ರಾಹುಲ್ ವಿರುದ್ಧದ ಮಾನನಷ್ಟ ಮೊಕದ್ದಮೆ: ವಿಚಾರಣೆಗೆ ಮಧ್ಯಂತರ ತಡೆ ನೀಡಿ ಪಾಟ್ನಾ ಹೈಕೋರ್ಟ್ ಆದೇಶ

ಕೋಲಾರದಲ್ಲಿ 2019 ರಲ್ಲಿ ನಡೆದಿದ್ದ ರಾಜಕೀಯ ಸಮಾವೇಶದ ವೇಳೆ ಇಂಥದ್ದೇ ಹೇಳಿಕೆ ನೀಡಿದ್ದ ರಾಹುಲ್ ಅವರನ್ನು ಸೂರತ್ ನ್ಯಾಯಾಲಯ ಈಗಾಗಲೇ ದೋಷಿ ಎಂದು ಪರಿಗಣಿಸಿದೆ.
Rahul Gandhi, Patna High Court
Rahul Gandhi, Patna High CourtA1
Published on

ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮʼ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಿಹಾರದ ಪಾಟ್ನಾ ನ್ಯಾಯಾಲಯವೊಂದು ನಡೆಸುತ್ತಿದ್ದ ವಿಚಾರಣೆಗೆ ಮೇ 15 ರವರೆಗೆ ತಡೆ ನೀಡಿ ಪಾಟ್ನಾ ಹೈಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.

ಪಾಟ್ನಾ ನ್ಯಾಯಾಲಯವು ಹೊರಡಿಸಿದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ರಾಹುಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂದೀಪ್‌ ಸಿಂಗ್‌ ವಿಚಾರಣೆಗೆ ಮಧ್ಯಂತರ ತಡೆ ನೀಡಿದರು.

ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್‌ 313ರ ಅಡಿ ಹೇಳಿಕೆ ದಾಖಲಿಸಲು ಏಪ್ರಿಲ್ 12ರಂದು ಖುದ್ದು ಹಾಜರಾಗುವಂತೆ ರಾಹುಲ್‌ ಅವರಿಗೆ ಪಾಟ್ನಾ ನ್ಯಾಯಾಲಯ ಮಾರ್ಚ್ 31ರಂದು ಸೂಚಿಸಿತ್ತು. ಆದರೆ ನಿಗದಿತ ದಿನದಂದು ರಾಹುಲ್‌ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಬದಲಿಗೆ ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಏಪ್ರಿಲ್ 25ರಂದು ಹಾಜರಾಗುವಂತೆ ರಾಹುಲ್‌ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಬಳಿಕ ರಾಹುಲ್‌ ಪಾಟ್ನಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕೋಲಾರದಲ್ಲಿ 2019ರಲ್ಲಿ ನಡೆದಿದ್ದ ರಾಜಕೀಯ ಸಮಾವೇಶದ ವೇಳೆ "ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ. ಎಲ್ಲಾ ಕಳ್ಳರಿಗೂ ಮೋದಿ ಉಪನಾಮ ಏಕಿದೆ?” ಎಂದು ರಾಹುಲ್‌ ಪ್ರಶ್ನಿಸಿದ್ದರು.

ಸುಶೀಲ್‌ ಕುಮಾರ್‌ ಮೋದಿ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ರಾಹುಲ್‌ ವಿರುದ್ಧ ಮೊಕದ್ದಮೆ ಹೂಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅವರಿಗೆ ಜುಲೈ 6, 2019 ರಂದು ಜಾಮೀನು ನೀಡಲಾಗಿತ್ತು.

ಇಂಥದ್ದೇ ಹೇಳಿಕೆ ನೀಡಿದ್ದ ರಾಹುಲ್‌ ವಿರುದ್ಧ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರು ಹೂಡಿದ್ದ ಬೇರೊಂದು ಪ್ರಕರಣದಲ್ಲಿ ರಾಹುಲ್‌ ಅವರನ್ನು ಸೂರತ್‌ ನ್ಯಾಯಾಲಯ ಈಗಾಗಲೇ ದೋಷಿ ಎಂದು ಪರಿಗಣಿಸಿದೆ. ಇದೇ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್‌ ವಿರುದ್ಧ ಹಲವು ವಿಚಾರಣೆಗಳು ಬಾಕಿ ಇವೆ.

ವಿವಿಧ ಹೇಳಿಕೆಗಳಿಗಾಗಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ರಾಹುಲ್‌ ವಿರುದ್ಧ 10ಕ್ಕೂ ಹೆಚ್ಚು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ಬಾಕಿ ಇದ್ದು ರಾಹುಲ್‌ ತಮ್ಮ ವಿರುದ್ಧ ಮಾಡಿದ ಆರೋಪಗಳಿಗಾಗಿ ಯಾರ ಬಗ್ಗೆಯೂ ಇಂತಹ ಪ್ರಕರಣ ದಾಖಲಿಸಿಲ್ಲ.

Kannada Bar & Bench
kannada.barandbench.com