ಪರಶುರಾಮ ಪ್ರತಿಮೆ ಮರು ಸ್ಥಾಪನೆ ಕೋರಿಕೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪರಶುರಾಮ ಪ್ರತಿಮೆಯನ್ನು ಮರು ನಿರ್ಮಿಸಲು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಉಡುಪಿಯ ಉದಯ ಶೆಟ್ಟಿ ಮುನಿಯಾಲು ಕೋರಿದ್ದಾರೆ.
Parashuram Statute
Parashuram Statute
Published on

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆಯ ಮರು ಸ್ಥಾಪನೆಗೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಪರುಶರಾಮ ಪ್ರತಿಮೆ ಮರುಸ್ಥಾಪನೆ ಕುರಿತು ಉಡುಪಿ ತಾಲ್ಲೂಕಿನ ವರಂಗ ಗ್ರಾಮದ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‍ಪ್ರತಿವಾದಿಗಳಾದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸೇರಿದಂತೆ ಇತರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿತು. 

ಈ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ ಅರ್ಜಿದಾರರಿಗೆ ₹5 ಲಕ್ಷ ಠೇವಣಿ ಇರಿಸುವಂತೆ ಆದೇಶಿಸಲಾಗಿತ್ತು. ಈ ಆದೇಶವನ್ನು ಪಾಲಿಸಿರುವುದಾಗಿ ಅರ್ಜಿದಾರರ ವಕೀಲರು ವಿಚಾರಣೆ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

ಹಿನ್ನೆಲೆ: ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ 33 ಅಡಿ ಎತ್ತರದ ಪರಶುರಾಮ ಪ್ರತಿಮೆಯನ್ನು 2023ರ ಜನವರಿ 27ರಂದು ಉದ್ಘಾಟನೆ ಮಾಡಲಾಗಿತ್ತು. ಆದರೆ, ಕಂಚಿನ ಪ್ರತಿಮೆ ಬದಲಿಗೆ ಹಿತ್ತಾಳೆ ಪ್ರತಿಮೆ ಅನಾವರಣ ಮಾಡಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಪ್ರತಿಮೆ ತೆರವುಗೊಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ, ಕರಾವಳಿ ಕರ್ನಾಟಕದ ಹಿಂದೂಗಳ ಧಾರ್ಮಿಕ ಭಾವನೆಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಈ ಪ್ರತಿಮೆಯನ್ನು ಪುನರ್ ರಚಿಸಿ ಮರು ಪ್ರತಿಷ್ಠಾಪನೆ ಮಾಡಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com