ದೇಶಮುಖ್ ಅವ್ಯವಹಾರಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಮೊರೆಹೋದ ಪರಮ್‌ಬೀರ್‌ ಸಿಂಗ್

ಕಮಿಷನರ್ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿದ ಆದೇಶವನ್ನು ಕೂಡ ಸಿಂಗ್ ಪ್ರಶ್ನಿಸಿದ್ದು ಇದು ಸಂವಿಧಾನದ 14 ಮತ್ತು 21 ನೇ ವಿಧಿ ಉಲ್ಲಂಘನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ದೇಶಮುಖ್ ಅವ್ಯವಹಾರಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಮೊರೆಹೋದ ಪರಮ್‌ಬೀರ್‌ ಸಿಂಗ್
Published on

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್‌ ಅವರ ವಿವಿಧ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಸುಪ್ರೀಂಕೋರ್ಟ್‌ ಕದ ತಟ್ಟಿದ್ದಾರೆ.

ಕಮಿಷನರ್‌ ಹುದ್ದೆಯಿಂದ ತಮ್ಮನ್ನು ವರ್ಗಾವಣೆ ಮಾಡಿ ಮಾರ್ಚ್‌ 17ರಂದು ಹೊರಡಿಸಲಾದ ಸರ್ಕಾರಿ ಆದೇಶ ಸಂವಿಧಾನದ 14 ಮತ್ತು 21 ನೇ ವಿಧಿ ಉಲ್ಲಂಘನೆಯಾಗಿದೆ. ʼನಾಗರಿಕ ಸೇವಕರ ಅಧಿಕಾರಾವಧಿಯ ಸ್ಥಿರತೆಯ ಸ್ಥಾಪಿತ ತತ್ವಕ್ಕೆʼ ತಮ್ಮ ವರ್ಗಾವಣೆ ವಿರುದ್ಧವಾಗಿದೆ ಎಂದು ಕೂಡ ಸಿಂಗ್‌ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.

Also Read
ಪರಮ್ ಬೀರ್ ಸಿಂಗ್ ಆರೋಪ: ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶಮುಖ್

ಮುಂಬೈನ ಅಪರಾಧ ಗುಪ್ತಚರವಿಭಾಗದ ಸಚಿನ್ ವಜೆ ಮತ್ತು ಮುಂಬೈನ ಎಸಿಪಿ ಸಮಾಜ ಸೇವಾ ಶಾಖೆಯ ಸಂಜಯ್ ಪಾಟೀಲ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳೊಂದಿಗೆ ಅನಿಲ್ ದೇಶಮುಖ್‌ ಅವರು ಕಳೆದ ಫೆಬ್ರವರಿಯಲ್ಲಿ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದರು. “ಹಿರಿಯ ಅಧಿಕಾರಿಗಳು ಇಲ್ಲದ ಸಭೆಯಲ್ಲಿ ವಿವಿಧ ಸಂಸ್ಥೆಗಳು ಮತ್ತಿತರ ಮೂಲಗಳಿಂದ ಪ್ರತಿ ತಿಂಗಳು ರೂ 100 ಕೋಟಿ ಸಂಗ್ರಹಿಸಿಕೊಡುವ ಗುರಿ ನೀಡಲಾಗಿತ್ತು," ಎಂದು ವಿವರಿಸಲಾಗಿದೆ.

ದೇಶಮುಖ್‌ ಅವರ ಇಂತಹ ಕೃತ್ಯ ಮುಂಬೈನಾದ್ಯಂತ ಇರುವ ವಿವಿಧ ಸಂಸ್ಥೆಗಳಿಂದ ಮೂಲಗಳಿಂದ ಹಣ ಸುಲಿಗೆ ಮಾಡುವ ದುರುದ್ದೇಶ ಹೊಂದಿರುವುದನ್ನು ಚಿತ್ರಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Also Read
ಕೋಲಾಹಲಕ್ಕೆ ಕಾರಣವಾದ‌ ಪರಮ್ ಬೀರ್ ಸಿಂಗ್ ಪತ್ರ: ಅಧಿಕೃತತೆ ಪ್ರಶ್ನಿಸಿದ ಮುಖ್ಯಮಂತ್ರಿ ಉದ್ಧವ್‌ ಕಚೇರಿ

"ಇದು ತನಿಖೆಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತೋರಿಸುತ್ತಿದ್ದು ಮತ್ತು ತನಿಖೆಯನ್ನು ನಿರ್ದಿಷ್ಟ ರೀತಿಯಲ್ಲಿ ನಡೆಸುವಂತೆ ನಿರ್ದೇಶಿಸುತ್ತಿದ್ದು ಅಧಿಕಾರಿಗಳ ನೇಮಕಾತಿ / ವರ್ಗಾವಣೆಯಲ್ಲಿನ ಭ್ರಚ್ಟಾಚಾರವನ್ನು ಯಾವುದೇ ಪ್ರಜಾಪ್ರಭುತ್ವ ರಾಜ್ಯ ಬೆಂಬಲಿಸಲು ಅಥವಾ ಸಮರ್ಥಿಸಲು ಸಾಧ್ಯವಿಲ್ಲ" ಎಂದು ಮನವಿ ಹೇಳಿದೆ.

ಟಿಎಸ್ಆರ್ ಸುಬ್ರಮಣಿಯನ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಅಂತಹ ವರ್ಗಾವಣೆಗಳು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಹೇಳಲಾಗಿದೆ. ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ರಾಜಕೀಯ ಕಾರ್ಯಸೂಚಿಯ ಆಶಯಗಳ ಮೇರೆಗೆ ಮಾತ್ರ ಅರ್ಜಿದಾರರನ್ನು ನಗರ ಪೊಲೀಸ್‌ ಕಮಿಷನರ್‌ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ರಾಜಕೀಯ ಕಾರ್ಯಸೂಚಿಯ ಇಚ್ಛೆಯಂತೆಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡುವುದು “ಪೊಲೀಸರ ಮೇಲೆ ರಾಜಕೀಯ ಶಕ್ತಿಗಳ ಅತಿಯಾದ ನಿಯಂತ್ರಣವನ್ನು ಸೂಚಿಸುತ್ತದೆ. ಕಾನೂನು ಪ್ರಕ್ರಿಯೆಯನ್ನು ತಗ್ಗಿಸಿ ಸರ್ವಾಧಿಕಾರದ ಬೆಳವಣಿಗೆಯನ್ನು ಉತ್ತೇಜಿಸಿ ಪ್ರಜಾಪ್ರಭುತ್ವದ ಮೂಲ ಅಡಿಪಾಯವನ್ನು ಅಲುಗಾಡಿಸುವ ಅಪಾಯವಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ವಕೀಲರಾದ ಅಭಿನಯ್‌ ಮತ್ತು ಉತ್ಸವ್‌ ತ್ರಿವೇದಿ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ.

Kannada Bar & Bench
kannada.barandbench.com