ಪಕ್ಷಕಾರರು ಮಧ್ಯಸ್ಥಿಕೆ ತೀರ್ಪನ್ನು ಒಪ್ಪಿಕೊಳ್ಳಬೇಕು, ಮತ್ತೆ ಮತ್ತೆ ಪ್ರಶ್ನಿಸಲು ಹೋಗಬಾರದು: ನ್ಯಾ. ಕೌಲ್

ಈ ನಿಟ್ಟಿನಲ್ಲಿ, ನ್ಯಾಯಾಲಯಗಳಲ್ಲಿ ಕಾನೂನು ಸವಾಲುಗಳಿಗೆ ಒಳಪಡುವ ಮಧ್ಯಸ್ಥಿಕೆ ಪ್ರಕರಣಗಳನ್ನು ಸರ್ಕಾರ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷಕಾರರು ಮಧ್ಯಸ್ಥಿಕೆ ತೀರ್ಪನ್ನು ಒಪ್ಪಿಕೊಳ್ಳಬೇಕು, ಮತ್ತೆ ಮತ್ತೆ ಪ್ರಶ್ನಿಸಲು ಹೋಗಬಾರದು: ನ್ಯಾ. ಕೌಲ್

ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ತೊಡಗಿರುವ ಪಕ್ಷಕಾರರು ಮತ್ತೆ ಮತ್ತೆ ನ್ಯಾಯಾಲಯಗಳಿಗೆ ಎಡತಾಕುವ ಬದಲು ನೀಡಲಾದ ತೀರ್ಪನ್ನು ಒಪ್ಪಿಕೊಳ್ಳುವುದನ್ನು ಕಲಿಯಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ತಿಳಿಸಿದರು.

ದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಭಾನುವಾರ ನಗರದಲ್ಲಿ ಆಯೋಜಿಸಿದ್ದ ದೆಹಲಿ ಮಧ್ಯಸ್ಥಿಕೆ ಸಪ್ತಾಹ 2023ರ ಸಮಾರೋಪ ಸಮಾರಂಭದಲ್ಲಿ ಅವರು ಮಧ್ಯಸ್ಥಿಕೆ ನೋಟ 2030- ಏನು ಹೇಳುತ್ತದೆ ಭವಿಷ್ಯ ಎಂಬ ವಿಷಯದ ಕುರಿತು  ಮಾತನಾಡಿದರು.

ದೇಶದಲ್ಲಿ ಮಧ್ಯಸ್ಥಿಕೆ ವ್ಯವಸ್ಥೆಯ ಸೊಗಸನ್ನು ಹರಡಲು ಮತ್ತಷ್ಟು ಕಾಯಿದೆಗಳು, ತಿದ್ದುಪಡಿಗಳು ಹಾಗೂ ತೀರ್ಪುಗಳ ಅಗತ್ಯವಿದೆ ಎಂದ ಅವರು “ಭಾರತ ಸದಾ ಪರ್ಯಾಯ ವ್ಯಾಜ್ಯ ಪರಿಹಾರ ನಿಯಂತ್ರಿಸುವ ವ್ಯವಸ್ಥೆಗೆ ಬದ್ಧವಾಗಿರುವ ದೇಶಗಳ ಭಾಗವಾಗಲು ಬಯಸುತ್ತದೆ” ಎಂಬುದಾಗಿ ತಿಳಿಸಿದರು.

ಭಾರತವು ಮಧ್ಯಸ್ಥಿಕೆ ಸ್ನೇಹಿ ಆಡಳಿತದತ್ತ ಸಾಗಲು ಕಾರಣವಾದ ಎರಡು ಅಂಶಗಳನ್ನು ವಿವರಿಸಿದ ಅವರು ಈ ಕ್ಷೇತ್ರಗಳಲ್ಲಿ ಹೆಚ್ಚು ಸಕಾರಾತ್ಮಕ ಬದಲಾವಣೆಗಳನ್ನು ಕಾಣಬಹುದು ಎಂದು ಅವರು ಹೇಳಿದರು.

