ಪೇ ಚಲುವರಾಯಸ್ವಾಮಿ ಪೋಸ್ಟರ್: ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದು, 2023ರ ಆಗಸ್ಟ್‌ 30ರಂದು ಮಂಡ್ಯದ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
Minister N Chaluvaraya Swamy
Minister N Chaluvaraya Swamy

ಕೃಷಿ ಸಚಿವ ಎನ್‌ ಚಲುವರಾಯ ಸ್ವಾಮಿ ವಿರುದ್ಧ ‘ಪೇ ಚಲುವರಾಯಸ್ವಾಮಿ‘ ಪೋಸ್ಟರ್ ಅಭಿಯಾನ ನಡೆಸಲಾಗಿದೆ ಎಂಬ ಆರೋಪದಡಿ ಮಂಡ್ಯದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ, ಬಿಜೆಪಿ ಕಾರ್ಯಕರ್ತರಾದ ಸಿ ಟಿ ಮಂಜುನಾಥ್, ಎಸ್‌ ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವಕುಮಾರ್ ಮತ್ತು ವಿನೂ ಭಾಯ್ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಮಧು ಎನ್‌. ರಾವ್‌ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಸಚಿವ ಚಲುರಾಯಸ್ವಾಮಿ ಮತ್ತು ಸರ್ಕಾರದ ವಿರುದ್ಧ ಪೇ ಸಿಎಸ್‌/ ಪೇ ಚೆಲುವರಾಯಸ್ವಾಮಿ ಅಭಿಯಾನ‘ದ ಹೆಸರಿನಲ್ಲಿ 2023ರ ಆಗಸ್ಟ್‌ 10ರಂದು ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂಬಂಧ ಐವರ ವಿರುದ್ಧ ಪೊಲೀಸರು ಅಂದೇ ಎಫ್‌ಐಆರ್ ದಾಖಲು ಮಾಡಿದ್ದರು. ಈ ಸಂಬಂಧ 2023ರ ಆಗಸ್ಟ್‌ 30ರಂದು ಮಂಡ್ಯದ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ಅರ್ಜಿದಾರರು ಸಚಿವ ಚಲುರಾಯಸ್ವಾಮಿ ಮತ್ತು ಸರ್ಕಾರದ ವಿರುದ್ಧ ‘ಪೇ ಸಿಎಸ್‌/ ಪೇ ಚಲುವರಾಯಸ್ವಾಮಿ ಅಭಿಯಾನ’ದ ಹೆಸರಿನಲ್ಲಿ 2023ರ ಆಗಸ್ಟ್‌ 10ರಂದು ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಚಲುವರಾಯ ಸ್ವಾಮಿ ಮತ್ತು ಕಾಂಗ್ರೆಸ್‌ ಸರ್ಕಾರಕ್ಕೆ 6ರಿಂದ 8 ಲಕ್ಷ ರೂಪಾಯಿ ಪಾವತಿಸುವಂತೆ ಅಡಿ ಬರಹ ಬರೆದು, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಜೊತೆಗೆ ಚಲುವರಾಯ ಸ್ವಾಮಿ ಅವರ ಫೋಟೊ ಇರುವ ಭಿತ್ತಿಪತ್ರವನ್ನು ಸಂಜಯ ಸರ್ಕಲ್‌ ಅಲ್ಲಿ ಅಂಟಿಸಿದ್ದರು.

ಈ ಸಂಬಂಧ ಮಂಡ್ಯದ ಕಾವೇರಿ ನಗರದ ನಿವಾಸಿ ರುದ್ರೇಗೌಡ ದೂರು ನೀಡಿದ್ದರು. ಅದನ್ನು ಆಧರಿಸಿ ಅರ್ಜಿದಾರರಾದ ಸಿ ಟಿ ಮಂಜುನಾಥ್‌, ಎಸ್‌ ಶಿವಕುಮಾರ್ ಆರಾಧ್ಯ, ಪ್ರಸನ್ನ ಕುಮಾರ್, ಶಿವ ಕುಮಾರ್ ಮತ್ತು ವಿನೂ ಭಾಯ್ ವಿರುದ್ಧ ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಭಿತ್ತಿ ಪತ್ರ ಅಳವಡಿಸಿ ಸಾರ್ವಜನಿ ಪ್ರದೇಶದ ಸೌಂದರ್ಯ ಹಾಳು ಮಾಡಿದ ಆರೋಪದ ಮೇಲೆ ಕರ್ನಾಟಕ ಮುಕ್ತ ಪ್ರದೇಶಗಳ ವಿರೂಪ ತಡೆ ಕಾಯಿದೆ ಅಡಿ 2023ರ ಆಗಸ್ಟ್‌ 30ರಂದು ಅಧೀನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರ ರದ್ದತಿ ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com