್ವದಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸೊರಗಿದೆ. ಟಿಎಂಸಿಯ ಲೂಟಿಕೋರರನ್ನು ಉಳಿಸಲು ನೀವು ಇಲ್ಲಿದ್ದೀರಿ" ಎಂದು ವಕೀಲರು ಚಿದಂಬರಂ ವಿರುದ್ಧ ಕೂಗು ಹಾಕುತ್ತಿರುವುದು ವೀಡಿಯೊದಲ್ಲಿ ಚಿತ್ರಿತವಾಗಿದೆ.
ತಮ್ಮದೇ ಪಕ್ಷದ ನಾಯಕ ಹೂಡಿದ್ದ ಪಿಐಎಲ್ ವಿರುದ್ಧ ಹಿರಿಯ ವಕೀಲ, ಕಾಂಗ್ರೆಸ್ ನೇತಾರ ಚಿದಂಬರಂ ವಾದ: ವಕೀಲರ ಪ್ರತಿಭಟನೆ

ಕಾಂಗ್ರೆಸ್ ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ಮತ್ತು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ವಿರುದ್ಧ ಕಾಂಗ್ರೆಸ್‌ಗೆ ಸೇರಿದ ವಕೀಲರ ಗುಂಪೊಂದು ಕಲ್ಕತ್ತಾ ಹೈಕೋರ್ಟ್‌ನ ಹೊರಗೆ ಬುಧವಾರ ಪ್ರತಿಭಟನೆ ನಡೆಸಿತು.

ತಮ್ಮದೇ ಪಕ್ಷದ ನಾಯಕನ ಮನವಿ ವಿರೋಧಿಸಿದ್ದಕ್ಕಾಗಿ ವಕೀಲರು ಚಿದಂಬರಂ ವಿರುದ್ಧ ಘೋಷಣೆ ಕೂಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಿದಂಬರಂ ವಿರುದ್ಧ ವಕೀಲರೊಬ್ಬರು 'ಗೋ ಬ್ಯಾಕ್' ಎಂದು ಕೂಗುತ್ತಿರುವುದು ಕಂಡುಬಂದರೆ, ಮತ್ತೊಬ್ಬ ವಕೀಲರು ಮಾಜಿ ವಿತ್ತ ಸಚಿವರನ್ನು "ತೃಣಮೂಲ ಕಾಂಗ್ರೆಸ್‌ನ ಗೂಂಡಾ" ಎಂದು ತೀವ್ರ ವಾಗ್ದಾಳಿ ನಡೆಸಿದರು.

Also Read
ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಖುದ್ದು ಹಾಜರಾತಿಯಿಂದ ಚಿದಂಬರಂ, ಕಾರ್ತಿಗೆ ವಿನಾಯಿತಿ ನೀಡಿದ ದೆಹಲಿ ನ್ಯಾಯಾಲಯ

“ನಿಮ್ಮಂತಹವರ ನಾಯಕತ್ವದಿಂದಾಗಿಯೇ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಸೊರಗಿದೆ. ಟಿಎಂಸಿಯ ಲೂಟಿಕೋರರನ್ನು ಉಳಿಸಲು ನೀವು ಇಲ್ಲಿದ್ದೀರಿ. . ಅವರು ಸಾರ್ವಜನಿಕ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಟಿಎಂಸಿಯನ್ನು ಉಳಿಸುತ್ತಿದ್ದೀರಿ ... ನೀವು ಟಿಎಂಸಿಯ ದಲಾಲ್ (ದಲ್ಲಾಳಿ) ಆಗಿದ್ದೀರಿ. ದಲಾಲಿ ಕಿ ಭೀ ಹಾಡ್ ಹೋತಿ ಹೈ...ನೀವು ಮಮತಾ ಬ್ಯಾನರ್ಜಿಯ ದಲಾಲ್” ಎಂದು ವಕೀಲರು ಅರಚುವುದನ್ನು ವೀಡಿಯೊದಲ್ಲಿ ಕಾಣಬಹುದು.

ಅಧೀರ್ ರಂಜನ್ ಚೌಧರಿ ಮತ್ತು ಕೆವೆಂಟರ್ ಆಗ್ರೋ ಲಿಮಿಟೆಡ್ ನಡುವಣ ಪ್ರಕರಣದಲ್ಲಿ ಪಿ ಚಿದಂಬರಂ ಕೆವೆಂಟರ್‌ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೆಟ್ರೊ ಡೈರಿಯಿಂದ ಪಶ್ಚಿಮ ಬಂಗಾಳ ಸರ್ಕಾರ ಬಂಡವಾಳ ಹಿಂಪಡೆದದ್ದಕ್ಕೆ ಸಂಬಂಧಿಸಿದ ಪ್ರಕರಣ ಇದು. ಶೇ 47ರಷ್ಟು ಷೇರು ಹೊಂದಿದ್ದ ಸರ್ಕಾರ ಮೆಟ್ರೊ ಡೈರಿಯನ್ನು ಕೆವೆಂಟರ್‌ಗೆ 2017ರಲ್ಲಿ ಮಾರಾಟ ಮಾಡಿತ್ತು. ಹರಾಜಿನಲ್ಲಿ ಕೆವೆಂಟರ್‌ ಏಕೈಕ ಬಿಡರ್‌ ಆಗಿತ್ತು.

ಮೆಟ್ರೊ ಡೈರಿಯ ಒಡೆತನ ಹೊಂದಿದ ಬಳಿಕ ಕೆವೆಂಟರ್‌ ಮತ್ತೊಂದು ಸಂಸ್ಥೆಗೆ ಶೇ 15 ರಷ್ಟು ಪಾಲನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದೆ ಎಂದು ಆರೋಪಿಸಿದ್ದ ಚೌಧರಿ ಪ್ರಕರಣವನ್ನು ಸಿಬಿಐಗೆ ಒತ್ತಾಯಿಸಬೇಕೆಂದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Stories

No stories found.