ಪಂಚಮಸಾಲಿ ಸಮುದಾಯ ಮೀಸಲಾತಿ ಪ್ರಕರಣ: ಯಥಾಸ್ಥಿತಿ ಕಾಪಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ಹೈಕೋರ್ಟ್

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಸದ್ಯಕ್ಕೆ ರಾಜ್ಯ ಸರ್ಕಾರವು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
Karnataka High Court
Karnataka High Court
Published on

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಕಾನೂನುಬಾಹಿರ ಎಂದು ಆದೇಶಿಸಬೇಕು ಎಂದು ಕೋರಿರುವ ಅರ್ಜಿ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಬೆಂಗಳೂರಿನ ಡಿ ಜಿ ರಾಘವೇಂದ್ರ ಅವರು ಹಿಂದುಳಿದ ವರ್ಗಗಳ ಪಟ್ಟಿಯ ಪರಿಷ್ಕರಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ವರದಿ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಸದ್ಯಕ್ಕೆ ರಾಜ್ಯ ಸರ್ಕಾರವು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ ರವಿವರ್ಮ ಕುಮಾರ್‌ ಅವರು “ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಈಚೆಗೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ನಮಗೆ ನೀಡಲಾಗಿಲ್ಲ. ಅಸಾಂವಿಧಾನಿಕ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲು ಆದೇಶಿಸಬೇಕು” ಎಂದು ಕೋರಿದರು.

Also Read
ಪಂಚಮಸಾಲಿ ಸಮುದಾಯ ಮೀಸಲಾತಿ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ವರದಿ ನೀಡಲು ಸ್ವಲ್ಪ ಕಾಲಾವಕಾಶ ನೀಡಬೇಕು. ಹೀಗಾಗಿ ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು. ಇದನ್ನು ನ್ಯಾಯಾಲಯವು ಪುರಸ್ಕರಿಸಿ ಅರ್ಜಿ ವಿಚಾರಣೆಯನ್ನು ತಿಂಗಳಾತ್ಯಕ್ಕೆ ಮುಂದೂಡಿತು.

ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಆಧರಿಸಿ ಒಕ್ಕಲಿಗ ಸಮುದಾಯಕ್ಕೆ ಹೊಸದಾಗಿ ಸೃಷ್ಟಿಸಿರುವ ಪ್ರವರ್ಗ ʼಸಿʼಗೆ ಮತ್ತು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ ʼಡಿʼಗೆ ಸೇರ್ಪಡೆ ಮಾಡಲಾಗಿದೆ ಎಂದು ಇತ್ತೀಚೆಗೆ ಸಚಿವ ಸಂಪುಟ ಸಭೆಯ ಬಳಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿಯವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Kannada Bar & Bench
kannada.barandbench.com