ತನ್ನ ಎಲ್ಲಾ ನ್ಯಾಯಮೂರ್ತಿಗಳಿಗೆ ಐಫೋನ್ 13 ಪ್ರೊ (256 ಜಿಬಿ) ಖರೀದಿಸಲು ಹರಾಜು ಆಹ್ವಾನಿಸಿ ಪಾಟ್ನಾ ಹೈಕೋರ್ಟ್ ಟೆಂಡರ್ ನೋಟಿಸ್ ನೀಡಿದೆ.
ಈ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ಆಪಲ್ ಐಫೋನ್ 13 ಪ್ರೊ (256 ಜಿಬಿ) ಪೂರೈಕೆ ಮಾಡಲು ಪ್ರತಿಷ್ಠಿತ ಸಂಸ್ಥೆಗಳು / ಅಧಿಕೃತ ವಿತರಕರು / ಪೂರೈಕೆದಾರರು / ಸೇವಾ ಪೂರೈಕೆದಾರರಿಂದ ಮೊಹರು ಮಾಡಿದ ದರಪಟ್ಟಿ ಆಹ್ವಾನಿಸಲಾಗಿದೆ” ಎಂದು ನ್ಯಾಯಾಲಯದ ಖರೀದಿ ಕೋಶದ ಪರವಾಗಿ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ನೀಡಿರುವ ಟೆಂಡರ್ ನೋಟಿಸ್ ತಿಳಿಸಿದೆ.
ಹರಾಜು ದಾಖಲೆಗಳನ್ನು ಒಂದು ವಾರದೊಳಗೆ ಸಲ್ಲಿಸಬೇಕು ಎಂದು ತಿಳಿಸಿರುವ ನೋಟಿಸ್ ಟೆಂಡರ್‌ನಲ್ಲಿ ಉಲ್ಲೇಖಿಲಾದ ದರ ಜಿಎಸ್‌ಟಿ ಮತ್ತು ಸೇವಾಶುಲ್ಕ ಒಳಗೊಂಡಿರಬೇಕು. ಜಿಎಸ್‌ಟಿ ಸಂಖ್ಯೆ ಪ್ಯಾನ್, ಆಧಾರ್ ಮತ್ತಿತರ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಸಂಸ್ಥೆಯ ಪ್ರಧಾನ ಕಛೇರಿ/ಕಚೇರಿ/ಅಂಗಡಿ ಪಾಟ್ನಾದಲ್ಲಿರಬೇಕು ಇತ್ಯಾದಿ ಷರತ್ತುಗಳು ನೋಟಿಸ್‌ನಲ್ಲಿವೆ.
ಪಾಟ್ನಾದ ಹೈಕೋರ್ಟ್ ನ್ಯಾಯಮೂರ್ತಿಗಳ ಒಟ್ಟು ಮಂಜೂರಾದ ಸಂಖ್ಯಾಬಲ 53. ಈ ವರ್ಷದ ಜೂನ್ 1ಕ್ಕೆ ಅನ್ವಯವಾಗುವ ಮಾಹಿತಿಯಂತೆ ಕಾರ್ಯನಿರತ ನ್ಯಾಯಮೂರ್ತಿಗಳ ಸಂಖ್ಯೆ 27. ಆದರೆ, ಕೇಂದ್ರ ಸರ್ಕಾರವು ಇತ್ತೀಚೆಗೆ ಪೀಠಕ್ಕೆ ಒಂಬತ್ತು ಸದಸ್ಯರ ನೇಮಕಾತಿ ಅಧಿಸೂಚನೆ ಹೊರಡಿಸುವುದರೊಂದಿಗೆ ಸಂಖ್ಯಾಬಲ ಶೀಘ್ರವೇ 36ಕ್ಕೆ ಏರಿಕೆಯಾಗಲಿದೆ. ಹೊಸದಾಗಿ ನೇಮಕಗೊಂಡ ಒಂಬತ್ತು ಮಂದಿಯಲ್ಲಿ ಏಳು ಮಂದಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.