ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆ: ಮಸೂದೆ ಅಂಗೀಕರಿಸಿದ ಸಂಸತ್ತು

ಪ್ರಸ್ತಾವಿತ ಕಾನೂನಿನ ಪ್ರಕಾರ, ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ 3ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದ್ದು ತಪ್ಪಿತಸ್ಥ ಪರೀಕ್ಷಾ ಸೇವಾ ಪೂರೈಕೆದಾರರಿಗೆ ₹ 1 ಕೋಟಿವರೆಗೆ ದಂಡ ವಿಧಿಸಬಹುದು.
ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024
ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆಯುವುದನ್ನು ತಡೆಗಟ್ಟುವುದಕ್ಕಾಗಿ ಸಾರ್ವಜನಿಕ ಪರೀಕ್ಷಾ (ಅಕ್ರಮ ತಡೆ) ಮಸೂದೆ - 2024ಅನ್ನು ರಾಜ್ಯಸಭೆ ಶುಕ್ರವಾರ ಅಂಗೀಕರಿಸಿತು.

ಈ ಮಸೂದೆಯನ್ನು ಫೆಬ್ರವರಿ 5ರಂದು ಲೋಕಸಭೆಯಲ್ಲಿ ಮಂಡಿಸಿ ಮರುದಿನ ಅಂಗೀಕರಿಸಲಾಗಿತ್ತು.

ಮಸೂದೆಯು "ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟುವ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳನ್ನು ಒದಗಿಸುವ" ಗುರಿಯನ್ನು ಹೊಂದಿದೆ.

ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಗಳಲ್ಲಿ ಹೆಚ್ಚಿನ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ವಿಶ್ವಾಸಾರ್ಹತೆಯನ್ನು ತರುವುದು ಮತ್ತು ಯುವಕರ ಪ್ರಾಮಾಣಿಕ ಯತ್ನಗಳಿಗೆ ನ್ಯಾಯಯುತ ಪ್ರತಿಫಲ ದೊರಕಿಸಿಕೊಡುವ ಭರವಸೆ ನೀಡುವುದು ಮಸೂದೆಯ ಉದ್ದೇಶವಾಗಿದೆ.

ಪ್ರಶ್ನೆ ಪತ್ರಿಕೆಗಳ ಸೋರಿಕೆ, ಉತ್ತರ ಪತ್ರಿಕೆಗಳನ್ನು ತಿರುಚುವುದು, ಆಸನ ವ್ಯವಸ್ಥೆ ಬದಲಿಸುವುದು, ಹಣಕಾಸಿನ ಲಾಭಕ್ಕಾಗಿ ಮೋಸ ಮಾಡಲು ನಕಲಿ ಜಾಲತಾಣ ರಚನೆ ಹಾಗೂ ನಕಲಿ ಪರೀಕ್ಷೆ ನಡೆಸುವುದು ಇನ್ನಿತರ ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆಯುವ ವಿವಿಧ ಅಕ್ರಮಗಳು ಮಸೂದೆಯ ವ್ಯಾಪ್ತಿಗೆ ಬರಲಿವೆ.

ಎಲ್ಲಾ ಅಪರಾಧಗಳನ್ನು ಸಂಜ್ಞೇಯ ಅಪರಾಧ ಎಂದು ಪ್ರಸ್ತಾವಿತ ಕಾನೂನು ಗುರುತಿಸಿದ್ದು ಇದು ಜಾಮೀನು ರಹಿತ ಮತ್ತು ರಾಜಿ ಸಂಧಾನಕ್ಕೆ ಅವಕಾಶ ಇಲ್ಲದ ಅಪರಾಧವಾಗುತ್ತದೆ. ಸಾರ್ವಜನಿಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ 3ರಿಂದ 5 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.10 ಲಕ್ಷ ಗಳವರೆಗೆ ದಂಡ ವಿಧಿಸಬಹುದಾಗಿದ್ದು ಪರೀಕ್ಷಾ ಸಂಬಂಧಿತ ಸೇವಾ ಪೂರೈಕೆದಾರರಿಗೆ ₹ 1 ಕೋಟಿವರೆಗೆ ದಂಡ ವಿಧಿಸಬಹುದಾಗಿದೆ.

ಮಸೂದೆಯಲ್ಲಿ ವ್ಯಾಖ್ಯಾನಿಸಿದಂತೆ ಅಭ್ಯರ್ಥಿಗಳು ಅದರ ನಿಬಂಧನೆಗಳಿಂದ ವಿನಾಯಿತಿ ಪಡೆದಿದ್ದು ಸಾರ್ವಜನಿಕ ಪರೀಕ್ಷಾ ಪ್ರಾಧಿಕಾರದ ಆಡಳಿತಾತ್ಮಕ ನಿಯಮಗಳ ಅಡಿಯಲ್ಲಿ ಉಳಿಯುತ್ತಾರೆ.

ಈ ಮಸೂದೆಯು ಪರೀಕ್ಷಾ ಅಕ್ರಮಕ್ಕೆ ಸಮ್ಮತಿಸಿದ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಕೆಲ ವ್ಯಕ್ತಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ನೀಡುವುದೂ ಸೇರಿದಂತೆ ನಿರ್ದಿಷ್ಟ ಅಪರಾಧಗಳಿಗೆ ದಂಡವನ್ನು ಹೆಚ್ಚಿಸುತ್ತದೆ.

ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಸಂಸ್ಥೆ ಸೇರಿದಂತೆ ವ್ಯಕ್ತಿಗಳು ಅಥವಾ ಗುಂಪುಗಳು ಅಕ್ರಮ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅಂತಹವರಿಗೆ ಮಸೂದೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಿದ್ದು ಶಿಕ್ಷೆಯ ಪ್ರಮಾಣವನ್ನು ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ₹1 ಕೋಟಿಗಿಂತ ಕಡಿಮೆಯಿಲ್ಲದ ದಂಡವನ್ನು ಕೂಡ ತಪ್ಪಿತಸ್ಥರು ಪಾವತಿಸಬೇಕಾಗುತ್ತದೆ.

ದಂಡ ಪಾವತಿಸಲು ವಿಫಲವಾದರೆ, ಭಾರತೀಯ ನ್ಯಾಯ ಸಂಹಿತೆ- 2023ರ ಪ್ರಕಾರ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುವವರೆಗೆ, ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯವಾಗಲಿದೆ.

[ಲೋಕಸಭೆ ಅಂಗೀಕರಿಸಿದ್ದ ಮಸೂದೆಯ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Public Examinations (Prevention of Unfair Means) Bill, 2024.pdf
Preview

Related Stories

No stories found.
Kannada Bar & Bench
kannada.barandbench.com