ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯದಿಂದ ಹಿಡಿದು ಜನಪ್ರತಿನಿಧಿಗಳ ವಿರುದ್ಧ ಸಿಬಿಐ ಹೂಡಿರುವ ಪ್ರಕರಣಗಳವರೆಗಿನ ವಿವಿಧ ವಿಷಯಗಳ ಕುರಿತಾದ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಬುಧವಾರ ಉತ್ತರಿಸಲಾಯಿತು.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (GHI) ಭಾರತದ ನಿರಂತರ ಕುಸಿತ ಕಾಣುತ್ತಿರುವುದನ್ನು ಪರಿಗಣಿಸಿ ದೇಶದಲ್ಲಿ ಮಕ್ಕಳ ಪೌಷ್ಟಿಕತೆಯ ಸ್ಥಿತಿ ಸುಧಾರಿಸಲು ಸರ್ಕಾರ ಮುಂದಾಗಿದೆಯೇ ಎಂದು ರಾಜ್ಯಸಭೆಯಲ್ಲಿ ಕೇರಳ ಸಂಸದ ಪಿ ಸಂತೋಷ್ ಕುಮಾರ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಪ್ರಶ್ನಿಸಿದರು.
ಆಗ ಸಚಿವೆ ಸ್ಮೃತಿ ಇರಾನಿ “ಜಿಎಚ್‌ಐ ಭಾರತದ ನೈಜ ಚಿತ್ರಣ ಬಿಂಬಿಸುವುದಿಲ್ಲ ಏಕೆಂದರೆ ಅದು ಹಸಿವಿನ ಕುರಿತಾದ ದೋಷಪೂರಿತ ಮಾನದಂಡ. ಸೂಚ್ಯಂಕವನ್ನು ಪ್ರಮುಖ ಅಳತೆಗೋಲಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಶಾಸಕರು ಮತ್ತು ಸಂಸದರ ವಿರುದ್ಧ ಸಿಬಿಐ ಎಷ್ಟು ಪ್ರಕರಣಗಳನ್ನು ದಾಖಲಿಸಿದೆ ಎಂದು ಟಿಎಂಸಿ ಲೋಕಸಭಾ ಸದಸ್ಯೆ ಮಾಲಾ ರಾಯ್ ಅವರು ಕೇಳಿದ ಪ್ರಶ್ನೆಗೆ ಈ ಅವಧಿಯಲ್ಲಿ ಇಂತಹ ಒಟ್ಟು 56 ಪ್ರಕರಣಗಳು ದಾಖಲಾಗಿವೆ ಎಂಬ ಉತ್ತರ ದೊರೆತಿದೆ.
ರಾಜ್ಯವಾರು ವಿವರ ಇಂತಿದೆ:
ಪಕ್ಷವಾರು ಸಂಖ್ಯೆಗಳ ಬದಲಾಗಿ, ಪ್ರಶ್ನೆಯಲ್ಲಿರುವ ಶಾಸಕರು ಮತ್ತು ಸಂಸದರು ಸೇರಿರುವ ರಾಜಕೀಯ ಪಕ್ಷಗಳ ಹೆಸರನ್ನು ಮಾತ್ರ ಕೋಷ್ಠಕದಲ್ಲಿ ಒದಗಿಸಲಾಗಿದೆ.
ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಘರ್ಹಿ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ, ಕಳೆದ 4 ವರ್ಷಗಳಲ್ಲಿ ದೇಶಾದ್ಯಂತ ದಲಿತರ ಮೇಲೆ 189,945 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂಬ ಉತ್ತರ ದೊರೆತಿದೆ. 2021ರಲ್ಲಿ 50,900 ಪ್ರಕರಣಗಳು ದಾಖಲಾಗಿವೆ. ದಾಖಲಾದ 189,945 ಪ್ರಕರಣಗಳ ಪೈಕಿ 42,292 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, 14,321 ಮಂದಿ ದೋಷಿ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಲೋಕಸಭಾ ಸಂಸದ ಪಿವಿ ಮಿಧುನ್ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸರ್ಕಾರ, ದೇಶದಾದ್ಯಂತ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಗಳಲ್ಲಿ 4,87,416 ಪ್ರಕರಣಗಳನ್ನು ದಾಖಲಿಸಲಾಗಿದೆ . ಈ ಪೈಕಿ 3,76,138 ವಿಲೇವಾರಿ ಮಾಡಲಾಗಿದ್ದು, 1,11,278 ಬಾಕಿ ಇವೆ ಎಂದು ಹೇಳಿದೆ.
ಜಿಲ್ಲಾ ಮಟ್ಟದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಗಳಲ್ಲಿ 19,21,765 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 14,92,203 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 4,29,562 ಬಾಕಿ ಇವೆ ಎಂಬ ವಿವರ ದೊರೆತಿದೆ.
ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಮತ್ತು ಡಾ ಅಮೀ ಯಾಜ್ನಿಕ್ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ, 2017-2021 ರಿಂದ ದೇಶಾದ್ಯಂತ ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆಯಡಿ 6,677 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಕ್ರಮವಾಗಿ 635, 734 ಮತ್ತು 755 ಪರವಾನಗಿ ರದ್ದಾಗಿವೆ.
ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳ ಕುರಿತು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ, 2018-2021ರ ನಡುವೆ 35,220 ಪ್ರಕರಣಗಳು ದಾಖಲಾಗಿವೆ ಎಂಬ ಉತ್ತರ ದೊರೆತಿದೆ. ಹೆಚ್ಚಿನ ಅಪರಾಧಗಳು (5,587) ಸೈಬರ್ ಅಶ್ಲೀಲತೆ ಅಥವಾ ಅಶ್ಲೀಲ ವಿಚಾರಗಳ ಹೋಸ್ಟಿಂಗ್ ಅಥವಾ ಅಶ್ಲೀಲ ಲೈಂಗಿಕ ವಿಚಾರಗಳನ್ನು ಪ್ರಕಟಿಸಿದಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ.