ಇದು ಕೇವಲ ಟಿಆರ್‌ಪಿ ತಿರುಚುವ ಪ್ರಕರಣವಷ್ಟೇ ಅಲ್ಲ, ಇಡೀ ಅಪರಾಧದ ಮಾಸ್ಟರ್‌ಮೈಂಡ್‌ ದಾಸ್‌ಗುಪ್ತ: ಮುಂಬೈ ನ್ಯಾಯಾಲಯ

ಜನವರಿ 20ರಂದು ಮುಂಬೈ ಸೆಷನ್ಸ್‌ ನ್ಯಾಯಾಲಯವು ದಾಸ್‌ಗುಪ್ತ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಇದುವರೆಗೂ ವಿಸ್ತೃತವಾದ ಆದೇಶ ಪ್ರತಿ ಅಪ್‌ಲೋಡ್ ಆಗಿರಲಿಲ್ಲ.
Mumbai Sessions Court, Partho Dasgupta
Mumbai Sessions Court, Partho Dasgupta

ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರೀಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪಾರ್ಥೊ ದಾಸ್‌ಗುಪ್ತ ಜಾಮೀನು ಮನವಿ ತಿರಸ್ಕರಿಸಿರುವ ಮುಂಬೈ ಸೆಷನ್ಸ್‌ ನ್ಯಾಯಾಲಯವು ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌ (ಟಿಆರ್‌ಪಿ) ಹಗರಣವು ಸಾಮಾನ್ಯವಾದ ರೇಟಿಂಗ್‌ ತಿರುಚುವ ಪ್ರಕರಣಕ್ಕೂ ಮಿಗಿಲಾದುದು ಎಂದು ಇತ್ತೀಚಿನ ತನ್ನ ಆದೇಶದಲ್ಲಿ ಹೇಳಿದೆ.

ಸದರಿ ಪ್ರಕರಣದಲ್ಲಿ ಮುಖತಃ ತನಿಖೆ ನಡೆಸುವ ಅಗತ್ಯವಿದೆ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಎಂ ಎ ಭೋಸಲೆ ಹೇಳಿದ್ದಾರೆ. ಟಿಆರ್‌ಪಿ ಹಗರಣದ ಹಿನ್ನೆಲೆಯಲ್ಲಿ ಡಿಸೆಂಬರ್‌ 24ರಂದು ದಾಸ್‌ಗುಪ್ತ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಅವರನ್ನು ಡಿಸೆಂಬರ್‌ 31ರಂದು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ದಾಸ್‌ಗುಪ್ತ ಜಾಮೀನಿಗೆ ಸಂಬಂಧಿಸಿದಂತೆ ಜನವರಿ 19ರಂದು ತೀರ್ಪು ಕಾಯ್ದರಿಸಿದ್ದ ನ್ಯಾಯಾಲಯವು ಜನವರಿ 20ರಂದು ತೀರ್ಪು ನೀಡಿತ್ತು. ತೀರ್ಪಿನ ಆದೇಶ ಪ್ರತಿಯನ್ನು ಇತ್ತೀಚೆಗೆ ಅಪ್‌ಲೋಡ್‌ ಮಾಡಲಾಗಿದ್ದು, ಹಲವು ಪ್ರಮುಖ ಅಂಶಗಳು ಆದೇಶದಲ್ಲಿ ಗಮನಸೆಳೆದಿವೆ.

ಮುಂಬೈ ಪೊಲೀಸರು ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಅಪಾರ ಪ್ರಮಾಣದ ವಾಟ್ಸಾಪ್‌ ಸಂದೇಶ ರವಾನೆಯ ಕುರಿತು ವಿವರಿಸಿದ್ದನ್ನು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ರಿಪಬ್ಲಿಕ್‌ ಟಿವಿ ಚಾನೆಲ್‌ಗಳ ಟಿಆರ್‌ಪಿ ತಿರುಚುವ ಕುರಿತು ದಾಸ್‌ಗುಪ್ತ ಮತ್ತು ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಾಬ್‌ ಗೋಸ್ವಾಮಿ ನಡುವೆ ಪರಸ್ಪರ ವಾಟ್ಸಾಪ್‌ ಸಂದೇಶ ರವಾನೆ ಕುರಿತು ಸಹ ನ್ಯಾಯಾಲಯವು ಗಮನಹರಿಸಿದೆ.

