ಸಂಸತ್ ಭವನ ಭದ್ರತಾ ಉಲ್ಲಂಘನೆ: ನೀಲಂ ಆಜಾದ್‌ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಡಿಸೆಂಬರ್ 13ರಂದು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಆಜಾದ್ ಅವರನ್ನು ಬಂಧಿಸಲಾಗಿತ್ತು. ಆಕೆಗೆ ಜಾಮೀನು ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ದೆಹಲಿ ಪೊಲೀಸರು ವಾದಿಸಿದ್ದರು.
ಸಂಸತ್ ಭವನ
ಸಂಸತ್ ಭವನ

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಆರೋಪಿ ನೀಲಂ ಆಜಾದ್‌ಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿದೆ.

ನೀಲಂ ಜಾಮೀನು ಅರ್ಜಿಯನ್ನು ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ತಿರಸ್ಕರಿಸಿದರು.

ಪ್ರಕರಣದ ತನಿಖೆ ಆರಂಭಿಕ ಹಂತದಲ್ಲಿದ್ದು ನೀಲಂ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ, ಏಕೆಂದರೆ ಆಕೆ ಭಾರತದ ಸಾರ್ವಭೌಮತ್ವ ಮತ್ತು ಏಕತೆಯನ್ನು ಭಂಗಗೊಳಿಸುವ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

"ಮೇಲಿನ ಚರ್ಚೆಗಳ ದೃಷ್ಟಿಯಿಂದ, ಅರ್ಜಿದಾರೆ / ಆರೋಪಿ ವಿರುದ್ಧ ಮಾಡಲಾಗಿರುವ ಆರೋಪಗಳ ಸ್ವರೂಪ ಮತ್ತು ಗಂಭೀರತೆಯ ಜೊತೆಗೆ ತನಿಖೆ ಆರಂಭಿಕ ಹಂತದಲ್ಲಿರುವುದನ್ನು ಪರಿಗಣಿಸಿ, ಅರ್ಜಿದಾರೆ / ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಇದು ಸೂಕ್ತ ಪ್ರಕರಣವೆಂದು ನಾನು ಭಾವಿಸುವುದಿಲ್ಲ. ಪ್ರಸ್ತುತ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ತಿಳಿಸಿದೆ.

ಸಾಗರ್ ಶರ್ಮಾ, ಮನೋರಂಜನ್ ಡಿ ಮತ್ತು ಅಮೋಲ್ ಶಿಂಧೆ ಅವರೊಂದಿಗೆ ನೀಲಂ ಅವರನ್ನು ದೆಹಲಿ ಪೊಲೀಸರು ಡಿಸೆಂಬರ್ 13, 2024ರಂದು ಬಂಧಿಸಿದ್ದರು.

ಆಜಾದ್ ಮತ್ತು ಶಿಂಧೆ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರೆ, ಶರ್ಮಾ ಮತ್ತು ಮನೋರಂಜನ್ ಡಿ ಸಂದರ್ಶಕರ ಗ್ಯಾಲರಿಯಿಂದ ಹೊಗೆ ಸೂಸುವ ಡಬ್ಬಿಗಳೊಂದಿಗೆ ಲೋಕಸಭಾ ಸದನದ ಅಂಗಳಕ್ಕೆ ಜಿಗಿದಿದ್ದರು.

'ಪಿತೂರಿ'ಯ ಹಿಂದಿನ ಸೂತ್ರಧಾರ ಲಲಿತ್ ಝಾ ಮತ್ತು ಇನ್ನೊಬ್ಬ ಆರೋಪಿ ಮಹೇಶ್ ಕುಮಾವತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನೀಲಂ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ದೆಹಲಿ ಪೊಲೀಸರು ಅಪರಾಧದಲ್ಲಿ ಅವರು ಭಾಗಿಯಾಗಿರುವುದನ್ನು ಸಾಬೀತುಪಡಿಸುವ ಸಾಕಷ್ಟು ಪುರಾವೆಗಳಿವೆ. ಜೊತೆಗೆ ಅವರ ಬಿಡುಗಡೆಯಿಂದ ತನಿಖೆಗೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದರು.

ಈ ಹಿಂದೆ ನೀಲಂ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಜೊತೆಗೆ ಆಕೆಗೆ ಎಫ್ಐಆರ್ ಪ್ರತಿ ಒದಗಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿತ್ತು.

Kannada Bar & Bench
kannada.barandbench.com