ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಪಿಡಿಒ: ಪ್ರವೀಣ್‌ ಕುಮಾರ್‌ ಅಮಾನತು ಆದೇಶಕ್ಕೆ ಕೆಎಟಿ ತಡೆ

ಅಕ್ಟೋಬರ್‌ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಸಮವಸ್ತ್ರ ಧರಿಸಿ, ಕೈನಲ್ಲಿ ದಂಡ ಹಿಡಿದು ಗಣವೇಷಧಾರಿಯಾಗಿ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಪಿಡಿಒ ಪ್ರವೀಣ್‌ ಭಾಗವಹಿಸಿದ್ದರು.
Karnataka High Court
Karnataka High Court
Published on

ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಪಿಡಿಒ ಪ್ರವೀಣ್‌ ಕುಮಾರ್‌ ಅವರನ್ನು ಅಮಾನತು ಮಾಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೆಎಸ್‌ಎಟಿ (ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ) ಗುರುವಾರ ತಡೆ ನೀಡಿದೆ.

ತಮ್ಮನ್ನು ಅಮಾನತುಗೊಳಿಸಿರುವ ಸರ್ಕಾರದ ಆದೇಶ ಪ್ರಶ್ನಿಸಿ ಪ್ರವೀಣ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಎಸ್‌ ವೈ ವಟವಟಿ ಅವರ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ. ಜೊತೆಗೆ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ. ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳುವ ಹಕ್ಕನ್ನು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಎತ್ತಿಹಿಡಿದಿವೆ. ಆ ಕುರಿತ ಅನೇಕ ತೀರ್ಪುಗಳಿವೆ. ಆದರೆ, ಅದ್ಯಾವುದನ್ನೂ ಪರಿಗಣಸದೆ ರಾಜಕೀಯ ಒತ್ತಡದಿಂದ ಅರ್ಜಿದಾರರನ್ನು ಅಮಾನತು ಮಾಡಿರುವುದು ಕಾನೂನುಬಾಹಿರ ಕ್ರಮ” ಎಂದರು.

ಆರ್‌ಎಸ್‌ಎಸ್‌ ಶತಮಾನೋತ್ಸವ ಹಿನ್ನೆಲೆಯಲ್ಲಿ ಅಕ್ಟೋಬರ್‌ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಸಮವಸ್ತ್ರ ಧರಿಸಿ, ಕೈನಲ್ಲಿ ದಂಡ ಹಿಡಿದು ಗಣವೇಷಧಾರಿಯಾಗಿ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಪಿಡಿಒ ಪ್ರವೀಣ್‌ ಭಾಗವಹಿಸಿದ್ದರು. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರವು ಕರ್ನಾಟಕ ಸಿವಿಲ್‌ ಸೇವಾ (ನಡತೆ) ನಿಯಮಗಳು- 2021ರ ನಿಯಮ 3ರ ಅನ್ವಯ ಪ್ರತಿಯೊಬ್ಬ ಸರಕಾರಿ ನೌಕರ ಎಲ್ಲಾ ಕಾಲದಲ್ಲಿಯೂ ಸಂಪೂರ್ಣ ನೀತಿ ನಿಷ್ಠೆ ಹೊಂದಿರತಕ್ಕದ್ದು ಮತ್ತು ಕರ್ತವ್ಯ ಶ್ರದ್ಧೆ ಹೊಂದಿರತಕ್ಕದ್ದು ಹಾಗೂ ಸರ್ಕಾರಿ ನೌಕರನಿಗೆ ತಕ್ಕದಲ್ಲದ್ದನ್ನು ಮಾಡಬಾರದು ಎಂಬುದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅದೇ ಕಾರಣಕ್ಕೆ ಅವರನ್ನು ಅಮಾನತು ಮಾಡಿ ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್‌ ಆದೇಶ ಹೊರಡಿಸಿದ್ದರು.

ಅಮಾನತು ಬೆನ್ನಲ್ಲೇ ಪ್ರವೀಣ್‌ ಅವರೊಂದಿಗೆ ಚರ್ಚಿಸಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು “ಕಾನೂನುಬಾಹಿರ ಮತ್ತು ಅಕ್ರಮ ಅಮಾನತನ್ನು ಪ್ರಶ್ನಿಸಲು ನಾನು ವೈಯಕ್ತಿಕವಾಗಿ ಸಂಬಂಧಪಟ್ಟ ನ್ಯಾಯಾಧಿಕರಣ ಮತ್ತು ನ್ಯಾಯಾಲಯಗಳ ಮುಂದೆ ಹಾಜರಾಗುತ್ತೇನೆ” ಎಂದು ಭರವಸೆ ನೀಡಿದ್ದರು.

Kannada Bar & Bench
kannada.barandbench.com