ನ್ಯಾಯಾಲಯವು ಪೊಲೀಸರು ಸಲ್ಲಿಸಿರುವ ಬಿ ವರದಿ ಪರಿಗಣಿಸಲು ಬಾಕಿ ಇದ್ದಾಗ ಪಾಸ್‌ಪೋರ್ಟ್‌ ನಿರಾಕರಿಸಬಹುದು: ಹೈಕೋರ್ಟ್‌

ʼಬಿʼ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂದು ಹೇಳಲಾಗದು. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ತಪ್ಪು ಕಂಡು ಬರುತ್ತಿಲ್ಲ ಎಂದ ಪೀಠ.
Justice M Nagaprasanna and Karnataka HC
Justice M Nagaprasanna and Karnataka HC

“ಅಪರಾಧ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಧಾರಗಳಿಲ್ಲ ಎಂದು ತಿಳಿಸಿ ಪೊಲೀಸರು ಸಲ್ಲಿಸಿದ ‘ಬಿ’ ರಿಪೋರ್ಟ್ ನ್ಯಾಯಾಲಯದ ಅಂಗೀಕಾರಕ್ಕೆ ಬಾಕಿಯಿರುವಾಗ ಆರೋಪಿ ಪ್ರಕರಣದಿಂದ ದೋಷಮುಕ್ತನಾಗಿದ್ದಾರೆ ಎಂದರ್ಥವಲ್ಲ. ಇಂತಹ ಸಂದರ್ಭದಲ್ಲಿ ಆರೋಪಿಗೆ ಪಾಸ್‌ಪೋರ್ಟ್ ವಿತರಿಸುವುದಕ್ಕೆ ನಿರಾಕರಿಸಲು ಪಾಸ್‌ಪೋರ್ಟ್ ಪ್ರಾಧಿಕಾರಕ್ಕೆ ಅಧಿಕಾರವಿರುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ಒಪ್ಪಿಸುವಂತೆ ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ನೀಡಿದ್ದ ಸೂಚನೆ ಪ್ರಶ್ನಿಸಿ ಮೈಸೂರು ನಿವಾಸಿ ಕಾಜಲ್ ನರೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಇತ್ಯರ್ಥಪಡಿಸಿದೆ.

ಪಾಸ್‌ಪೋರ್ಟ್ ಕಾಯಿದೆ-1967ರ ಸೆಕ್ಷನ್ 6(2)(ಎಫ್) ಪ್ರಕಾರ, ಕ್ರಿಮಿನಲ್ ಆರೋಪ ಹೊತ್ತಿರುವವರ ವಿರುದ್ಧ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿಯಿರುವಾಗ ಆರೋಪಿತರಿಗೆ ಪಾಸ್‌ಪೋರ್ಟ್ ನಿರಾಕರಿಸುವ ಅಧಿಕಾರ ಪಾರ್ಸ್‌ಪೋಟ್ ಪ್ರಾಧಿಕಾರ ಹೊಂದಿರುತ್ತದೆ. ಆದರೆ, ಕ್ರಿಮಿನಲ್ ಪ್ರಕರಣದ ವಿಚಾರಣಾ ಪ್ರಕ್ರಿಯೆ ಎದುರಿಸುತ್ತಿರುವ ಅರ್ಜಿದಾರರು, ಖುಲಾಸೆಗೊಂಡರೆ ಅಥವಾ ಆರೋಪ ಮುಕ್ತರಾದರೆ ಅಥವಾ ಅವರ ವಿರುದ್ಧದ ಪ್ರಕರಣ ರದ್ದಾದರೆ, ಕಾಯಿದೆಯ ಸೆಕ್ಷನ್ 6(2)(ಎಫ್) ಅನ್ನು ತೀವ್ರತೆ ಕಡಿಮೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

