ಚರ್ಚೆಯಿಲ್ಲದೇ ಸಂಸತ್‌ನಲ್ಲಿ ಮಸೂದೆಗಳ ಅಂಗೀಕಾರ; ಇದು ರಾಮರಾಜ್ಯದಲ್ಲಿ ನಡೆದಿರಲಿಲ್ಲ: ನ್ಯಾ. ಅರುಣ್‌ ಮಿಶ್ರಾ

ರಾಮರಾಜ್ಯವು ಧರ್ಮಗಳು ಅಥವಾ ಬಡವ ಮತ್ತು ಶ್ರೀಮಂತರ ನಡುವೆ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿ.
Justice Arun Mishra
Justice Arun Mishra

“ಸಂಸತ್‌ನಲ್ಲಿ ಯಾವುದೇ ಚರ್ಚೆಯಿಲ್ಲದೇ ಹಲವು ಮಸೂದೆಗಳು ಅಂಗೀಕಾರ ಪಡೆಯುತ್ತಿವೆ. ಇದು ರಾಮರಾಜ್ಯದಲ್ಲಿ ನಡೆದಿರಲಿಲ್ಲ” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹೇಳಿದ್ದಾರೆ.

ಅಲಾಹಾಬಾದ್‌ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕಮಲೇಶ್ವರ್‌ ನಾಥ್‌ ರಚಿತ ʼರಾಮಮಂದಿರ ನಿರ್ಮಾಣ ಹಂಬಲ ಪರಿಪೂರ್ಣʼ ಪುಸ್ತಕ ಗುರುವಾರ ಬಿಡುಗಡೆಯಾಗಿದ್ದು, ಆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮ ರಾಜ್ಯ ಎನ್ನುವುದು ಹಿಂದೂ ದೈವ, ರಾಜ ಭಗವಾನ್ ರಾಮನು ಭಾರತವನ್ನು ಆಳಿದ್ದ ಅವಧಿಯನ್ನು ಉಲ್ಲೇಖಿಸುತ್ತದೆ. ಇದು ಉತ್ತಮವಾಗಿ ಕಾರ್ಯನಿರ್ವಹಿಸುವ ಸಮಾಜ, ರಾಜಕೀಯ ಮತ್ತು ನ್ಯಾಯಯುತ ಆಡಳಿತಕ್ಕೆ ಉದಾಹರಣೆಯಾಗಿದೆ.

ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿಗಳ ಪೈಕಿ ಮಿಶ್ರಾ ಸಹ ಒಬ್ಬರಾಗಿದ್ದು, ಭಾರತದ ಸಂವಿಧಾನವು ಅಂದಿನ ಕಾಲದ ಪರಂಪರೆ ಮತ್ತು ಆದರ್ಶಗಳನ್ನು ಅಡಕವಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.

“ಇತ್ತೀಚಿನ ದಿನಗಳಲ್ಲಿ ಸಂಸತ್‌ ಕಾರ್ಯನಿರ್ವಹಿಸದೇ ಇರುವುದನ್ನು ನಾವು ಕಾಣುತ್ತಿದ್ದೇವೆ. ಚರ್ಚೆಯಿಲ್ಲದೇ ಮಸೂದೆಗಳನ್ನು ಅಂಗೀಕರಿಸಲಾಗುತ್ತಿದ್ದು, ಇದು ರಾಮರಾಜ್ಯದಲ್ಲಿ ನಡೆದಿರಲಿಲ್ಲ” ಎಂದರು.

ರಾಮರಾಜ್ಯವು ಧರ್ಮಗಳು ಅಥವಾ ಬಡವ ಮತ್ತು ಶ್ರೀಮಂತರ ನಡುವೆ ತಾರತಮ್ಯ ಮಾಡುವುದಿಲ್ಲ ಎಂದೂ ನ್ಯಾ. ಮಿಶ್ರಾ ಹೇಳಿದ್ದಾರೆ.

