ರೇಣುಕಾಸ್ವಾಮಿ ಕೊಲೆ, ಅಪಹರಣದಲ್ಲಿ ಪವಿತ್ರಾ ಪಾತ್ರವಿಲ್ಲ: ಜಾಮೀನು ಕೋರಿ ವಕೀಲರ ವಾದ

ಕರೆ ದಾಖಲೆಗೆ ಸಂಬಂಧಿಸಿದ ರೇಖಾಚಿತ್ರವು ಸೆನ್‌ ಠಾಣೆಯ ಪೇದೆಯ ಕಲಾ ಕಸುಬಾಗಿದೆ. ಜಪ್ತಿ ಮಾಡಿರುವ ಪ್ಯಾಂಟ್‌, ಶರ್ಟ್‌ ಮತ್ತು ಚಪ್ಪಲಿಯಲ್ಲಿ ರಕ್ತದ ಕಲೆ ಇತ್ತು ಎಂದ ಎಫ್‌ಎಸ್‌ಎಲ್‌ ವರದಿ ಅಂತಿಮವಲ್ಲ ಎಂದ ಹಿರಿಯ ವಕೀಲ ಅರುಣ್‌ ಶ್ಯಾಮ್‌.
Darshan and Pavitra Gowda
Darshan and Pavitra Gowda
Published on

ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾಗೌಡ ಅವರ ಪಾತ್ರವಿಲ್ಲ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌ ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್‌ ಅಲಿಯಾಸ್‌ ಅನು, ಜಗದೀಶ್‌ ಅಲಿಯಾಸ್‌ ಜಗ್ಗ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ ಮೊದಲನೇ ಆರೋಪಿ ಪವಿತ್ರಾಗೌಡ ಪ್ರತಿನಿಧಿಸಿರುವ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ಅವರು “ರೇಣುಕಾಸ್ವಾಮಿ ಕೊಲೆಗೆ ಯಾವುದೇ ಪಿತೂರಿ ನಡೆದಿಲ್ಲ. ಪಟ್ಟಣಗೆರೆಯ ಜಯಣ್ಣ ಷೆಡ್‌ಗೆ ಕರೆತಂದಾಗ ಪವಿತ್ರಾಗೌಡ ಅವರು ದರ್ಶನ್‌ ಜೊತೆ ತೆರಳಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಆನಂತರ ಅವರು ಅಲ್ಲಿಂದ ತೆರಳಿದ್ದಾರೆ. ಆನಂತರ ಏನಾಗಿದೆ ಎಂಬುದೂ ಅವರಿಗೆ ಗೊತ್ತಿಲ್ಲ” ಎಂದರು.

“ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತರುವಾಗ ಅವರೆಲ್ಲರೂ ಬೆಂಗಳೂರು-ತುಮಕೂರು ರಸ್ತೆಯ ದುರ್ಗಾ ಬಾರ್‌ ಮತ್ತು ರೆಸ್ಟೋರೆಂಟ್‌ನಲ್ಲಿ ಊಟ ಸವಿದಿದ್ದಾರೆ. ಇದರ ಉಸ್ತುವಾರಿಯಾಗಿರುವ ಶಿವಕುಮಾರ್‌ ಹೇಳಿಕೆ ನೋಡಿದರೆ ರೇಣುಕಸ್ವಾಮಿಯ ಅಪಹರಣವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ, ನಟ ಚಿಕ್ಕಣ್ಣ, ನವೀನ್‌ ಕುಮಾರ್‌, ಯಶಸ್‌ ಸೂರ್ಯ ಅವರ ಹೇಳಿಕೆಗಳನ್ನು ಪರಿಶೀಲಿಸಿದರೆ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಯಾವ ಪ್ರತ್ಯಕ್ಷ ಸಾಕ್ಷಿಯೂ ಪವಿತ್ರಾಗೌಡರತ್ತ ಬೆರಳು ಮಾಡಿಲ್ಲ ಎಂಬುದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು” ಎಂದರು.

