ಸಂಸತ್ ಅವಲೋಕನ: 370ನೇ ವಿಧಿ ರದ್ದತಿ ಬಳಿಕ ಕಾಶ್ಮೀರದಿಂದ 2,156 ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ

ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.
Parliament watch
Parliament watch
Published on

ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಗಳು, ಜೊತೆಗೆ ಎಲ್ಲಾ ನ್ಯಾಯಾಲಯಗಳಲ್ಲಿ 50 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳು ಹಾಗೂ ಕಾನೂನು ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಕೇಂದ್ರ ಕಾನೂನು ಸಚಿವಾಲಯ ಶುಕ್ರವಾರ ಲೋಕಸಭೆಗೆ ಉತ್ತರ ನೀಡಿದೆ.

ವಿಧಿ 370 ರದ್ದುಪಡಿಸಿದ ಬಳಿಕ ಆಗಸ್ಟ್ 2019ರಿಂದ ಜೂನ್ 2023ರ ನಡುವೆ ಸುಪ್ರೀಂ ಕೋರ್ಟ್‌ ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ 2,165 ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಕಾನೂನು ಸಚಿವಾಲಯ ಉತ್ತರಿಸಿದೆ. ಅನಂತನಾಗ್ ಲೋಕಸಭಾ ಕ್ಷೇತ್ರದ ಸದಸ್ಯ ಹಸ್ನೈನ್ ಮಸೂದಿ ಅವರು ಈ ಸಂಬಂಧ ಪ್ರಶ್ನೆ ಕೇಳಿದ್ದರು.

ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತಾ ಕಾಯಿದೆ- 1978ರ ಅಡಿಯಲ್ಲಿ ಬಂಧನ ಆದೇಶಗಳನ್ನು ಪ್ರಶ್ನಿಸುವ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆಯೇ ಎಂದು ಮಸೂದಿ ಪ್ರಶ್ನಿಸಿದ್ದರು. ಅದಕ್ಕೆ ಸಚಿವಾಲಯದ ಉತ್ತರ ಹೀಗಿದೆ:

“ಸರ್ಕಾರ ಇಲ್ಲವೇ ಪೊಲೀಸರು ಅಗತ್ಯ ಮಾಹಿತಿ ನೀಡಿದ್ದು ವಿಚಾರಣೆಯ ದಿನದಂದು ವಕೀಲರ ಉಪಸ್ಥಿತಿ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ನ್ಯಾಯಾಲಯಗಳಲ್ಲಿ ಲಭ್ಯವಿರುವ ದಾಖಲೆಗಳ ಸಕಾಲಿಕ ಮಂಡನೆಯನ್ನು ಖಚಿತಪಡಿಸಿಕೊಂಡಿರುತ್ತಾರೆ. ನ್ಯಾಯಾಲಯಗಳು ಅಂತಹ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲೆಂದು ಎಲ್ಲಿ ಅಗತ್ಯವಿರುತ್ತದೆಯೋ ಅಲ್ಲೆಲ್ಲಾ ಉಳಿದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ”

ದೇಶದ ಕಾನೂನು ಶಾಲೆಗಳಲ್ಲಿ 3,09,656 ಸೀಟುಗಳು ಲಭ್ಯ

ಕಾನೂನು ಶಿಕ್ಷಣ ಪಡೆಯಲು ದೇಶದ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳ ವಿವರಗಳನ್ನು ಮಚ್ಲಿಶಹರ್ ಲೋಕಸಭಾ ಸಂಸದೆ ಬಿ ಪಿ ಸರೋಜ್ ಅವರು ಪ್ರಶ್ನಿಸಿದ್ದರು.

ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆಯ (ಎಐಎಸ್‌ಹೆಚ್‌ಇ) ಅಂಕಿಅಂಶಗಳ ಪ್ರಕಾರ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ದೇಶದ ವಿವಿಧ ಕಾನೂನು ಶಾಲೆಗಳಲ್ಲಿ ಒಟ್ಟು 3,09,656 ಸೀಟುಗಳಿವೆ ಎಂದು ಮಾಹಿತಿ ನೀಡಿದೆ.

