ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಗೋಣಿ ಚೀಲಗಳಲ್ಲಿ (ಸೆಣಬಿನ ಚೀಲ-ಜೂಟ್ ಬ್ಯಾಗ್) ಪ್ಯಾಕಿಂಗ್ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಗುರುವಾರ ರದ್ದುಪಡಿಸಿದೆ.
ಕೇಂದ್ರ ಸರ್ಕಾರವು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸೆಪ್ಟೆಂಬರ್ 24ರಂದು ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿಅರವಿಂದ್ ಅವರ ವಿಭಾಗೀಯ ಪೀಠ ಗುರುವಾರ ಪ್ರಕಟಿಸಿತು.
ವಿಶೇಷ ಆಧಾರ ಅಥವಾ ಸಂದರ್ಭ ಇಲ್ಲದ ಹೊರತು ಮಧ್ಯಂತರ ಆದೇಶ ಮಾಡಲಾಗದು. ಹಾಲಿ ಸಂದರ್ಭದಲ್ಲಿ ಅಂಥ ವಿಶೇಷ ಸಂದರ್ಭ ಯಾವುದೂ ಕಾಣುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರದ ಅಧಿಸೂಚನೆಗೆ ತಡೆ ನೀಡುವ ಮೂಲಕ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು ಕೇಂದ್ರ ಸರ್ಕಾರದ ಅಧಿಸೂಚನೆಯು ನೀತಿಯ ಭಾಗವಾದ ನಿರ್ಧಾರವಾಗಿದ್ದು, ಅದು ಆಡಳಿತಾತ್ಮಕ ನಡೆಯಾಗಿದೆ. ಗೋಣಿ ಚೀಲದಿಂದ ವಸ್ತುಗಳ ಪ್ಯಾಕೇಜಿಂಗ್ (ಪ್ಯಾಕೇಜಿಂಕ್ ವಸ್ತುಗಳಲ್ಲಿ ಕಡ್ಡಾಯ ಬಳಕೆ) ಕಾಯಿದೆ ಅನ್ವಯ ಅಧಿಸೂಚನೆ ಹೊರಡಿಸಲಾಗಿದೆ. 2023ರ ಮೇ 26ರಂದು ಸ್ಥಾಯಿ ಸಲಹಾ ಸಮಿತಿಯ (ಎಸ್‌ಎಸಿ) 31ನೇ ಸಭೆ ನಡೆದಿದ್ದು, ಅಲ್ಲಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಸಲಹೆ ಕೇಳಿ ಅವುಗಳನ್ನು ಪರಿಗಣಿಸಲಾಗಿದೆ. ಗೋಣಿ ಚೀಲ ಪೂರೈಕೆ ವಿಚಾರವನ್ನು ಪರಿಶೀಲಿಸಲಾಗಿದೆ. ಸಲಹಾ ಸಮಿತಿಯ ಶಿಫಾರಸ್ಸಿನಿಂತೆ ಆಕ್ಷೇಪಾರ್ಹವಾದ ಅಧಿಸೂಚನೆಯನ್ನು ಸರ್ಕಾರದ ಹೊರಡಿಸಿದೆ. ಶೇ.20ರಷ್ಟು ಸಕ್ಕರೆಯನ್ನು ಗೋಣಿ ಚೀಲದಲ್ಲಿ ಪ್ಯಾಕ್ ಮಾಡಬೇಕು ಎಂದು ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಸಲಹಾ ಸಮಿತಿಯು ತಜ್ಞರ ಸಮಿತಿಯಾಗಿದ್ದು, ವಸ್ತುವನ್ನು ಆಧರಿಸಿ ಅದು ನಿರ್ಧಾರ ಕೈಗೊಳ್ಳುತ್ತದೆ. ಇದರ ಅನ್ವಯ ಅಧಿಸೂಚನೆ ಹೊರಡಿಸಲಾಗಿದ್ದು, ಇದರ ಕುರಿತಾದ ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯು ಸೀಮಿತವಾಗಿದೆ “ ಎಂದರು.
