ಶಿಕ್ಷಕರ ಉದ್ಯೋಗ ಹಗರಣ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ 10 ದಿನಗಳ ಕಾಲ ಇ ಡಿ ವಶಕ್ಕೆ

ಇ ಡಿ ಸಲ್ಲಿಸಿದ ದಾಖಲೆಗಳಿಂದ ಅಪರಾಧ ತುಂಬಾ ಗಂಭೀರ ಸ್ವರೂಪದ್ದಾಗಿ ತೋರುತ್ತಿದ್ದು ₹ 21 ಕೋಟಿ ಮೊತ್ತದ ಭಾರಿ ಹಣ, ಚಿನ್ನಾಭರಣ ಹಾಗೂ ವಿದೇಶಿ ನೋಟುಗಳು ಪತ್ತೆಯಾಗಿವೆ ಎಂದು ನ್ಯಾಯಾಲಯ ಹೇಳಿದೆ.
Partha Chatterjee
Partha Chatterjee Facebook
Published on

ಶಿಕ್ಷಕರ ನೇಮಕಾತಿ ಹಗರಣದ ಆರೋಪಿ, ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಎನ್ನಲಾದ ಅರ್ಪಿತಾ ಅವರನ್ನು 10 ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇ ಡಿ) ವಶಕ್ಕೆ ನೀಡಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಚಾರಣೆ ನಡೆಸುವ ಕೊಲ್ಕತ್ತಾದ ವಿಶೇಷ ನ್ಯಾಯಾಲಯವೊಂದು ಸೋಮವಾರ ಆದೇಶ ಹೊರಡಿಸಿದೆ.

ಇ ಡಿ ಸಲ್ಲಿಸಿದ ದಾಖಲೆಗಳಿಂದ ಅಪರಾಧ ತುಂಬಾ ಗಂಭೀರ ಸ್ವರೂಪದ್ದಾಗಿ ತೋರುತ್ತಿದ್ದು ಸಹ ಆರೋಪಿ ಅರ್ಪಿತಾ ಮುಖರ್ಜಿ ಅವರ ಮನೆ ಶೋಧದ ವೇಳೆ ₹ 21 ಕೋಟಿ ಮೊತ್ತದ ಭಾರಿ ಹಣ, ಚಿನ್ನಾಭರಣ ಹಾಗೂ ವಿದೇಶಿ ನೋಟುಗಳು ಪತ್ತೆಯಾಗಿವೆ ಎಂದು ನ್ಯಾಯಾಲಯ ಹೇಳಿದೆ.

ತನಿಖೆ ಆರಂಭಿಕ ಹಂತದಲ್ಲಿದ್ದು ಸತ್ಯ ಏನೆಂಬುದನ್ನು ಪತ್ತೆ ಹಚ್ಚಲು ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬೇಕಿದೆ ಎಂದ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯ ಪಾರ್ಥ ಮತ್ತು ಅರ್ಪಿತಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಅವರನ್ನು ಆಗಸ್ಟ್ 3ರವರೆಗೆ ಇ ಡಿ ಕಸ್ಟಡಿಗೆ ಒಪ್ಪಿಸಿತು.

Also Read
ಭುವನೇಶ್ವರದ ಏಮ್ಸ್ ಆಸ್ಪತ್ರೆಗೆ ಪಾರ್ಥ ಚಟರ್ಜಿ ಸ್ಥಳಾಂತರ: ಜಾರಿ ನಿರ್ದೇಶನಾಲಯಕ್ಕೆ ಕಲ್ಕತ್ತಾ ಹೈಕೋರ್ಟ್ ಅನುಮತಿ

ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕ ಹುದ್ದೆ ಆಕಾಂಕ್ಷಿಗಳಲ್ಲಿ ಕೆಲವರಿಗೆ ಅಕ್ರಮವಾಗಿ ಉದ್ಯೋಗ ನೀಡಿ ಭಾರಿ ಮೊತ್ತದ ಹಣ ಗಳಿಸಿದ ಆರೋಪದಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಅವರ ವಿರುದ್ಧ ಆರೋಪ ಹೊರಿಸಲಾಗಿದೆ.

ಭಾನುವಾರ ಹಗರಣದ ವಿಚಾರಣೆಗೆಂದು ವಿಶೇಷ ಕಲಾಪ ನಡೆಸಿದ್ದ ಕಲ್ಕತ್ತಾ ಹೈಕೋರ್ಟ್‌ ಪಾರ್ಥ ಅವರನ್ನು ರಾಜ್ಯದಲ್ಲಿಯೇ ವೈದ್ಯಕೀಯ ಪರೀಕ್ಷೆಗೊಳಪಡಿಸುವ ಬದಲು ಒಡಿಶಾದ ಭುವನೇಶ್ವರದಲ್ಲಿರುವ ಏಮ್ಸ್‌ ಆಸ್ಪತ್ರೆಗೆ ಕಳುಹಿಸಲು ಇ ಡಿಗೆ ಅನುಮತಿ ನೀಡಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗಾಗಿ ಇರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಬೇಕೆಂದು ತಿಳಿಸಿತ್ತು.

ಪಾರ್ಥ ಅವರನ್ನು ಇ ಡಿ ವಶಕ್ಕೆ ಒಪ್ಪಿಸುವ ಮುನ್ನ ಏಮ್ಸ್‌ ನೀಡಿದ್ದ ವೈದ್ಯಕೀಯ ವರದಿಯನ್ನು ವಿಶೇಷ ನ್ಯಾಯಾಲಯ ಪರಿಗಣಿಸಿದೆ.

Kannada Bar & Bench
kannada.barandbench.com