1. ದೇಶದಲ್ಲಿ ಮಧ್ಯಸ್ಥಿಕೆ ವಿಧಾನದ ಸಾಂಸ್ಥೀಕರಣ

ಅಂತರರಾಷ್ಟ್ರೀಯ ವಾಣಿಜ್ಯ ಮಂಡಳಿ  (ICC) ಮತ್ತು ಲಂಡನ್ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (LCIA) ರೀತಿಯ ಅಂತರಾಷ್ಟ್ರೀಯ ಸಂಸ್ಥೆಗಳ ಆಗಮನ, ಭಾರತೀಯ ಮಧ್ಯಸ್ಥಿಕೆ ಮಂಡಳಿ (ICA) , ದೆಹಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (DIAC) ಮುಂಬೈ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ರೀತಿಯ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡಿದೆ ಎಂದು ಅವರು ವಿವರಿಸಿದರು.

ಇದಲ್ಲದೆ, ಮಧ್ಯಸ್ಥಿಕೆ ಕಾಯಿದೆಗೆ 2019ರಲ್ಲಿ ಮಾಡಲಾದ ತಿದ್ದುಪಡಿಗಳು ಭಾರತದಲ್ಲಿ ಮಧ್ಯಸ್ಥಿಕೆಯ ಸಾಂಸ್ಥಿಕೀಕರಣವನ್ನು ಸುಧಾರಿಸಲು ಬಯಸುತ್ತವೆ ಮತ್ತು ಮಧ್ಯಸ್ಥಿಕೆ ಮಸೂದೆಯು ಈ ಸಾಂಸ್ಥಿಕೀಕರಣಕ್ಕೆ ಸಜ್ಜಾಗಿದೆ ಎಂದು ಹೇಳಿದರು.

2. ನ್ಯಾಯಾಲಯಗಳು ಮಧ್ಯಸ್ಥಿಕೆ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವುದು

ನ್ಯೂಯಾರ್ಕ್‌ ಒಪ್ಪಂದದ ತಳಹದಿ ಎನಿಸಿರುವ ಮಧ್ಯಸ್ಥಿಕೆ ತೀರ್ಪುಗಳಲ್ಲಿ ಹಸ್ತಕ್ಷೇಪ ಮಾಡದಿರುವ ತತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವುದರತ್ತ ಭಾರತೀಯ ನ್ಯಾಯಾಲಯಗಳು  ಹೊರಳಿವೆ  ಎಂದು ಅವರು ಅಭಿಪ್ರಾಯಪಟ್ಟರು. ಇಂತಹ ಮಧ್ಯಸ್ಥಿಕೆ ತೀರ್ಪುಗಳಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್‌ ತುಂಬಾ ನಿಧಾನಗತಿಯಲ್ಲಿದೆ. ಸುಪ್ರೀಂ ಕೋರ್ಟ್‌ ಉತ್ತರಿಸದೇ ಇರುವ ಕೆಲ ವಿಶಿಷ್ಟ ಅಂಶಗಳನ್ನು ಎತ್ತಿ ತೋರಿದರೆ ಕಾನೂನನ್ನು ಇತ್ಯರ್ಥಗೊಳಿಸುವ ದೃಷ್ಟಿಯಿಂದ ಮಾತ್ರ ಅದು ಮೇಲ್ಮನವಿಯನ್ನು ಪರಿಗಣಿಸಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

 ಈ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ಮಧ್ಯಸ್ಥಿಕೆ ತೀರ್ಪನ್ನು ಪರಿಶೀಲನೆ ಮಾಡುವ ಸಂಘರ್ಷದಿಂದ ಯಾವುದೇ ಅರ್ಥವಿಲ್ಲ ಎಂದ ಅವರು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ನೀಡುವ ತೀರ್ಪುಗಳನ್ನು ಸ್ವೀಕರಿಸುವುದನ್ನು ಪಕ್ಷಕಾರರು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

Related Stories

No stories found.
Kannada Bar & Bench
kannada.barandbench.com