
ಬಾಲಕಿಯರಿಗೆ 18 ವರ್ಷ ತುಂಬುವ ಮುನ್ನವೇ ಮಕ್ಕಳಿಗೆ ಮದುವೆ ಮಾಡುವ ಪರಿಪಾಠಕ್ಕೆ ಪೋಷಕರೇ ಕಾರಣ ಎಂದು ಬುಧವಾರ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಇಂತಹ ಪ್ರಕರಣಗಳಲ್ಲಿ ಪೋಷಕರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲೇಬಾರದು. ಆಗ ಈ ಅನಿಷ್ಟ ಪದ್ಧತಿಯ ಆಚರಣೆ ಸ್ಥಗಿತಗೊಳ್ಳುತ್ತದೆ ಎಂದು ಮೌಖಿಕವಾಗಿ ಕಿಡಿಕಾರಿದೆ.
ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಕಾರಣಕ್ಕೆ ಆಕೆಯ ಪತಿ ಹಾಗೂ ಪೋಷಕರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ) ಹಾಗೂ ಬಾಲ್ಯ ವಿವಾಹ ತಡೆ ಕಾಯಿದೆ ವಿವಿಧ ಸೆಕ್ಷನ್‌ಗಳಡಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ಮನವಿಯನ್ನು ತಳ್ಳಿ ಹಾಕಿದ ಪೀಠವು “ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವ ಮುನ್ನವೇ ಮದುವೆಯಾಗುವಂತೆ ಪೋಷಕರು ಏಕೆ ಬಲವಂತ ಮಾಡಬೇಕು. ಪೋಷಕರ ಈ ನಡೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಇಂತಹ ಪೋಷಕರ ವಿರುದ್ಧ ದಂಡನಾ ಕ್ರಮಗಳನ್ನು ಜರುಗಿಸಲು ಇದು ಸಕಾಲ” ಎಂದಿತು.
“ಮತ್ತೊಂದು ಪ್ರಕರಣದಲ್ಲಿ ಬಾಲಕಿಯೊಬ್ಬಳು ತನಗೆ 18 ವರ್ಷ ತುಂಬಿಲ್ಲ. ಮದುವೆ ಮಾಡಬೇಡಿ ಎಂದು ಕೇಳಿಕೊಂಡರೂ ಪೋಷಕರು ಮದುವೆ ಮಾಡಿದ್ದಾರೆ. ಇದರಿಂದ ಮಕ್ಕಳು ಪೋಕ್ಸೊ ಪ್ರಕರಣ ಎದುರಿಸುವಂತಾಗಿದೆ. ಇಂತಹ ಪ್ರಕರಣಗಳಿಗೆ ಪೋಷಕರೇ ಜವಾಬ್ದಾರಿ. ಹಾಗಾಗಿ, ಪೋಷಕರನ್ನು ಇಂತಹ ವಿಷಯಗಳಲ್ಲಿ ಸಂವೇದನಶೀಲರನ್ನಾಗಿ ಮಾಡಲು ಇದು ಸಕಾಲ” ಎಂದು ಹೇಳಿತು.