ಮೂಲ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್ ಹೊಳ್ಳ ಅವರು ಸ್ಥಾಯಿ ಸಲಹಾ ಸಮಿತಿಯು ಗೋಣಿ ಚೀಲದ ಲಭ್ಯತೆಯನ್ನು ಪರಿಶೀಲಿಸಿಲ್ಲ. ರಾಸಾಯನಿಕ ಮತ್ತು ಸಿಮೆಟ್ ಅನ್ನು ಗೋಣಿ ಚೀಲದಲ್ಲಿ ತುಂಬುವುದಕ್ಕೆ ವಿನಾಯಿತಿ ನೀಡಲಾಗಿದೆ. ತಾಂತ್ರಿಕ ಸುಧಾರಣೆ ಮತ್ತು ಉತ್ಪನ್ನಗಳ ಪ್ರತ್ಯೇಕತೆ ವಿಚಾರದಲ್ಲಿ ಗೋಣಿ ಚೀಲವು ತಡೆಯಾಗಿ ಪರಿಣಮಿಸಿದೆ. ಕೇಂದ್ರ ಗೋಣಿಚೀಲ ಕಡ್ಡಾಯಗೊಳಿಸಿರುವುದರಿಂದ ಆ ಉತ್ಪನ್ನಕ್ಕೆ ಬೇಡಿಕೆ ಬಂದಿರಬಹುದು. ಸಕ್ಕರೆ ಭಾರಿ ಬೇಡಿಕೆಯಿದ್ದು, ಗೋಣಿ ಚೀಲ ಬಳಕೆಯ ಕಡ್ಡಾಯಗೊಳಿಸಿದರೆ ಸಕ್ಕರೆ ಉತ್ಪಾದನೆ ಖರ್ಚು ಹೆಚ್ಚಾಗಲಿದೆ. ಹೀಗಾಗಿ, ಗೋಣಿಚೀಲ ಬಳಕೆ ಅನಗತ್ಯ ಮತ್ತು ಅಕ್ರಮ ಎಂದರು.
ಇಂಡಿಯನ್ ಷುಗರ್ ಮಿಲ್ಸ್ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಸ್ಥಾಯಿ ಸಲಹಾ ಸಮಿತಿ ಹೊರತುಪಡಿಸಿ ಬೇರಾರಿಗೂ ಸಕ್ಕರೆಯನ್ನು ಗೋಣಿ ಚೀಲದಲ್ಲಿ ತುಂಬುವುದು ಬೇಕಿಲ್ಲ. ಗೋಣಿ ಚೀಲದಲ್ಲಿ ಸಕ್ಕರೆ ತುಂಬುವುದು ಸರಿಯಲ್ಲ ಎಂದು ಎಲ್ಲಾ ಸಂಶೋಧನೆಗಳು ಹೇಳಿವೆ. ತೇವಾಂಶ ಹೀರಿಕೊಳ್ಳುವುದು, ಆರೋಗ್ಯ ಪರಿಗಣನೆ ಮತ್ತು ಗೋಣಿಚೀಲದ ತೂಕ ಮಹತ್ವದ್ದಾಗಿದ್ದು, ಇದ್ಯಾವುದನ್ನೂ ಸ್ಥಾಯಿ ಸಮತಿ ಪರಿಗಣಿಸಿಲ್ಲ ಎಂದಿದ್ದರು.
ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಗೋಣಿ ಚೀಲಗಳಲ್ಲಿ ಪ್ಯಾಕಿಂಗ್ ಮಾಡಬೇಕು ಎಂದು ಕೇಂದ್ರ ಜವಳಿ ಸಚಿವಾಲಯ 2023ರ ಡಿಸೆಂಬರ್ 26 ಹಾಗೂ 2024ರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸೌತ್ ಇಂಡಿಯನ್ ಶುಗರ್ಸ್ ಮಿಲ್ಸ್ ಅಸೋಸಿಯೇಷನ್-ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕೇಂದ್ರ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿ ಸೆಪ್ಟಂಬರ್ 5ರಂದು ಆದೇಶ ಹೊರಡಿಸಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತ್ತು.