ಸಿಂಗ್‌ ವರ್ಸಸ್‌ ದೇಶಮುಖ್‌ 'ಗಂಭೀರ ಪ್ರಕರಣ', ಮೊದಲಿಗೆ ಬಾಂಬೆ ಹೈಕೋರ್ಟ್‌ ಸಂಪರ್ಕಿಸಿ: ಪರಮ್‌ಗೆ ಸುಪ್ರೀಂ ಸೂಚನೆ

“ಇದು ಗಂಭೀರ ಪ್ರಕರಣ ಎಂಬುದನ್ನು ನಾವು ಒಪ್ಪುತ್ತೇವೆ. ಸಂವಿಧಾನದ 226ನೇ ವಿಧಿಯ ಶಕ್ತಿ ಅಗಾಧವಾಗಿದ್ದು, ಇದನ್ನು ಹೈಕೋರ್ಟ್‌ ವಿಚಾರಣೆ ನಡೆಸಬಹುದು” ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಆರ್‌ ಸುಭಾಷ್‌ ರೆಡ್ಡಿ ಹೇಳಿದ್ದಾರೆ
Param Bir Singh and Anil Deshmukh
Param Bir Singh and Anil Deshmukh
Published on

ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸುವಂತೆ ಕೋರಿ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್ ಬೀರ್‌ ಸಿಂಗ್‌ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್‌ ಬದಲಿಗೆ ಸಂವಿಧಾನದ 226ನೇ ವಿಧಿಯಡಿ ಬಾಂಬೆ ಹೈಕೋರ್ಟ್‌ ಸಂಪರ್ಕಿಸುವ ಸ್ವಾತಂತ್ರ್ಯ ಕಲ್ಪಿಸಿದೆ.

ಸಿಂಗ್‌ ಮತ್ತು ದೇಶಮುಖ್‌ ಆರೋಪ-ಪ್ರತ್ಯಾರೋಪಗಳು ಗಂಭೀರವಾಗಿದ್ದು, ಮೊದಲಿಗೆ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್‌ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಆರ್‌ ಸುಭಾಷ್‌ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ಹೇಳಿತು.

“ಪ್ರಕರಣ ಗಂಭೀರವಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಅಲ್ಲದೇ ಇದು ಆಡಳಿತದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಆದರೆ, ಸಂವಿಧಾನದ 226ನೇ ವಿಧಿಯ ಶಕ್ತಿ ಅಗಾಧವಾಗಿದ್ದು, ಇದನ್ನು ಹೈಕೋರ್ಟ್‌ ವಿಚಾರಣೆ ನಡೆಸಬಹುದಾಗಿದೆ” ಎಂದು ಪೀಠ ಹೇಳಿತು.

ಮನವಿಯನ್ನು ಹಿಂಪಡೆದ ಸಿಂಗ್‌ ಪರ ವಕೀಲ ಮುಕುಲ್‌ ರೋಹಟ್ಗಿ ಅವರು ಬುಧವಾರವೇ ಬಾಂಬೆ ಹೈಕೋರ್ಟ್‌ ಕದ ತಟ್ಟುವುದಾಗಿ ಹೇಳಿದರು. ಅಲ್ಲದೇ, ಪ್ರಕರಣವು ಕೆಲವು ಸಿಸಿಟಿವಿ ತುಣುಕು ಇತ್ಯಾದಿಗಳನ್ನು ಒಳಗೊಂಡಿರುವುದರಿಂದ ಗುರುವಾರವೇ ಪ್ರಕರಣದ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ರೋಹಟ್ಗಿ ಅವರ ಮನವಿಯನ್ನು ದಾಖಲಿಸಿಕೊಂಡ ನ್ಯಾಯಾಲಯವು ಹೈಕೋರ್ಟ್‌ ಮುಂದೆ ಸದರಿ ಮನವಿಯನ್ನು ಉಲ್ಲೇಖಿಸುವಂತೆ ಸೂಚಿಸಿತು.

Also Read
ದೇಶಮುಖ್- ಪರಮ್ ಬೀರ್ ಸಿಂಗ್ ಆರೋಪಗಳ ವಿರುದ್ಧ ಸಿಬಿಐ ತನಿಖೆ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಸಿಬಿಐ ವಿಚಾರಣೆಗೆ ಕೋರುವುದರ ಜೊತೆಗೆ ಸಿಂಗ್‌ ಅವರು ಮಾರ್ಚ್‌ 17ರಂದು ತಮ್ಮನ್ನು ಮುಂಬೈ ಪೊಲೀಸ್‌ ಆಯುಕ್ತರ ಹುದ್ದೆಯಿಂದ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿದ್ದು, ಇದು ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಸಚಿವ ದೇಶಮುಖ್‌ ಅವರು ಆಗಿಂದಾಗ್ಗೆ ವಿಚಾರಣೆಯಲ್ಲಿ ಮೂಗು ತೂರಿಸುತ್ತಿದ್ದರು. ವಿಚಾರಣೆ ನಡೆಸುವಾಗ ಯಾವ ರೀತಿಯ ವಿಧಾನ ಅನುಸರಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಕರೆದು ನಿರ್ದೇಶನಗಳನ್ನು ನೀಡುತ್ತಿದ್ದರು ಎಂದು ಆರೋಪಿಸಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದ ಬೆನ್ನಿಗೇ ಸಿಂಗ್‌ ಮನವಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com