ಸಂಸತ್‌ ಭದ್ರತಾ ಉಲ್ಲಂಘನೆ ಆರೋಪಿಗಳಿಂದ ಚಿತ್ರಹಿಂಸೆಯ ಆರೋಪ: ವಿಪಕ್ಷಗಳೊಂದಿಗೆ ನಂಟಿದೆ ಎಂದು ಒಪ್ಪಿಕೊಳ್ಳಲು ಒತ್ತಾಯ

ಸುಳ್ಳುಪತ್ತೆ, ಮಂಪರು ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮಾಡುವಾಗ ಪರೀಕ್ಷಕರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಅಥವಾ ನಾಯಕರ ಹೆಸರು ಹೇಳುವಂತೆ ಒತ್ತಡ ಹೇರುತ್ತಿದ್ದರು ಎಂದಿರುವ ಆರೋಪಿಗಳು.
ಸಂಸತ್ತಿನ ಭದ್ರತಾ ಉಲ್ಲಂಘನೆ
ಸಂಸತ್ತಿನ ಭದ್ರತಾ ಉಲ್ಲಂಘನೆ

ತಾವು ಪೊಲೀಸರ ವಶದಲ್ಲಿದ್ದ ವೇಳೆ ತಮ್ಮ ಮೇಲೆ ಒತ್ತಡ ಹೇರಿ, ಚಿತ್ರಹಿಂಸೆ ನೀಡಿರುವುದಾಗಿ ಸಂಸತ್‌ ಭದ್ರತೆ ಉಲ್ಲಂಘನೆ ಪ್ರಕರಣದ ಆರೋಪಿಗಳು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯಿದೆ (ಯುಎಪಿಎ) ಅಡಿ ತಮ್ಮ ಮೇಲೆ ಹೂಡಿರುವ ಅಪರಾಧ ಒಪ್ಪಿಕೊಳ್ಳುವಂತೆ ಪೊಲೀಸರು ತಮ್ಮನ್ನು ಒತ್ತಾಯಿಸಿದ್ದರು ಎಂದಿರುವ ಆರೋಪಿಗಳು, 70 ಖಾಲಿ ಪುಟಗಳಿಗೆ ಸಹಿ ಹಾಕಲು ಹಾಗೂ ರಾಜಕೀಯ ಪಕ್ಷಗಳೊಂದಿಗೆ ನಂಟಿತ್ತು ಎಂದು ಹೇಳಲು ಒತ್ತಾಯಿಸಿ ಬಲವಂತವಾಗಿ ತಮಗೆ ಚಿತ್ರಹಿಂಸೆ ನೀಡಲಾಗಿತ್ತು, ವಿದ್ಯುತ್‌ ಶಾಕ್‌ ಕೊಡಲಾಗಿತ್ತು ಎಂದು ಆರೋಪಿಸಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಆರೋಪಿಗಳು ಸಲ್ಲಿಸರುವ ಅರ್ಜಿಯಲ್ಲಿ ಈ ಆರೋಪಗಳನ್ನು ಮಾಡಲಾಗಿದೆ.

ಸುಳ್ಳುಪತ್ತೆ, ಮಂಪರು ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮಾಡುವಾಗ ಪರೀಕ್ಷಕರು, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷ ಅಥವಾ ನಾಯಕರ ಹೆಸರು ಹೇಳುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಲಲಿತ್ ಝಾ, ಅಮೋಲ್ ಶಿಂಧೆ ಮತ್ತು ಮಹೇಶ್ ಕುಮಾವತ್ ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಇಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರೆದುರು ಎಲ್ಲಾ ಆರು ಆರೋಪಿಗಳನ್ನು ಖುದ್ದು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಅವರಿಗೆ ವಿಧಿಸಿದ್ದ ನ್ಯಾಯಾಂಗ ಬಂಧನವನ್ನು ಮಾರ್ಚ್ 1ರವರೆಗೆ ವಿಸ್ತರಿಸಿದ್ದಾರೆ.

ಈ ಮಧ್ಯೆ, ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿ 17ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ. ಅರ್ಜಿಯಲ್ಲಿ ಪ್ರಸ್ತುತಪಡಿಸಿದ ಆರೋಪಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಅದು ನಿರ್ದೇಶನ ನೀಡಿದೆ.

ಕಳೆದ ವರ್ಷ ಡಿಸೆಂಬರ್ 13ರಂದು ಲೋಕಸಭಾ ಕಲಾಪದ ಸಮಯದಲ್ಲಿ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಹಳದಿ ಹೊಗೆ ಸೂಸುವ ಡಬ್ಬಿಗಳೊಂದಿಗೆ ಅಧಿವೇಶನ ನಡೆಯುತ್ತಿದ್ದ ಜಾಗಕ್ಕೆ ನೆಗೆದಿದ್ದರು. ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರು.

ಇದೇ ವೇಳೆ, ಸಂಸತ್ತಿನ ಕಟ್ಟಡದ ಹೊರಗೆ ಹಳದಿ ಹೊಗೆ ಸೂಸುವ ಕ್ಯಾನ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಅಮೋಲ್ ಶಿಂಧೆ ಮತ್ತು ನೀಲಂ ಎಂಬ ಇನ್ನಿಬ್ಬರನ್ನು ಸಹ ಬಂಧಿಸಲಾಗಿತ್ತು. ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ಲಲಿತ್ ಝಾನನ್ನು ಡಿಸೆಂಬರ್ 14ರಂದು ಪೊಲೀಸರು ಬಂಧಿಸಿದ್ದರು. ಜ.18ರಂದು ನೀಲಂ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

Kannada Bar & Bench
kannada.barandbench.com