ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆ ಯಾಚಿಸಿದ ಪತಂಜಲಿ ಹಾಗೂ ಆಚಾರ್ಯ ಬಾಲಕೃಷ್ಣ

ಆಯುರ್ವೇದಕ್ಕೆ ಪ್ರೋತ್ಸಾಹ ನೀಡಲೆಂದು ಹೊರತರಲಾದ ಈ ಜಾಹೀರಾತುಗಳನ್ನು ಕಂಪೆನಿ ಮತ್ತೆ ಪ್ರಕಟಿಸುವುದಿಲ್ಲ ಎಂದು ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.
ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ, ಪತಂಜಲಿ ಹಾಗೂ ಸುಪ್ರೀಂ ಕೋರ್ಟ್
ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ, ಪತಂಜಲಿ ಹಾಗೂ ಸುಪ್ರೀಂ ಕೋರ್ಟ್ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ (ಫೇಸ್‌ಬುಕ್‌)

ವೈಜ್ಞಾನಿಕ ತಳಹದಿಯ ಔಷಧಗಳನ್ನು (ಎವಿಡೆನ್ಸ್‌ ಬೇಸ್ಡ್‌ ಮೆಡಿಸಿನ್‌- ಇಬಿಎಂ) ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚಿಸಿದ್ದಾರೆ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಆಯುರ್ವೇದಕ್ಕೆ ಪ್ರೋತ್ಸಾಹ ನೀಡಲೆಂದು ಹೊರತರಲಾದ ಈ ಜಾಹೀರಾತುಗಳನ್ನು ಕಂಪೆನಿ ಮತ್ತೆ ಪ್ರಕಟಿಸುವುದಿಲ್ಲ ಎಂದು ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ. ಪುರಾತನ ಸಾಹಿತ್ಯ ಮತ್ತು ಆಯುರ್ವೇದ ಸಂಶೋಧನೆಯಿಂದ ಬೆಂಬಲಿತವಾದ ಪತಂಜಲಿಯ ಉತ್ಪನ್ನಗಳನ್ನು ಸೇವಿಸುವ ಮೂಲಕ ಜೀವನ ಶೈಲಿ ಸಂಬಂಧಿತ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು, ಆರೋಗ್ಯಕರ ಜೀವನ ನಡೆಸಲು ಈ ದೇಶದ ಜನರನ್ನು ಉತ್ತೇಜಿಸುವುದಷ್ಟೇ ತನ್ನ ಉದ್ದೇಶವಾಗಿತ್ತು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ತನಗೆ ಕಾನೂನು ಆಳ್ವಿಕೆ ಬಗ್ಗೆ ಅಪಾರ ಗೌರವ ಇದ್ದು ಅದನ್ನು ಪಾಲಿಸಲು ಬದ್ಧವಾಗಿರುವುದಾಗಿ ಪತಂಜಲಿ ತಿಳಿಸಿದೆ. ಅಂತಹ ಜಾಹೀರಾತುಗಳನ್ನು ನಿಷೇಧಿಸಿರುವ ಕುರಿತು ನ್ಯಾಯಾಲಯ ನಡೆಸಿದ ವಿಚಾರಣೆಗಳ ಬಗ್ಗೆ ತನ್ನ ಮಾಧ್ಯಮ ವಿಭಾಗಕ್ಕೆ ತಿಳಿದಿರಲಿಲ್ಲ ಎಂದು ಅದು ಹೇಳಿದೆ.

ಸಾಮಾನ್ಯ ಹೇಳಿಕೆಗಳನ್ನು ಮಾತ್ರ ಒಳಗೊಂಡಿರಬೇಕಾದ ಜಾಹೀರಾತಿನಲ್ಲಿ ಅಜಾಗರೂಕತೆಯಿಂದ ಆಕ್ಷೇಪಾರ್ಹ ವಾಕ್ಯಗಳನ್ನು ಸೇರಿಸಿರುವುದು ವಿಷಾದನೀಯ. ಮಾಧ್ಯಮ ವಿಭಾಗ ವಾಡಿಕೆಯಂತೆ ಇವುಗಳನ್ನು ಸೇರಿಸಿದೆ ಎಂದು ವಿವರಿಸಲಾಗಿದೆ.

