ಐಪಿಎಸ್ ಮತ್ತಿತರ ಪರೀಕ್ಷೆ: ಗಡುವು ಮುಗಿದಿದ್ದರೂ ಅರ್ಜಿ ಸಲ್ಲಿಸಲು ವಿಕಲ ಚೇತನರಿಗೆ ಸುಪ್ರೀಂ ಕೋರ್ಟ್‌ ಅವಕಾಶ

ಏಪ್ರಿಲ್ 1, 2022 ರಂದು ಅಥವಾ ಅದಕ್ಕಿಂತ ಮೊದಲು ಅರ್ಜಿದಾರರು ಮತ್ತು ಅದೇ ರೀತಿ ಅಂಗವೈಕಲ್ಯಕ್ಕೆ ತುತ್ತಾಗಿರುವ ಅಭ್ಯರ್ಥಿಗಳು ಸಲ್ಲಿಸುವ ಅರ್ಜಿಯ ಹಾರ್ಡ್ಕಾಪಿಗಳನ್ನು ಸ್ವೀಕರಿಸುವಂತೆ ಯುಪಿಎಸ್ಸಿಗೆ ನ್ಯಾಯಾಲಯ ನಿರ್ದೇಶನ ನೀಡಿತು.
ಐಪಿಎಸ್ ಮತ್ತಿತರ ಪರೀಕ್ಷೆ: ಗಡುವು ಮುಗಿದಿದ್ದರೂ ಅರ್ಜಿ ಸಲ್ಲಿಸಲು ವಿಕಲ ಚೇತನರಿಗೆ ಸುಪ್ರೀಂ ಕೋರ್ಟ್‌ ಅವಕಾಶ
A1
Published on

ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ರೈಲ್ವೆ ರಕ್ಷಣಾ ಪಡೆ ಸೇವೆ (IRPFS) ಮತ್ತು ದೆಹಲಿ, ದಮನ್‌ - ದಿಯು, ದಾದ್ರಾ - ನಗರ್ ಹವೇಲಿ, ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಪೊಲೀಸ್ ಸೇವೆಗಳ (DANIPS) ಪರೀಕ್ಷೆಗೆ ಗಡುವು ಮೀರಿದ್ದರೂ ಅರ್ಜಿ ಸಲ್ಲಿಸಲು ವಿಕಲ ಚೇತನ ಅಭ್ಯರ್ಥಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ [ನ್ಯಾಷನಲ್‌ ಪ್ಲಾಟ್‌ಫಾರ್ಮ್‌ ಫಾರ್‌ ದಿ ರೈಟ್ಸ್‌ ಆಫ್‌ ದಿ ಡಿಸೇಬಲ್ಡ್‌ʼ ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಸಬಲೀಕರಣ ಇಲಾಖೆ ನಡುವಣ ಪ್ರಕರಣ].

ಗುರುವಾರವೇ ಆನ್‌ಲೈನ್‌ ಅರ್ಜಿ ಸಲ್ಲಿಸುವ ದಿನಾಂಕ ಕೊನೆಗೊಂಡಿದ್ದರೂ ಅರ್ಜಿಯನ್ನು ಭೌತಿಕವಾಗಿ ಅಂದರೆ ಹಾರ್ಡ್‌ಕಾಪಿಗಳ ಮೂಲಕ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದ ತೀರ್ಪಿಗೆ ಒಳಪಟ್ಟು ಅಭ್ಯರ್ಥಿಗಳು ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದೆಂಬ ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಸಲಹೆ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ.

Also Read
ಐಪಿಎಸ್‌ ಮತ್ತಿತರ ಸೇವೆಗಳಲ್ಲಿ ವಿಕಲ ಚೇತನರಿಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಕಾಳಗದ ಹುದ್ದೆಗಳನ್ನು (Combat Posts) ಮಾತ್ರವಲ್ಲದೆ ಆಡಳಿತಾತ್ಮಕ ಹುದ್ದೆಗಳಿಂದಲೂ ವಿಕಲ ಚೇತನರನ್ನು ದೂರ ಇಡಲಾಗಿದೆ ಎಂದು ʼನ್ಯಾಷನಲ್‌ ಪ್ಲಾಟ್‌ಫಾರ್ಮ್‌ ಫಾರ್‌ ದಿ ರೈಟ್ಸ್‌ ಆಫ್‌ ದಿ ಡಿಸೇಬಲ್ಡ್‌ʼ ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿತ್ತು. ವಿಕಲ ಚೇತನರನ್ನು ಐಪಿಎಸ್‌ ಮತ್ತಿತರ ಹುದ್ದೆಗಳಿಂದ ದೂರ ಇಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನು ಬಾಹಿರ ಮತ್ತು ಮನಸೋಇಚ್ಛೆಯಿಂದ ಕೂಡಿರುವಂಥದ್ದು ಎಂದು ಅದು ಆರೋಪಿಸಿತ್ತು.

ಅರ್ಜಿದಾರರ ಪರ ಇಂದು ವಾದಮಂಡಿಸಿದ ಹಿರಿಯ ನ್ಯಾಯವಾದಿ ಅರವಿಂದ್‌ ದಾತಾರ್‌ ಗುರುವಾರವೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತಾದ್ದರಿಂದ ಮಧ್ಯಂತರ ಪರಿಹಾರ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಹಾಗಾಗಿ, ಪೀಠವು ಕೇಂದ್ರ ಲೋಕಸೇವಾ ಅಯೋಗದ ಪ್ರಧಾನ ಕಾರ್ಯದರ್ಶಿಯವರಿಗೆ ಅರ್ಜಿದರರು ಹಾಗೂ ಅಂತಹದ್ದೇ ಸ್ಥಿತಿಯಲ್ಲಿರುವವರು ಏಪ್ರಿಲ್ 1, 2022ರ ಸಂಜೆ 4 ಗಂಟೆವರೆಗೆ ಸ್ವೀಕರಿಸುವಂತೆ ಸೂಚಿಸಿತು. ಬಳಿಕ ನ್ಯಾಯಾಲಯವು “…ಈಗ ನಡೆಯುತ್ತಿರುವ ಪ್ರಕರಣವು ಹಾಲಿ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಉಂಟುಮಾಡುವುದಿಲ್ಲ” ಎಂದು ತಿಳಿಸಿತು.

ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 18ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com