“ಅರ್ಜಿದಾರರಿಗೆ ಪಾರ್ಸ್ ಪೋರ್ಟ್ ಅನ್ನು ಮರು ವಿತರಣೆ ಮಾಡಲಾಗಿದೆ. ಮರು ವಿತರಣೆಗೆ ಕೋರಿದಾಗ ಅರ್ಜಿದಾರರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರವನ್ನು ಮುಚ್ಚಿಟ್ಟಿದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಪೊಲೀಸರು ಸಲ್ಲಿಸಿರುವ ಬಿ ರಿಫೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯ ಅಂಗೀಕರಿಸಬೇಕಿದೆ. ಹೀಗಾಗಿ, ಬಿ ರಿಪೋರ್ಟ್ ಸಲ್ಲಿಕೆಯಾದ ಮಾತ್ರಕ್ಕೆ ಅರ್ಜಿದಾರರು ಆರೋಪದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಪಾಸ್‌ಪೋರ್ಟ್ ಅನ್ನು ವಶಕ್ಕೆ ನೀಡುವಂತೆ ಆರ್‌ಒಪಿ ನೀಡಿರುವ ಸೂಚನೆಯಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ” ಎಂದಿದೆ.

“ವಿದೇಶಕ್ಕೆ ತೆರಳುವ ಅಗತ್ಯವಿದ್ದರೆ ಆ ಕುರಿತು ಅಗತ್ಯ ನಿರ್ದೇಶನಕ್ಕಾಗಿ ಅರ್ಜಿದಾರರು ಪಾಸ್‌ಪೋರ್ಟ್ ಅಧಿಕಾರಿಗಳ ಮುಂದೆ ಮತ್ತು ಪ್ರಕರಣ ಬಾಕಿಯಿರುವ ವಿಚಾರಣಾಧೀನ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಬಹುದು” ಎಂದು ಹೇಳಿ ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ಪಾಸ್‌ಪೋರ್ಟ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ (ಆರ್‌ಪಿಒ) ಅರ್ಜಿದಾರರಿಗೆ ಪಾಸ್‌ಪೋರ್ಟ್ ಮರು ವಿತರಣೆ ಮಾಡಿದ್ದರು. ಈ ಕುರಿತು ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು, ಅದನ್ನು ಅವರು ಮರೆಮಾಚಿರುವ ಸಂಗತಿ ಬೆಳಕಿಗೆ ಬಂದಿತ್ತು. ಕ್ರಿಮಿನಲ್ ಪ್ರಕರಣ ಬಾಕಿಯಿರುವ ವಿಚಾರ ಮುಚ್ಚಿಟ್ಟು ಪಾರ್ಸ್‌ಪೋರ್ಟ್ ಪಡೆದಿದ್ದಾರೆ. ಹಾಗಾಗಿ, ಪಾಸ್‌ಪೋರ್ಟ್ ತಮ್ಮ ಸುಪರ್ದಿಗೆ ನೀಡಬೇಕು ಎಂದು ಆರ್‌ಪಿಒ ಸೂಚಿಸಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲ ಮೋಹನ್‌ ಬಿ ಕೆ ಅವರು “ಕಾಜಲ್ ನರೇಶ್ ಕುಮಾರ್ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪಾರ್ಸ್‌ಪೋರ್ಟ್ ಕಾಯಿದೆ ಸೆಕ್ಷನ್ 12(ಬಿ) ಪ್ರಕಾರ ಅರ್ಜಿದಾರರು ಯಾವುದೇ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಮಾತ್ರ ಪಾಸ್‌ಪೋರ್ಟ್ ಶರಣಾಗತಿ ಮಾಡಬೇಕಾಗುತ್ತದೆ. ಈ ನಿಯಮ ಪ್ರಕರಣದಲ್ಲಿ ಅನ್ವಯವಾಗುತ್ತಿಲ್ಲ” ಎಂದು ವಾದಿಸಿದ್ದರು.

ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಪಾಸ್‌ಪೋರ್ಟ್ ಅವಧಿ ಮುಗಿದ ಕಾರಣ ಮರು ವಿತರಣೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಕಾಯಿದೆಯ ನಿಯಮಗಳ ಪ್ರಕಾರ, ಅಪರಾಧ ಪ್ರಕರಣಗಳಿಂದ ಮುಕ್ತರಾಗಿರಬೇಕು. ಬಿ ರಿಪೋರ್ಟ್ ಸಲ್ಲಿಸಿದ ಮಾತ್ರಕ್ಕೆ ಅಪರಾಧದಿಂದ ಮುಕ್ತರಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕು ಎಂದಲ್ಲ. ಬಿ ರಿಫೋರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು” ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Related Stories

No stories found.
Kannada Bar & Bench
kannada.barandbench.com