ಆಯುರ್ವೇದದಲ್ಲಿ ನಡೆಸಿದ ಕ್ಲಿನಿಕಲ್ ಸಂಶೋಧನೆಯ ವೈಜ್ಞಾನಿಕ ಮಾಹಿತಿ ತನ್ನ ಉತ್ಪನ್ನಗಳಿಗೆ ಇದ್ದು 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ ಜಾರಿಗೆ ಬರುವ ಸಮಯದಲ್ಲಿ ಇದು ಲಭ್ಯ ಇರಲಿಲ್ಲ. ತನ್ನ ಆಯುರ್ವೇದ ಉತ್ಪನ್ನಗಳು ವೈಜ್ಞಾನಿಕ ಸಂಶೋಧನೆಯಿಂದ ಬೆಂಬಲಿತವಾಗಿವೆ ಎಂದು ಬಹುರಾಷ್ಟ್ರೀಯ ಕಂಪನಿಯೂ ಆಗಿರುವ ಪತಂಜಲಿ ಸಮರ್ಥಿಸಿಕೊಂಡಿದೆ.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹ 1 ಕೋಟಿ ದಂಡ ವಿಧಿಸುವುದಾಗಿ ಈ ಹಿಂದೆ ಸುಪ್ರೀಂ ಕೋರ್ಟ್‌ ಕಳೆದ ನವೆಂಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.

ಇಡೀ ಪ್ರಕರಣವನ್ನು ಅಲೋಪತಿ / ಆಧುನಿಕ ಔಷಧ ಮತ್ತು ಆಯುರ್ವೇದ ಉತ್ಪನ್ನಗಳ ನಡುವಿನ ಚರ್ಚೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಅದು ಸಮಾಧಾನ ವ್ಯಕ್ತಪಡಿಸಿತ್ತು.

ಅಲ್ಲದೆ ಫೆಬ್ರವರಿ 27 ರಂದು ನಡೆಸಿದ ವಿಚಾರಣೆ ವೇಳೆ ಪತಂಜಲಿ ಔಷಧ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧ ಹೇರಿದ್ದ ಅದು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕಂಪನಿ ಮತ್ತು ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು.

ಯಾವುದೇ ಪ್ರಾಯೋಗಿಕ ಪುರಾವೆಗಳಿಲ್ಲದಿದ್ದರೂ ಪತಂಜಲಿ ತನ್ನ ಔಷಧಿಗಳು ಕೆಲವು ರೋಗಗಳನ್ನು ಗುಣಪಡಿಸುತ್ತವೆ ಎಂದು ಸುಳ್ಳು ಹೇಳುವ ಮೂಲಕ ಇಡೀ ದೇಶವನ್ನು ದಿಕ್ಕು ತಪ್ಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿತ್ತು. ದಾರಿತಪ್ಪಿಸುವ ಜಾಹೀರಾತುಗಳನ್ನು ನಿಭಾಯಿಸದಿದ್ದಕ್ಕಾಗಿ ಅದು ಕೇಂದ್ರ ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿತ್ತು.

ಬೇರೆ ಔಷಧಿಗಳ ವಿರುದ್ಧ ಪತಂಜಲಿ ಪ್ರತಿಕೂಲ ಹೇಳಿಕೆಗಳನ್ನು ನೀಡಬಾರದು ಎಂದು ಅದು ಆದೇಶಿಸಿತ್ತು.

ಶೋಕಾಸ್‌ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಕಂಪೆನಿಯ ಸಂಸ್ಥಾಪಕ ಬಾಬಾ ರಾಮದೇವ್‌ ಮತ್ತು ಬಾಲಕೃಷ್ಣ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಾಕೀತು ಮಾಡಿತ್ತು.

ಇವರಿಬ್ಬರೂ ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ 1954ರ ಸೆಕ್ಷನ್ 3 ಮತ್ತು 4 ಅನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಹೇಳಿತ್ತು. ಪ್ರಕರಣದ ವಿಚಾರಣೆ ಏಪ್ರಿಲ್‌ 2ರಂದು ನಡೆಯಲಿದೆ.

Kannada Bar & Bench
kannada.barandbench.com