ಇವುಗಳಲ್ಲಿ 71,140 ಸೀಟುಗಳನ್ನು ಐದು ವರ್ಷಗಳ ಸಮಗ್ರ ಎಲ್‌ಎಲ್‌ಬಿ ಅಧ್ಯಯನಕ್ಕೆ ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಎಲ್‌ಎಲ್‌ಬಿ ಪದವಿಗಾಗಿ 2,11,763 ಸೀಟುಗಳನ್ನು ಮೀಸಲಿಡಲಾಗಿದೆ. ಎಲ್‌ಎಲ್‌ಎಂಗೆ 26,753 ಸೀಟುಗಳನ್ನು ನಿಗದಿಪಡಿಸಲಾಗಿದೆ.

ಹೆಚ್ಚುವರಿಯಾಗಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿರುವ ಮಾಹಿತಿ ಪ್ರಕಾರ, ಜನವರಿ 2019ರಿಂದ 2022ರ ನಡುವೆ, 311 ಹೊಸ ಕಾನೂನು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 68 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಉತ್ತರ ಪ್ರದೇಶದಲ್ಲಿ ಕಣ್ತೆರೆದಿವೆ. ರಾಜಸ್ಥಾನ, ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳಲ್ಲಿ ತಲಾ 31 ಕಾಲೇಜುಗಳನ್ನು ಸ್ಥಾಪಿಸಲಾಗಿದ್ದು. ಅಸ್ಸಾಂನಲ್ಲಿ 24 ಕಾಲೇಜುಗಳು ಅಸ್ತಿತ್ವಕ್ಕೆ ಬಂದಿವೆ.

ರಾಜ್ಯವಾರು ಮಾಹಿತಿ

New colleges and law universitiesLok Sabha questions
New colleges and law universitiesLok Sabha questions

ಹೈಕೋರ್ಟ್‌ಗಳಲ್ಲಿ 50 ವರ್ಷದಷ್ಟು ಹಳೆಯ 1,063 ಪ್ರಕರಣಗಳು

ಸಂಸದರಾದ ಶಾರದಾಬೆನ್ ಪಟೇಲ್ ಮತ್ತು ರಮೇಶ್ ಭಾಯ್ ಪಟೇಲ್ ಅವರು 50 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಬಯಸಿದರು.

ಸುಪ್ರೀಂ ಕೋರ್ಟ್‌ನ ಸಮಗ್ರ ಪ್ರಕರಣ ನಿರ್ವಹಣಾ ಮಾಹಿತಿ ವ್ಯವಸ್ಥೆಯಿಂದ (ಐಸಿಎಂಐಎಸ್‌) ಪಡೆದ ಮಾಹಿತಿ ಆಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ 50 ವರ್ಷಗಳಿಂದ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಸಚಿವಾಲಯ ಹೇಳಿದೆ.

ಜುಲೈ 31, 2023ರಂತೆ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ನಲ್ಲಿ (ಎನ್‌ಜೆಡಿಜಿ) ಲಭ್ಯವಿರುವ ಮಾಹಿತಿ ಪ್ರಕಾರ, ವಿವಿಧ ಹೈಕೋರ್ಟ್‌ಗಳಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ1,063 ಪ್ರಕರಣಗಳು ಬಾಕಿ ಉಳಿದಿವೆ. ಇದರಲ್ಲಿ ಒಂದೇ ಒಂದು ಕ್ರಿಮಿನಲ್‌ ಪ್ರಕರಣ ಇದೆ.

ಜಿಲ್ಲೆ ಹಾಗೂ ಉಳಿದ ಕೆಳ ನ್ಯಾಯಾಲಯಗಳಲ್ಲಿ ಇಂತಹ 1,134 ದೀರ್ಘಾವಧಿ ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ 347 ಕ್ರಿಮಿನಲ್ ಪ್ರಕರಣಗಳು ಮತ್ತು 787 ಸಿವಿಲ್ ಪ್ರಕರಣಗಳು ಸೇರಿವೆ.

Kannada Bar & Bench
kannada.barandbench.com