ಅಲೋಪತಿ, ಆಯುರ್ವೇದದ ಸಂಯೋಜನೆ ಕೋರಿದ್ದ ಮನವಿಗೆ ಪತಂಜಲಿ ಬೆಂಬಲ: ದೆಹಲಿ ಹೈಕೋರ್ಟ್‌ಗೆ ಅರ್ಜಿ

ಪ್ರಸ್ತುತ ಭಾರತದಲ್ಲಿ ಪ್ರಾಕ್ಟೀಸ್ ಮಾಡಲಾಗುತ್ತಿರುವ 'ವಸಾಹತುಶಾಹಿ ಪ್ರತ್ಯೇಕಿತ ವಿಧಾನ'ದ ಬದಲಿಗೆ 'ಭಾರತೀಯ ಅಖಂಡ ಸಮಗ್ರ ಔಷಧೀಯ ವಿಧಾನ ಅಳವಡಿಸಿಕೊಳ್ಳಬೇಕೆಂದು ಅರ್ಜಿದಾರ ಉಪಾಧ್ಯಾಯ ಕೋರಿದ್ದರು.
ಅಲೋಪತಿ, ಆಯುರ್ವೇದದ ಸಂಯೋಜನೆ ಕೋರಿದ್ದ ಮನವಿಗೆ ಪತಂಜಲಿ ಬೆಂಬಲ: ದೆಹಲಿ ಹೈಕೋರ್ಟ್‌ಗೆ ಅರ್ಜಿ

ಅಲೋಪತಿ, ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ ಮತ್ತಿತರ ಔಷಧೀಯ ಪದ್ಧತಿಗಳನ್ನು ಸಂಯೋಜಿಸುವಂತೆ ಹಾಗೂ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಏಕರೂಪದ ಪಠ್ಯಕ್ರಮವನ್ನು ಕೋರಿ ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬೆಂಬಲಿಸಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಶೋಧನಾ ಸಂಸ್ಥೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಅಶ್ವಿನಿ ಉಪಾಧ್ಯಾಯ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಹಿರಿಯ ವಕೀಲ ಇಂದರ್‌ಬೀರ್ ಸಿಂಗ್ ಅಲಗ್ ಮತ್ತು ಅಥೇನಾ ಲೀಗಲ್‌ ಸಂಸ್ಥೆಯ ವಕೀಲರಾದ ಸಿಮ್ರಂಜೀತ್ ಸಿಂಗ್ ಮತ್ತು ರಿಯಾ ದುಬೆ ಅವರು ಪತಂಜಲಿ ಪರವಾಗಿ ವಾದ ಮಂಡಿಸಿ ಉಪಾಧ್ಯಾಯ ಅವರ ಮನವಿಯನ್ನು ಬೆಂಬಲಿಸಿ ಮಧ್ಯಪ್ರವೇಶ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಅರ್ಜಿಯನ್ನು ದಾಖಲೆಯಲ್ಲಿ ಸಲ್ಲಿಸಿಲ್ಲ ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ಪೀಠ ಒಂದು ವಾರದೊಳಗೆ ಅದನ್ನು ಸಲ್ಲಿಸುವಂತೆ ತಿಳಿಸಿತು.

Also Read
ವೈದ್ಯರ ಬಗ್ಗೆ, ಅಲೋಪತಿ ಬಗ್ಗೆ ಬಾಬಾ ರಾಮದೇವ್ ಆರೋಪ ಮಾಡುತ್ತಿರುವುದೇಕೆ? ಸುಪ್ರೀಂ ಕೋರ್ಟ್ ಪ್ರಶ್ನೆ

ಏತನ್ಮಧ್ಯೆ, ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಕೀರ್ತಿಮಾನ್ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಅರ್ಜಿಯು ಸ್ವಭಾವತಃ ವಿರೋಧಾತ್ಮಕವಾಗಿಲ್ಲ ಎಂದು ಸಿಂಗ್ ಹೇಳಿದರು. ಕೇಂದ್ರದ ಪ್ರತಿಕ್ರಿಯೆಯೂ ದಾಖಲೆಯಲ್ಲಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ, ಅದನ್ನು ಕೂಡ ದಾಖಲೆಯಲ್ಲಿ ಮಂಡಿಸುವಂತೆ ಸಿಂಗ್‌ ಅವರಿಗೆ ಸೂಚಿಸಿತು. ನಂತರ ನ್ಯಾಯಾಲಯವು ಪ್ರಕರಣವನ್ನು ನವೆಂಬರ್ 11 ರಂದು ಹೆಚ್ಚಿನ ಪರಿಗಣನೆಗೆ ಪಟ್ಟಿ ಮಾಡಿತು.

ಪ್ರಸ್ತುತ ಭಾರತದಲ್ಲಿ ಪ್ರಾಕ್ಟೀಸ್‌ ಮಾಡಲಾಗುತ್ತಿರುವ 'ವಸಾಹತುಶಾಹಿ ಪ್ರತ್ಯೇಕಿತ ವಿಧಾನ'ದ ಬದಲಿಗೆ 'ಭಾರತೀಯ ಅಖಂಡ ಸಮಗ್ರ ಔಷಧೀಯ ವಿಧಾನ ಅಳವಡಿಸಿಕೊಳ್ಳಬೇಕೆನ್ನುವುದು ಅರ್ಜಿದಾರ ಉಪಾಧ್ಯಾಯ ಅವರ ಕೋರಿಕೆಯಾಗಿದೆ.

Related Stories

No stories found.
Kannada Bar & Bench
kannada.barandbench.com