“ವಾಟ್ಸಾಪ್ ಸಂದೇಶ ರವಾನೆಯ ಸಾಕ್ಷ್ಯ ಮೌಲ್ಯವನ್ನು ವಿಚಾರಣೆಯ ಸಮಯದಲ್ಲಿ ಪರೀಕ್ಷಿಸಲಾಗುತ್ತದೆ. ಅಲ್ಲದೇ, ತನಿಖಾಧಿಕಾರಿಗೆ ವಾಟ್ಸಾಪ್‌ ಸಂದೇಶಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಲಾಗಿದೆ.

“…ನನ್ನ ಮುಂದೆ ಇಡಲಾಗಿರುವ ದಾಖಲೆಗಳನ್ನು ಗಮನಿಸಿದರೆ ಇದು ಟಿಆರ್‌ಪಿ ತಿರುಚಿರುವ ಸಾಮಾನ್ಯ ಪ್ರಕರಣವಲ್ಲ, ಅದನ್ನೂ ಮೀರಿದ್ದು. ಅದಾಗ್ಯೂ, ವಾಟ್ಸಾಪ್‌ ಸಂದೇಶ ರವಾನೆಯ ಕುರಿತು ಯಾವುದೇ ಅಭಿಪ್ರಾಯಕ್ಕೆ ಬರುವುದಕ್ಕೂ ಮೊದಲು ವಾಟ್ಸಾಪ್‌ ಸಂದೇಶಗಳ ಕುರಿತು ವಿಸ್ತೃತ ತನಿಖೆ ನಡೆಸುವ ಅಗತ್ಯವಿದೆ” ಎಂದು ನ್ಯಾ. ಭೋಸಲೆ ಹೇಳಿದ್ದಾರೆ.

Also Read
[ಟಿಆರ್‌ಪಿ ಹಗರಣ] ಬಾರ್ಕ್‌ ಸಂಸ್ಥೆಯ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

ದಾಸ್‌ಗುಪ್ತ ಸಂದೇಶ ರವಾನೆಯ ಸಂದರ್ಭದಲ್ಲಿ ಬಳಸಿರುವ ಸಂಕೇತಾಕ್ಷರಗಳ (ಕೋಡ್‌ವರ್ಡ್‌) ಬಗ್ಗೆಯೂ ನ್ಯಾಯಾಲಯ ಗಮನ ನೆಟ್ಟಿದೆ. “…ಆರೋಪಿ/ ಅರ್ಜಿದಾರರು ಅದರ ಕುರಿತು ವಿವರಿಸಲು ಸರಿಯಾದ ವ್ಯಕ್ತಿಯಾಗಿದ್ದಾರೆ. ಇದಕ್ಕೆ ಮುಖತಃ ಎದಿರುಬದಿರಾಗಿಸಿ ತನಿಖೆ ನಡೆಸುವ ಅಗತ್ಯವಿದೆ,” ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇತರೆ ಹದಿನಾಲ್ಕು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ದಾಸ್‌ಗುಪ್ತ ಇಡೀ ಹಗರಣದಲ್ಲಿ ಮಾಸ್ಟರ್‌ ಮೈಂಡ್‌ ಆಗಿದ್ದಾರೆ. ತಮ್ಮ ಸಿಇಒ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ರೇಟಿಂಗ್‌ ಅನ್ನು ತಿರುಚಿದ್ದಾರೆ ಎಂಬುದನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ನ್ಯಾಯಾಲಯವು ದಾಸ್‌ಗುಪ್ತ ಅವರ ಜಾಮೀನು ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.

Related Stories

No stories found.
Kannada Bar & Bench
kannada.barandbench.com