ಮೋದಿ ಉಪನಾಮ ವಿವಾದ: ಸುಶೀಲ್ ಕುಮಾರ್ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಪಾಟ್ನಾ ನ್ಯಾಯಾಲಯದ ಸಮನ್ಸ್

ಕೋಲಾರದಲ್ಲಿ ನಡೆದಿದ್ದ ರಾಜಕೀಯ ಸಮಾವೇಶದಲ್ಲಿ ನೀಡಿದ್ದ ಈ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯ ರಾಹುಲ್ ಅವರನ್ನು ದೋಷಿ ಎಂದು ಇತ್ತೀಚೆಗೆ ತೀರ್ಪು ನೀಡಿತ್ತು. ಪರಿಣಾಮ ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ.
Rahul Gandhi
Rahul Gandhi Facebook
Published on

ʼಎಲ್ಲಾ ಕಳ್ಳರಿಗೂ ಮೋದಿ ಎಂಬ ಉಪನಾಮವಿದೆʼ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರು 2019ರಲ್ಲಿ ಹೂಡಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ನಡೆಯಲಿರುವ ವಿಚಾರಣೆಗೆ ರಾಹುಲ್ ಗಾಂಧಿ ಖುದ್ದು ಹಾಜರಾಗುವಂತೆ ಪಾಟ್ನಾ ನ್ಯಾಯಾಲಯ ಶುಕ್ರವಾರ ನೋಟಿಸ್‌ ನೀಡಿರುವುದು ವರದಿಯಾಗಿದೆ.

ಕೋಲಾರದಲ್ಲಿ ನಡೆದಿದ್ದ ರಾಜಕೀಯ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದಿಂದ ಪರಾರಿಯಾಗಿರುವ ನೀರವ್‌ ಮೋದಿ ಮತ್ತು ಲಲಿತ್‌ ಮೋದಿಯಂತಹ ಆರ್ಥಿಕ ಅಪರಾಧಿಗಳಿಗೆ ಹೋಲಿಸಿದ್ದರು.  

"ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕೆ ಇದೆ?" ಎಂದು ಅವರು ಪ್ರಶ್ನಿಸಿದ್ದರು. ಈ ಹೇಳಿಕೆ ವಿರೋಧಿಸಿ ಸುಶೀಲ್ ಕುಮಾರ್ ಮೋದಿ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಅವರಿಗೆ ಜುಲೈ 6, 2019 ರಂದು ಜಾಮೀನು ನೀಡಲಾಗಿತ್ತು.

ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ  ಸುಶೀಲ್‌ ಕುಮಾರ್‌ ಅವರು “ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎಂದು 2019ರ ಲೋಕಸಭೆ ಚುನಾವಣೆ ವೇಳೆ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಕೋಲಾರದಲ್ಲಿ ನನ್ನಂತಹ ಹಿಂದುಳಿದ ವರ್ಗದ ಜನರನ್ನು ಅವಮಾನಿಸಿದ್ದರು. ನಾನು ಅವರ ವಿರುದ್ಧ ಪಾಟ್ನಾದ ಸಿಜೆಎಂ ನ್ಯಾಯಾಲಯದಲ್ಲಿ ಮಾನನಷ್ಟ ಅರ್ಜಿ ಸಲ್ಲಿಸಿದ್ದೆ. ಈಗ ಸಂಸದ/ಶಾಸಕ ನ್ಯಾಯಾಲಯವು ಹೇಳಿಕೆ ದಾಖಲಿಸಿಕೊಳ್ಳಲು ತನ್ನೆದುರು ಹಾಜರಾಗುವಂತೆ ಅವರಿಗೆ (ರಾಹುಲ್‌) ಸಮನ್ಸ್ ಜಾರಿಗೊಳಿಸಿದೆ” ಎಂದಿದ್ದಾರೆ.

ಇದೇ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್‌ ನ್ಯಾಯಾಲಯ ರಾಹುಲ್‌ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಪರಿಣಾಮ ಅವರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದರು. ಅವರನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.  ಪ್ರಕರಣದಲ್ಲಿ ರಾಹುಲ್‌ ಅವರಿಗೆ ಜಾಮೀನು ದೊರೆತಿದ್ದು ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ ಅವರ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ. ಕೋಲಾರದಲ್ಲಿ ನೀಡಲಾಗಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸೂರತ್‌ ನ್ಯಾಯಾಲಯದಲ್ಲಿ ಬಿಜೆಪಿಯ ಮಾಜಿ ಶಾಸಕ ಪೂರ್ಣೇಶ್‌ ಮೋದಿ ಪ್ರಕರಣ ದಾಖಲಿಸಿದ್ದರು.

Kannada Bar & Bench
kannada.barandbench.com