ಪದೋನ್ನತಿ ಬಳಿಕ ದೊರೆಯದ ಸಂಬಳ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ

ನವೆಂಬರ್ 2023ರಲ್ಲಿ ಹೈಕೋರ್ಟ್‌ಗೆ ಪದೋನ್ನತಿ ಪಡೆದ ಸಮಯದಿಂದ ಇದುವರೆಗೆ ತಮಗೆ ಜಿಪಿಎಫ್ ಖಾತೆ ಮಂಜೂರು ಮಾಡಿಲ್ಲ, ಇದರಿಂದಾಗಿ ಸಂಬಳ ದೊರೆಯುತ್ತಿಲ್ಲ ಎಂದು ನ್ಯಾ. ರುದ್ರ ಪ್ರಕಾಶ್ ಮಿಶ್ರಾ ವಾದಿಸಿದರು.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಖಾತೆ ತೆರೆದು ವೇತನ ನೀಡುವಂತೆ ಕೋರಿ ಪಾಟ್ನಾ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ರುದ್ರ ಪ್ರಕಾಶ್ ಮಿಶ್ರಾ ಅವರು ಸಲ್ಲಿಸಿದ್ದ ಮನವಿ ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಸಂಬಂಧ ಕೇಂದ್ರ ಮತ್ತು ಬಿಹಾರ ಸರ್ಕಾರಕ್ಕೆ ನೋಟಿಸ್ ನೀಡಿದ್ದು ಪಾಟ್ನಾ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರ ಪ್ರತಿಕ್ರಿಯೆ ಕೇಳಿದೆ.

ನ್ಯಾಯಮೂರ್ತಿ ಮಿಶ್ರಾ ಅವರ ಪರ ಹಾಜರಾದ ವಕೀಲ ಪ್ರೇಮ್ ಪ್ರಕಾಶ್ ಅವರು ಮಧ್ಯಂತರ ಪರಿಹಾರಕ್ಕಾಗಿ ಒತ್ತಾಯಿಸಿದರು.

ಆದರೆ, ಯಾವುದೇ ಮಧ್ಯಂತರ ಪರಿಹಾರ ನೀಡದ ನ್ಯಾಯಾಲಯ ಪ್ರಕರಣ ಆಲಿಸುವುದಾಗಿ ತಿಳಿಸಿ ಅದನ್ನು ಜನವರಿ 29ಕ್ಕೆ ಮುಂದೂಡಿತು.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ
ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ

ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ ಪದೋನ್ನತಿ ಪಡೆದ ದಿನದಿಂದ ತಮಗೆ ಜಿಪಿಎಫ್‌ ಖಾತೆ ಮಂಜೂರಾಗಿಲ್ಲ. ಹಾಗಾಗಿ ಸಂಬಳ ಕೂಡ ದೊರೆಯುತ್ತಿಲ್ಲ ಇದು ಬಹಳಷ್ಟು ಮಾನಸಿಕ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗಿದೆ. ಹೈಕೋರ್ಟ್ ನ್ಯಾಯಾಧೀಶರ (ಸಂಬಳ ಮತ್ತು ಸೇವಾ ಷರತ್ತುಗಳು) ಕಾಯಿದೆ- 1954ರ ಸೆಕ್ಷನ್ 20ರ ಪ್ರಕಾರ ತಾವು ಜಿಪಿಎಫ್ ಖಾತೆಗೆ ಅರ್ಹ ಎಂದು ನ್ಯಾಯಮೂರ್ತಿಯವರು ತಿಳಿಸಿದ್ದಾರೆ.

ಕಾನೂನು ಸಚಿವಾಲಯ ಹೊರಡಿಸಿದ ಪತ್ರಕ್ಕೆ ಅನುಗುಣವಾಗಿ ತಮ್ಮ ಸಾಮಾನ್ಯ ಭವಿಷ್ಯ ನಿಧಿ (ಜಿಪಿಎಫ್) ಖಾತೆಗಳನ್ನು ಮುಚ್ಚಲಾಗಿದೆ ಎಂದು ಕಳೆದ ವರ್ಷ ಪಾಟ್ನಾ ಹೈಕೋರ್ಟ್‌ನ ಏಳು ಹಾಲಿ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಆಗ ತಕ್ಷಣ ವೇತನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠ ಈ ನಿಟ್ಟಿನಲ್ಲಿ ಕೆಲ ನಿರ್ದೇಶನಗಳನ್ನು ನೀಡಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Justice Rudra Prakash Mishra v. Union of India and Others.pdf
Preview

Related Stories

No stories found.
Kannada Bar & Bench
kannada.barandbench.com