ಪಹಲ್ಗಾಮ್ ದಾಳಿ: ಪಾಕಿಸ್ತಾನಕ್ಕೆ ಗಡೀಪಾರಾಗಬೇಕಿದ್ದ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರ

ಕುಟುಂಬದವರು ಹೇಳಿಕೊಂಡಿರುವಂತೆ ಅವರು ಭಾರತೀಯ ಪ್ರಜೆಗಳೇ ಅಲ್ಲವೇ ಎಂಬುದನ್ನು ಪರಿಶೀಲಿಸುವ ಮುನ್ನವೇ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
Passport
Passport
Published on

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಗಡೀಪಾರಾಗುವ ಅಪಾಯ ಎದುರಿಸುತ್ತಿದ್ದ ಶ್ರೀನಗರ ಮೂಲದ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆ ನೀಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿ  ಭಾರತ ಸರ್ಕಾರ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆ  ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 27ರೊಳಗೆ ಭಾರತ ತೊರೆಯುವಂತೆ ನಿರ್ದೇಶಿಸಿತ್ತು.

Also Read
ಪಹಲ್ಗಾಮ್‌ ದಾಳಿ: ತನಿಖೆಗೆ ಕೋರಿದ್ದ ಪಿಐಎಲ್‌ ವಿಚಾರಣೆಗೆ ನಕಾರ, ಸೇನಾ ಪಡೆಗಳ ಸ್ಥೈರ್ಯ ಕುಗ್ಗಿಸಬಾರದು ಎಂದ ಸುಪ್ರೀಂ

ಆದರೆ, ಹೀಗೆ ಗಡಿಪಾರಾಗಬೇಕಾದ ಕುಟುಂಬವೊಂದು ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಭಾರತೀಯ ಪ್ರಜೆಗಳಾದ ತಮ್ಮನ್ನು ಬಂಧಿಸಲಾಗಿದೆ ಎಂದು ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದರು. ಕುಟುಂಬದಲ್ಲಿ ವಿವಾಹಿತ ದಂಪತಿ ಹಾಗೂ ಅವರ ನಾಲ್ಕು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ ಉಳಿದವರು ಶ್ರೀನಗರದಲ್ಲಿ ವಾಸಿಸುತ್ತಿದ್ದಾರೆ.

ಕುಟುಂಬಕ್ಕೆ ತಮ್ಮ ವಾದ ಸಾಬೀತುಪಡಿಸಲು ಅವಕಾಶ ನೀಡದೆ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡದಂತೆ ಹಾಗೂ ಈ ವಿಚಾರವಾಗಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್‌ ಕೆ ಸಿಂಗ್ ಅವರಿದ್ದ ಪೀಠ ಸರ್ಕಾರಕ್ಕೆ ಸೂಚಿಸಿತು.

ಪರಿಶೀಲನಾ ಪ್ರಕ್ರಿಯೆಯ ನಂತರವೂ ಭಾರತ ಸರ್ಕಾರ ಅವರನ್ನು ಗಡೀಪಾರು ಮಾಡಲು ನಿರ್ಧರಿಸಿದರೆ, ಆಗ ಕುಟುಂಬಸ್ಥರು ಪರಿಹಾರ ಕೋರಿ ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂತಲೂ ನ್ಯಾಯಾಲಯ ತಿಳಿಸಿದೆ. ಆದರೆ ಈ ಆದೇಶ ಪ್ರಸ್ತುತ ಪ್ರಕರಣಕ್ಕೆ ಸೀಮಿತವಾಗಿದ್ದು ಇದನ್ನು ಪೂರ್ವನಿದರ್ಶನವಾಗಿ ಬಳಸುವಂತಿಲ್ಲ ಎಂದು ಅದು ಹೇಳಿದೆ.

 ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ನಂದ ಕಿಶೋರ್, ಕುಟುಂಬದ ಎಲ್ಲರಿಗೂ ಪಾಸ್‌ಪೋರ್ಟ್‌ ಹಾಗೂ ಇತರೆ ಗುರುತಿನ ಚೀಟಿಗಳಿವೆ ಎಂದರು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರಿಶೀಲಿಸುವ ಸ್ಥಿತಿಯಲ್ಲಿಲ್ಲದ ಹಲವಾರು ವಾಸ್ತವಿಕ ಅಂಶಗಳಿವೆ ಎಂದು ಪೀಠ ಹೇಳಿತು. ಅಂತೆಯೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದಿತು.

Also Read
ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮಡಿದ ಭಾರತೀಯರಿಗೆ ಹೈಕೋರ್ಟ್‌ ಶ್ರದ್ಧಾಂಜಲಿ

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸೂಕ್ತ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ ಎಂದರು. ಆದರೆ ಇಡೀ ಕುಟುಂಬವನ್ನು ಬಂಧಿಸಲಾಗಿದೆ. ಅರ್ಜಿದಾರರು ಭಾರತೀಯ ಪ್ರಜೆಗಳು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. 

ಕುಟುಂಬದ ಸಮಜಾಯಿಷಿಗಳನ್ನು ಪರಿಶೀಲಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ ಅಲ್ಲಿಯವರೆಗೆ, ಅರ್ಜಿದಾರರ ವಿರುದ್ಧ (ಗಡೀಪಾರು ಸೇರಿದಂತೆ)  ಯಾವುದೇ ಬಲವಂತದ ಕ್ರಮತೆಗೆದುಕೊಳ್ಳಬಾರದು ಎಂದು ಸ್ಪಷ್ಟಪಡಿಸಿ ಪ್ರಕರಣ ಮುಕ್ತಾಯಗೊಳಿಸಿತು. 

Kannada Bar & Bench
kannada.barandbench.com