“ರಾಮರಾಜ್ಯವನ್ನು ಸಂರಕ್ಷಿಸುವುದು ನಮ್ಮ ಸಂವಿಧಾನದ ಗುರಿ. ಇದು ಎಲ್ಲಾ ಧರ್ಮಗಳ ಬಗ್ಗೆ ಸಹಾನುಭೂತಿ ಹೊಂದಿದ್ದು, ಎಲ್ಲರಿಗೂ ನ್ಯಾಯದಾನ ಮಾಡುತ್ತದೆ. ರಾಮರಾಜ್ಯವೆಂದರೆ ಎಲ್ಲರಿಗೂ ಸಾಮಾಜಿಕ ಅಭಿವೃದ್ಧಿ ಮತ್ತು ಸಮಾನತೆ ಕಲ್ಪಿಸುವುದಾಗಿದೆ. ಇದು ಬಡವ ಮತ್ತು ಶ್ರೀಮಂತರ ನಡುವೆ ತಾರತಮ್ಯ ಮಾಡುವುದಿಲ್ಲ” ಎಂದು ಮಿಶ್ರಾ ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆಯ ಕುರಿತು ಮಾತನಾಡಿದ ನ್ಯಾಯಮೂರ್ತಿ ಮಿಶ್ರಾ ಅವರು ಅಯೋಧ್ಯಾದಲ್ಲಿ ಸರಿಯಾದ ಜಾಗದಲ್ಲಿ ರಾಮನನ್ನು ಪ್ರತಿಷ್ಠಾಪಿಸಲಾಗಿದೆ. “ರಾಮನ ಜನ್ಮಸ್ಥಾನವು ಈಗ ಮತ್ತೆ ನಮ್ಮ ಸಾಮೂಹಿಕ ನಾಗರಿಕತೆಯ ಭಾಗವಾಗಿದೆ. ರಾಮ ಮರ್ಯಾದ ಪುರಷೋತ್ತಮನಾಗಿದ್ದು, ಆತನ ಮೌಲ್ಯಗಳು ಇಂದಿಗೂ ಪ್ರಸ್ತುತ ಮತ್ತು ಜೀವಂತವಾಗಿವೆ. ರಾಮನಿಗಿಂತ ಯಾರೂ ಸ್ಫೂರ್ತಿದಾಯಕವಲ್ಲ” ಎಂದು ಹೇಳಿದರು.

ರಾಮನು ಮಾನ ಹಕ್ಕುಗಳು, ಹಿಂದೂ ಧರ್ಮ ಅಥವಾ ಸನಾತನ ಧರ್ಮದ ರಕ್ಷಕನಾಗಿದ್ದು, ಎಲ್ಲಾ ನಂಬಿಕೆಗಳನ್ನು ಸಂಯೋಜಿಸುವ ಶಕ್ತಿ ಆತನಿಗಿದೆ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ. “ನಾವೆಲ್ಲರೂ ರಾಮನ ರೀತಿ ಬದುಕುವ, ಅವನಂತಾಗುವ ಗುರಿ ಹೊಂದಬೇಕು. ರಾಮ ಮಾನವ ಹಕ್ಕುಗಳ ರಕ್ಷಕ. ಎಲ್ಲಾ ಧರ್ಮಗಳನ್ನು ಸಂಯೋಜಿಸುವ ಶಕ್ತಿ ಸನಾತನ ಧರ್ಮಕ್ಕಿದೆ. ಇದು ಅದರ ಶಕ್ತಿಯೇ ವಿನಾ ದೌರ್ಬಲ್ಯವಲ್ಲ. ನಮ್ಮ ಸಂವಿಧಾನವು ರಾಮರಾಜ್ಯದ ಈ ಮೌಲ್ಯಗಳನ್ನು ಸಂರಕ್ಷಿಸುತ್ತದೆ” ಎಂದಿದ್ದಾರೆ.

“ನಾವೀಗ ಜಾತಿಯ ಮೇಲೆ ವಿಭಜನೆಯಾಗಿದ್ದೇವೆ. ರಾಮ ಜಾತಿರಹಿತ ಸಮಾಜದ ಕನಸು ಕಂಡಿದ್ದನು. ಪ್ರಪಂಚದಲ್ಲಿ ನಾವೀಗ ವಿನಾಶ ಮತ್ತು ಸಾವುಗಳನ್ನು ಕಾಣುತ್ತಿದ್ದೇವೆ; ರಾಮನ ಶಾಂತಿ ಮಂತ್ರ ಈಗ ಹೆಚ್ಚು ಪ್ರಸ್ತುತ. ಭಾರತವು ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ ಅಥವಾ ಯಾವುದೇ ಸಂಸ್ಕೃತಿಯನ್ನು ನಾಶಪಡಿಸಿಲ್ಲ. ನಮ್ಮ ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವ ಶಾಂತಿಯುತ ರಾಷ್ಟ್ರಗಳಲ್ಲಿ ನಾವು ಸೇರಿದ್ದೇವೆ” ಎಂದು ಅವರು ವಿವರಿಸಿದರು.

“ರಾಮ ರಾಜ್ಯದಲ್ಲಿ ಯಾರೂ ಅನಕ್ಷರಸ್ಥರಾಗಿರಲಿಲ್ಲ; ಎಲ್ಲರೂ ಬುದ್ಧಿವಂತರಾಗಿದ್ದರು. ನಾವು ಲಿಂಗ ಸಮಾನತೆಯ ಕಡೆ ಗಮನಹರಿಸಬೇಕಿದೆ. ಎಲ್ಲಿ ಮಹಿಳೆಯರಿಗೆ ಗೌರವವಿಲ್ಲವೋ ಅಲ್ಲಿ ಯಾವುದೂ ಜಯಶಾಲಿಯಾಗದು. ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣವು ಚಾಲ್ತಿಯಲ್ಲಿರುವ ಕ್ರಮವಾಗಿದೆ” ಎಂದರು. 

Related Stories

No stories found.
Kannada Bar & Bench
kannada.barandbench.com