ಪೆಗಾಸಸ್‌ ಗೂಢಚರ್ಯೆ: ನ್ಯಾಯಾಲಯದ ನೇತೃತ್ವದಲ್ಲಿ ಹಗರಣದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

“ಗೂಢಚರ್ಯೆಯ ವ್ಯಾಪಕ ಬಳಕೆಯು ನೈತಿಕ ಅಧಃಪತನಕ್ಕೆ ಕಾರಣವಾಗುತ್ತದೆ. ಈ ತಂತ್ರಾಂಶದ ರಾಷ್ಟ್ರೀಯ ಭದ್ರತಾ ಪರಿಣಾಮಗಳು ದೊಡ್ಡದಾಗಿವೆ” ಎಂದು ಮನವಿಯಲ್ಲಿ ಹೇಳಲಾಗಿದೆ.
Pegasus Spyware, Supreme Court
Pegasus Spyware, Supreme Court

ಪೆಗಾಸಸ್‌ ಬೇಹುಗಾರಿಕಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕೋರಿ ವಕೀಲ ಎಂ ಎಲ್‌ ಶರ್ಮಾ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗಿದ್ದು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರಗಳು ಇದರಲ್ಲಿ ಅಡಕವಾಗಿವೆ. ನ್ಯಾಯಾಂಗದ ಸ್ವಾತಂತ್ರ್ಯದ ವಿಚಾರವೂ ಇದರಲ್ಲಿ ಸೇರಿದೆ ಎಂದು ಶರ್ಮಾ ಮನವಿಯಲ್ಲಿ ಹೇಳಿದ್ದಾರೆ.

“ಪೆಗಾಸಸ್‌ ಹಗರಣವು ಅತ್ಯಂತ ಆತಂಕಕಾರಿ ವಿಚಾರವಾಗಿದ್ದು, ಇದು ಭಾರತದ ಪ್ರಜಾಪ್ರಭುತ್ವ, ದೇಶದ ಭದ್ರತೆ ಮತ್ತು ನ್ಯಾಯಾಂಗದ ಮೇಲಿನ ದಾಳಿಯಾಗಿದೆ. ಬೇಹುಗಾರಿಕೆಯ ವ್ಯಾಪಕ ಬಳಕೆಯು ನೈತಿಕ ಅಧಃಪತನಕ್ಕೆ ಕಾರಣವಾಗುತ್ತದೆ. ಈ ತಂತ್ರಾಂಶದ ರಾಷ್ಟ್ರೀಯ ಭದ್ರತಾ ಪರಿಣಾಮಗಳು ದೊಡ್ಡದಾಗಿವೆ”ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪೆಗಾಸಸ್‌ ಸಾಫ್ಟ್‌ವೇರ್‌ ಖರೀದಿಯ ಮೂಲಕ ಕೇಂದ್ರ ಸರ್ಕಾರವು ಸಂವಿಧಾನದ 266(3), 267(2) ಮತ್ತು 283(2) ಅನ್ನು ಉಲ್ಲಂಘಿಸುತ್ತದೆಯೇ, ಈ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 408, 409 ಮತ್ತು 120-ಬಿ ಅಡಿ ಅಪರಾಧವಾಗುತ್ತದೆಯೇ ಎಂಬ ಪ್ರಶ್ನೆಯಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ರಾಜಕೀಯ ಎದುರಾಳಿಗಳು, ಪತ್ರಕರ್ತರು ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಮೇಲೆ ನಿಗಾ ಇಡಲು ಭಾರತ ಸರ್ಕಾರ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳು ಪೆಗಾಸಸ್‌ ಸಾಫ್ಟ್‌ವೇರ್‌ ನೆರವು ಪಡೆದಿವೆ ಎಂದು ಭಾರತದ ʼದಿ ವೈರ್‌ʼ ಸೇರಿದಂತೆ ವಿಶ್ವದ ಹದಿನಾರು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ತನಿಖಾ ವರದಿ ಪ್ರಕಟಿಸಿವೆ.

Also Read
ಪೆಗಾಸಸ್‌ ನಿಗಾ ಇರಿಸಿದ್ದ ಪಟ್ಟಿಯಲ್ಲಿ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಿಬ್ಬಂದಿಯ ಹೆಸರು!

ಇಸ್ರೇಲ್‌ನ ಸಾಫ್ಟ್‌ವೇರ್‌ ಸಂಸ್ಥೆ ʼಎನ್‌ಎಸ್‌ಒ ಸಮೂಹ ಪೆಗಾಸಸ್‌ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದು, ಇದು ಬಳಕೆದಾರರಿಗೆ ಅರಿವಿಲ್ಲದೇ ಅವರ ಸ್ಮಾರ್ಟ್‌ಫೋನ್‌ ಹೊಕ್ಕು ವರ್ಚುವಲ್‌ ರೂಪದಲ್ಲಿ ಅವರ ಎಲ್ಲಾ ದತ್ತಾಂಶವನ್ನು ರವಾನಿಸುತ್ತದೆ ಎನ್ನಲಾಗಿದೆ.

ಕುತೂಹಲಕರ ಸಂಗತಿ ಎಂದರೆ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸರ್ವೋಚ್ಚ ನ್ಯಾಯಾಲಯದ ಸಿಬ್ಬಂದಿ ಹಾಗೂ ಆಕೆಯ ಸಂಬಂಧಿಗಳ ಮೊಬೈಲ್‌ ಸಂಖ್ಯೆಗಳೂ ಕಣ್ಗಾವಲಿಗೆ ಒಳಪಟ್ಟಿದ್ದವು ಎಂದು ʼದಿ ವೈರ್‌ʼ ವರದಿ ಮಾಡಿತ್ತು.

Related Stories

No stories found.
Kannada Bar & Bench
kannada.barandbench.com