ಅನರ್ಹತೆ ತಪ್ಪಿಸಲು ಮೀಸಲು ಕ್ಷೇತ್ರದ ಪಂಚಾಯತ್ ಸದಸ್ಯರು ಸಕಾಲದಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು: ಸುಪ್ರೀಂ

1959ರ ಮಹಾರಾಷ್ಟ್ರ ಗ್ರಾಮ ಪಂಚಾಯಿತಿಗಳ ಕಾಯಿದೆಯ ಸೆಕ್ಷನ್ 10-1 ಎ ಪ್ರಕಾರ ಜಾತಿ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಮಹಾರಾಷ್ಟ್ರದಲ್ಲಿ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಪಂಚಾಯತ್ ಸದಸ್ಯರು ತನ್ನಿಂತಾನೇ ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಜಾತಿ ಸಿಂಧುತ್ವ ಪ್ರಮಾಣಪತ್ರಗಳನ್ನು ಸಲ್ಲಿಸಲು ಶ್ರದ್ಧೆವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ [ಸುಧೀರ್ ವಿಲಾಸ್ ಕಲೇಲ್ ಮತ್ತಿತರರು ಹಾಗೂ ಬಾಪು ರಾಜಾರಾಮ್ ಕಲೇಲ್ ಇನ್ನಿತರರ ನಡುವಣ ಪ್ರಕರಣ].

ಮಹಾರಾಷ್ಟ್ರ ಗ್ರಾಮ ಪಂಚಾಯಿತಿಗಳ ಕಾಯಿದೆ 1959ರ ಸೆಕ್ಷನ್ 10-1 ಎ ಪ್ರಕಾರ ಅಂತಹ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.

ಮೀಸಲು ಹುದ್ದೆಯಿಂದ ಸ್ಪರ್ಧಿಸುವ ಸೌಲಭ್ಯ ಪಡೆಯುವ ವ್ಯಕ್ತಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜಾತಿ ಪ್ರಮಾಣಪತ್ರ ಮತ್ತು ಸಿಂಧುತ್ವ ಪ್ರಮಾಣಪತ್ರ ಎರಡನ್ನೂ ಹೊಂದಿರಬೇಕು ಎಂದು ಶಾಸಕಾಂಗ ನಿರೀಕ್ಷಿಸುತ್ತದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಜಾತಿ ಸಿಂಧುತ್ವ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ನಾಮಪತ್ರ ಸಲ್ಲಿಸುವವರೆಗೆ ಕಾಯುವ ಚುನಾವಣಾ ಅಭ್ಯರ್ಥಿಗಳು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ನ್ಯಾಯಾಲಯ ವಿವರಿಸಿದೆ.

"ಜಾತಿ ಪ್ರಮಾಣಪತ್ರ ಕಾಯಿದೆ- 2000ರ ಅಡಿಯಲ್ಲಿ, ಜಾತಿ ಪ್ರಮಾಣಪತ್ರವನ್ನು ಸಿಂಧುತ್ವ ಪ್ರಮಾಣಪತ್ರದೊಂದಿಗೆ ದೃಢೀಕರಿಸಿದಾಗ ಮಾತ್ರ (ಅವರ ಆಯ್ಕೆ) ಅಂತಿಮಗೊಳ್ಳುತ್ತದೆ ... ಮೀಸಲು ಸ್ಥಾನಕ್ಕೆ ಸ್ಪರ್ಧಿಸಲು ಬಯಸುವವರು ಮತ್ತು ನಾಮಪತ್ರ ಸಲ್ಲಿಕೆ ದಿನದ ಮೊದಲು ಅರ್ಜಿ ಸಲ್ಲಿಸುವ ಮೂಲಕ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಅಪಾಯ ಎದುರಿಸುವವರು, ತಮ್ಮ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಅತ್ಯಂತ ಶ್ರದ್ಧೆ ವಹಿಸಬೇಕು ಎಂದು ನಿರೀಕ್ಷಿಸುವುದು ವಿವೇಕಯುತವಾಗಿದೆ. ಇದರರ್ಥ ಅವರು ತಮ್ಮ ನಿಯಂತ್ರಣದಲ್ಲಿರುವ ಎಲ್ಲವನ್ನೂ ಮಾಡಬೇಕು ಮತ್ತು ತಮ್ಮನ್ನು ಸದಸ್ಯರೆಂದು ಪರಿಗಣಿಸುವುದಕ್ಕಾಗಿ ಪರಿಶೀಲನಾ ಸಮಿತಿಗೆ ಸೂಕ್ತ ಅರ್ಜಿ ಸಲ್ಲಿಸಬೇಕು ಎಂದು ನಿರೀಕ್ಷಿಸಲಾಗಿದೆ" ಎಂಬುದಾಗಿ ಪೀಠ ತಿಳಿಸಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್

