[ಸಂಸತ್‌ ಭದ್ರತಾ ಲೋಪ] ಸಂಚುಕೋರರು ದೇಶದಲ್ಲಿ ಅರಾಜಕತೆ ಉಂಟುಮಾಡ ಬಯಸಿದ್ದರು: ನ್ಯಾಯಾಲಯಕ್ಕೆ ದೆಹಲಿ ಪೊಲೀಸರ ವಿವರಣೆ

ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್‌ನನ್ನು ಏಳು ದಿನಗಳ ಪೊಲೀಸ್ ವಶಕ್ಕೆ ನೀಡಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರದೀಪ್‌ ಕೌರ್ ಆದೇಶ ಹೊರಡಿಸಿದ್ದಾರೆ.
ಸಂಸತ್ತು
ಸಂಸತ್ತು
Published on

ಸಂಸತ್‌ ಭವನದ ಭದ್ರತೆ ಉಲ್ಲಂಘಿಸಿ ಲೋಕಸಭೆಯಲ್ಲಿ ಪ್ರತಿಭಟನೆಯ ಪಿತೂರಿ ನಡೆಸಿದ ಆರು ಜನ ತಮ್ಮ ಕಾನೂನು ಬಾಹಿರ ಬೇಡಿಕೆಗಳ ಈಡೇರಿಕೆಗಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಯಸಿದ್ದರು ಎಂದು ದೆಹಲಿ ಪೊಲೀಸರು ಶನಿವಾರ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. 

ದೆಹಲಿ ಪೊಲೀಸರ ಪರವಾಗಿ ಹಾಜರಾದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಅವರು ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರದೀಪ್‌ ಕೌರ್ ಅವರಿಗೆ ಸುಮಾರು ಎರಡು ವರ್ಷಗಳಿಂದ 'ಪಿತೂರಿ' ನಡೆಯುತ್ತಿದೆ, 'ಸಂಚುಕೋರರು' ದೆಹಲಿ, ಗುರುಗ್ರಾಮ ಹಾಗೂ ಮೈಸೂರಿನಲ್ಲಿ ಸಭೆ ನಡೆಸಿದ್ದಾರೆ ಎಂದು ಹೇಳಿದರು.

"ಅವರು ತಮ್ಮ ಕಾನೂನುಬಾಹಿರ ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಅರಾಜಕತೆಯ ಪರಿಸ್ಥಿತಿ ಸೃಷ್ಟಿಸಲು ಬಯಸಿದ್ದರು. ಅವರು ಆಯ್ಕೆ ಮಾಡಿದ ಸಮಯವನ್ನೇ ನೋಡಿ- ಸಂಸತ್ ಅಧಿವೇಶನ ನಡೆಯುತ್ತಿರುವಾಗ ಹೀಗೆ ಮಾಡಿದ್ದಾರೆ" ಎಂದು ಸಿಂಗ್ ಹೇಳಿದರು.

ದೆಹಲಿ ಪೊಲೀಸರು ಇಂದು ಬಂಧಿಸಿರುವ ಆರನೇ ಆರೋಪಿ ಮಹೇಶ್ ಕುಮಾವತ್ ಅವರನ್ನು ಪೊಲೀಸ್‌ ವಶಕ್ಕೆ ಒಪ್ಪಿಸುವಂತೆ ಕೋರುವಾಗ ಪಬ್ಲಿಕ್ ಪ್ರಾಸಿಕ್ಯೂಟರ್ ಈ ವಿವರ ನೀಡಿದರು.

ಸಾಕ್ಷ್ಯ ನಾಶದಲ್ಲಿ ಕುಮಾವತ್ 'ಮಾಸ್ಟರ್ ಮೈಂಡ್' ಲಲಿತ್ ಝಾ ಜೊತೆ ಭಾಗಿಯಾಗಿದ್ದ ಎಂದು ಅವರು ಹೇಳಿದರು. 

ವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶ ಕೌರ್ ಅವರು ಕುಮಾವತ್‌ನನ್ನು ಏಳು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದರು.

ವಿಚಾರಣೆಯ ಸಮಯದಲ್ಲಿ, ಕುಮಾವತ್ ಹೇಳಿಕೆ ನೀಡಿ ತನ್ನನ್ನು ಏಕೆ ಬಂಧಿಸಲಾಯಿತು ಎಂಬುದರ ಬಗ್ಗೆ ತನಗೆ ಮಾಹಿತಿ ನೀಡಲಾಗಿಲ್ಲ. ಪ್ರಥಮ ಮಾಹಿತಿ ವರದಿ (ಎಫ್ಐಆರ್) ಇಂಗ್ಲಿಷ್ ನಲ್ಲಿದ್ದು ತಾನು ಒಂಬತ್ತನೇ ತರಗತಿಯವರೆಗೆ ಮಾತ್ರ ಓದಿರುವುದರಿಂದ ಅದು ತನಗೆ ಅರ್ಥವಾಗದ ಭಾಷೆಯಾಗಿದೆ ಎಂದು ಹೇಳಿದ.

ಈ ಹೇಳಿಕೆ ನಿರಾಕರಿಸಿದ ಸಿಂಗ್‌ ಆತನ ಬಂಧನದ ಕಾರಣವನ್ನು ಪೊಲೀಸರು ಆತನಿಗೆ ವಿವರಿಸಿದ್ದಾರೆ ಎಂದು ಹೇಳಿದರು. 

ಡಿಸೆಂಬರ್ 13 ರಂದು ಲೋಕಸಭಾ ಕಲಾಪದ ಸಮಯದಲ್ಲಿ, ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಸಂದರ್ಶಕರ ಗ್ಯಾಲರಿಯಿಂದ ಹಳದಿ ಹೊಗೆ ಸೂಸುವ ಡಬ್ಬಿಗಳೊಂದಿಗೆ ಅಧಿವೇಶನ ನಡೆಯುತ್ತಿದ್ದ ಜಾಗಕ್ಕೆ ನೆಗೆದಿದ್ದರು. ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿದ್ದರು.

ಸಂಸತ್ತಿನ ಕಟ್ಟಡದ ಹೊರಗೆ ಹಳದಿ ಹೊಗೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಅಮೋಲ್ ಶಿಂಧೆ ಮತ್ತು ನೀಲಂ ಎಂಬ ಇನ್ನಿಬ್ಬರನ್ನು ಸಹ ಬಂಧಿಸಲಾಗಿತ್ತು. 'ಮಾಸ್ಟರ್ ಮೈಂಡ್' ಲಲಿತ್ ಝಾನನ್ನು ಡಿಸೆಂಬರ್ 14ರಂದು ಪೊಲೀಸರು ಬಂಧಿಸಿದ್ದರು.

ಎಲ್ಲಾ ಆರೋಪಿಗಳು ಈಗ ಪೊಲೀಸ್ ವಶದಲ್ಲಿದ್ದಾರೆ.

ಶನಿವಾರ, ನೀಲಂ ಆಜಾದ್ ಅವರ ಪೋಷಕರು ತಮ್ಮ ಮಗಳನ್ನು ಭೇಟಿ ಮಾಡಲು ಮತ್ತು ಎಫ್ಐಆರ್ ಪ್ರತಿ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

ನ್ಯಾಯಾಲಯ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com