ವಿವಿಧ 14 ವಿಷಯಗಳ ವಿಭಾಗಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು 14 ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಿಹಾರ ಸಂಸದ ಸುಶೀಲ್ ಕುಮಾರ್ ಅವರ ಪ್ರಶ್ನೆಗೆ ಸಂಸತ್ ಅಧಿವೇಶನದಲ್ಲಿ ಒದಗಿಸಲಾಗಿರುವ ಉತ್ತರದಿಂದ ಈ ಅಂಶ ತಿಳಿದು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ 538 ತೀರ್ಪುಗಳನ್ನು ಭಾಷಾಂತರ ಮಾಡಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತ ವಾರ್ಷಿಕ ದತ್ತಾಂಶ ಕೆಳಕಂಡಂತಿದೆ:
ಕೃತಕ ಬುದ್ದಿಮತ್ತೆ (ಎಐ) ಆಧಾರಿತ ತಂತ್ರಾಂಶವಾಗಿರುವ ಸುಪ್ರೀಂ ಕೋರ್ಟ್ ವಿಧಿಕ್ ಅನುವಾದ್ ಸಾಫ್ಟ್‌ವೇರ್ (ಎಸ್‌ಯುವಿಎಎಸ್) ನ್ಯಾಯಾಂಗ ಕ್ಷೇತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಂಗ್ಲಿಷ್‌ನಿಂದ ಕನ್ನಡ, ಹಿಂದಿ, ತಮಿಳು, ತೆಲುಗು, ಪಂಜಾಬಿ, ಮರಾಠಿ, ಗುಜರಾತಿ, ಮಲೆಯಾಳಂ, ಬೆಂಗಾಲಿ, ಉರ್ದು ಭಾಷೆಗಳಿಗೆ ಹಾಗೂ ಈ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದ ಮಾಡುತ್ತದೆ.
ಹಿಂದಿಗೆ ಅತಿ ಹೆಚ್ಚು ಅಂದರೆ 290 ತೀರ್ಪುಗಳು ಅನುವಾದವಾಗಿದ್ದು, ನಂತರದ ಸ್ಥಾನದಲ್ಲಿ ಕ್ರಮವಾಗಿ ತಮಿಳು, ಮಲಯಾಳಂ, ಮರಾಠಿ, ಒಡಿಯಾ ಹಾಗೂ ಕನ್ನಡ ಭಾಷೆಗಳಿವೆ. ತಮಿಳಿಗೆ 76, ಮಲಯಾಳಂಗೆ 47, ಮರಾಠಿ ಹಾಗೂ ಒಡಿಯಾಗೆ ತಲಾ 26 ಹಾಗೂ ಕನ್ನಡಕ್ಕೆ 24 ತೀರ್ಪುಗಳು ಅನುವಾದಗೊಂಡಿವೆ.
ಭಾಷಾಂತರಕ್ಕೆ ಎಸ್‌ಯುವಿಎಎಸ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆಗೊಳಪಡಿಸಲು ಮತ್ತು ತರಬೇತಿಗಾಗಿ ಬಳಸಲು ಕೋರಲಾಗಿದೆ. ಪರೀಕ್ಷೆಯ ಅವಧಿಯಲ್ಲಿ 16,098 ದಾಖಲೆಗಳನ್ನು ಭಾಷಾಂತರಿಸಲಾಗಿದೆ ಎಂದು ಉತ್ತರದಲ್ಲಿ ವಿವರಿಸಲಾಗಿದೆ.