ಜಂಬುಲನ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಪ್ರಕರಣದ ಮೇಲ್ಮನವಿದಾರ ಜಾತಿ ಪ್ರಮಾಣಪತ್ರ ಹೊಂದಿದ್ದರೂ ನಿಯಮಗಳ ಪ್ರಕಾರ ಅದರ ನೈಜತೆ ದೃಢೀಕರಿಸುವುದಕ್ಕಾಗಿ ಸಿಂಧುತ್ವ ಪ್ರಮಾಣಪತ್ರವನ್ನು ಕೂಡ ಅವರು ಸಲ್ಲಿಸಬೇಕಾಗಿತ್ತು. ಪರಿಶೀಲನಾ ಸಮಿತಿಯ ಪರಿಶೀಲನೆಯ ನಂತರ ಈ ಸಿಂಧುತ್ವ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

2020 ರಲ್ಲಿ ಪಂಚಾಯತ್ ಹುದ್ದೆಗೆ ನಾಮಪತ್ರ ಸಲ್ಲಿಸಿದ ದಿನ ಮೇಲ್ಮನವಿದಾರ ಜಾತಿ ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2021ರಲ್ಲಿ ಅವರು ಸದಸ್ಯರಾಗಿ ಚುನಾಯಿತರಾದರು. ಆದರೂ ಸಮಯಕ್ಕೆ ಸರಿಯಾಗಿ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ಸಲ್ಲಿಸದ ಕಾರಣ, ಅವರನ್ನು ಪಂಚಾಯತ್ ಹುದ್ದೆಯಿಂದ ಪೂರ್ವಾನ್ವಯವಾಗುವಂತೆ ಅನರ್ಹಗೊಳಿಸಲಾಗಿತ್ತು. ಹೈಕೋರ್ಟ್‌ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮೇಲ್ಮನವಿದಾರ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಜಾತಿ ಸಿಂಧುತ್ವ ಪ್ರಮಾಣಪತ್ರಕ್ಕೆ ಕೇವಲ ಅರ್ಜಿ ಸಲ್ಲಿಸಿದರಷ್ಟೇ ಸಾಲದು. ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸುವ ಅಭ್ಯರ್ಥಿ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಅದು ದೊರೆತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ಆಗ ತಿಳಿಸಿತ್ತು.

ಮೇಲ್ಮನವಿದಾರರ ಜಾತಿ ಸಿಂಧುತ್ವ ಪ್ರಮಾಣಪತ್ರವನ್ನು ಜನವರಿ 20, 2022ರೊಳಗೆ ಸಲ್ಲಿಸಬೇಕಾಗಿತ್ತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ (ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್‌ ಮತ್ತು ಪಂಚಾಯತ್ ಸಮಿತಿಗಳ ಕೆಲವು ಚುನಾವಣೆಗಳಿಗೆ) ಸಿಂಧುತ್ವ ಪ್ರಮಾಣಪತ್ರ ಸಲ್ಲಿಕೆ ತಾತ್ಕಾಲಿಕ ಅವಧಿ ವಿಸ್ತರಣೆ ಕಾಯಿದೆ 2023ರ ಪ್ರಕಾರ ಸಿಂಧುತ್ವ ಪ್ರಮಾಣಪತ್ರವನ್ನು ಸಲ್ಲಿಸಲು ಮೇಲ್ಮನವಿದಾರರು ಕಾಲಮಿತಿಗೆ ಸಂಬಂಧಿಸಿದಂತೆ ಸಡಿಲಿಕೆ ಪಡೆಯುವಂತಿಲ್ಲ. ಚುನಾವಣಾ ಫಲಿತಾಂಶದ ನಂತರ ಎರಡು ವಾರಗಳ ನಿಗದಿತ ಸಮಯದೊಳಗೆ ಅವರು ಚುನಾವಣಾ ಫಲಿತಾಂಶಗಳನ್ನು ಪರಿಶೀಲನಾ ಸಮಿತಿಗೆ ತಿಳಿಸದಿರುವುದೇ ಇದಕ್ಕೆ ಕಾರಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌ ಮೇಲ್ಮನವಿಯನ್ನು ವಜಾಗೊಳಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Sudhir Vilas Kalel and ors vs Bapu Rajaram Kalel and ors.pdf
Preview

Related Stories

No stories found.
Kannada Bar & Bench
kannada.barandbench.com