ದರ್ಶನ್‌ ಕಾರು ಚಾಲಕ ಎಂ ಲಕ್ಷ್ಮಣ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಗೋಲ್ಡನ್‌ ಅವರ್‌ನಲ್ಲಿ (ಪ್ರಕರಣದ ತನಿಖೆಯ ಆರಂಭಿಕ ಸಮಯ) ಸರಿಯಾದ ರೀತಿಯಲ್ಲಿ ತನಿಖೆ ಮಾಡಲಾಗಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ವಿಳಂಬವಾಗಿರುವುದರಿಂದ ತನಿಖೆ ನಂಬಲಾಗುತ್ತಿಲ್ಲ. ಅನಾಮಧೇಯರು ಎಂದು ಎಫ್‌ಐಆರ್‌ ಮಾಡಲಾಗಿದೆ. ಆರೋಪಿಗಳು ಗೊತ್ತು ಎಂದು ಯಾವ ಸಾಕ್ಷಿಯೂ ಹೇಳಿಲ್ಲ. ಹೇಳಿಕೆ ದಾಖಲಿಸುವುದು ವಿಳಂಬವಾಗಿರುವುದಕ್ಕೆ ಯಾವುದೇ ವಿವರಣೆ ನೀಡಿಲ್ಲ. ಗುರುತು ಪತ್ತೆ ಪರೇಡ್‌ ಸಹ ಮಾಡಿಲ್ಲ. ಸಿಸಿಟಿವಿ ವಿಡಿಯೋ ತುಣುಕುಗಳಿಗೆ ಸಂಬಂಧಿಸಿದಂತೆ ಸೈಬರ್‌ ಕಾನೂನಿನ ವರದಿಯನ್ನು ಪಡೆದಿಲ್ಲ” ಎಂದು ಆಕ್ಷೇಪಿಸಿದರು.

Also Read
ರೇಣುಕಾಸ್ವಾಮಿ ಕೊಲೆಯ ಹಿಂದಿನ ಉದ್ದೇಶ, ಪಿತೂರಿಗೆ ಯಾವುದೇ ಸಾಕ್ಷಿ ಇಲ್ಲ: ಹಿರಿಯ ವಕೀಲ ಸಂದೇಶ್‌ ಚೌಟ

“ಕರೆ ದಾಖಲೆಗೆ ಸಂಬಂಧಿಸಿದ ರೇಖಾಚಿತ್ರವು ಸೆನ್‌ ಠಾಣೆಯ ಪೇದೆಯ ಕಲಾ ಕಸುಬಾಗಿದೆ. ಜಪ್ತಿ ಮಾಡಿರುವ ಪ್ಯಾಂಟ್‌, ಶರ್ಟ್‌ ಮತ್ತು ಚಪ್ಪಲಿಯಲ್ಲಿ ರಕ್ತದ ಕಲೆ ಇತ್ತು ಎಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಅಂತಿಮವಲ್ಲ. ಅದನ್ನೂ ತಿರುಚುವ ಸಾಧ್ಯತೆ ಇದೆ ಎಂಬುದಕ್ಕೆ ಹೈಕೋರ್ಟ್‌ನ ಸಮನ್ವಯ ಪೀಠದ ಆದೇಶವಿದೆ. ಲಕ್ಷ್ಮಣ್‌ ಅವರು ದರ್ಶನ್‌ ಕಾರು ಚಾಲಕನಾಗಿರುವುದರಿಂದ ಪದೇಪದೇ ಅವರಿಗೆ ಮೊದಲಿನಿಂದಲೂ ಕರೆ ಮಾಡುತ್ತಿದ್ದರು. ಇಲ್ಲಿ ಕೊಲೆ ಮಾಡುವ ಸಮಾನ ಉದ್ದೇಶ ಕಾಣುತ್ತಿಲ್ಲ. ಹೆಚ್ಚೆಂದರೆ ಐಪಿಸಿ ಸೆಕ್ಷನ್‌ 304 ಅನ್ವಯವಾಗುತ್ತದೆ. ಒಟ್ಟಾರೆ 260 ಸಾಕ್ಷಿಗಳಿರುವುದರಿಂದ ವಿಚಾರಣೆಯು ವಿಳಂಬವಾಗುತ್ತದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂದರು.

ಅನುಕುಮಾರ್‌ ಅಲಿಯಾಸ್‌ ಜಗದೀಶ್‌ ಅಲಿಯಾಸ್‌ ಜಗ್ಗ ಪ್ರತಿನಿಧಿಸಿದ್ದ ವಕೀಲ ರಂಗನಾಥ್‌ ರೆಡ್ಡಿ ಅವರು “ಕರೆ ದಾಖಲೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ರೇಖಾಚಿತ್ರದಲ್ಲಿ ಅನುಕುಮಾರ್‌ ಮತ್ತು ಜಗದೀಶ್‌ ಇಲ್ಲ. ಪ್ರತ್ಯಕ್ಷ ಸಾಕ್ಷಿಗಳೂ ಪ್ರತೀಕೂಲವಾಗಿ ತಮ್ಮ ವಿರುದ್ಧ ಏನೂ ಹೇಳಿಲ್ಲ. ಹೀಗಾಗಿ, ಜಾಮೀನು ನೀಡಬೇಕು” ಎಂದು ಕೋರಿದರು.

ವಾದ ಆಲಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com