[ಪೆಗಸಸ್‌ ಹಗರಣ] ರಾಷ್ಟ್ರೀಯ ಭದ್ರತೆ ವಿಚಾರ ಪ್ರಸ್ತಾಪಿಸಿ ನುಣುಚಿಕೊಳ್ಳಲಾಗದು ಎಂದ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಾಗ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗೆಂದು, ನ್ಯಾಯಾಂಗ ತನಿಖೆಯಿಂದ ತಪ್ಪಿಸಿಕೊಳ್ಳಲೆಂದೇ ಪೂರ್ಣ ನಿಷೇಧವನ್ನು ಪ್ರಸ್ತಾಪಿಸಲಾಗದು ಎಂದ ನ್ಯಾಯಾಲಯ.
Pegasus, Justice Surya Kant, CJI Ramana, Justice Hima Kohli
Pegasus, Justice Surya Kant, CJI Ramana, Justice Hima Kohli

ಸರ್ವೋಚ್ಚ ನ್ಯಾಯಾಲಯದ ಮುಂದೆ ಯಾವುದಾದರೂ ವಿಚಾರ ಬಂದರೆ ರಾಷ್ಟ್ರೀಯ ಭದ್ರತೆ ವಿಚಾರವನ್ನು ಪ್ರಸ್ತಾಪಿಸಿ ನ್ಯಾಯಿಕ ಪರಾಮರ್ಶೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್‌ ಬುಧವಾರ ಪೆಗಸಸ್‌ ಬೇಹುಗಾರಿಕಾ ಪ್ರಕರಣದ ಕುರಿತಾದ ತೀರ್ಪಿನಲ್ಲಿ ಹೇಳಿದೆ.

ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಾಗ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನ್ಯಾಯಾಂಗ ತನಿಖೆಯಿಂದ ತಪ್ಪಿಸಿಕೊಳ್ಳಲೆಂದೇ ಪೂರ್ಣ ನಿಷೇಧವನ್ನು ಪ್ರಸ್ತಾಪಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ಪೀಠವು ಸ್ಪಷ್ಟಪಡಿಸಿದೆ.

ತೀರ್ಪು ಪ್ರಕಟಣೆಯ ಸಂದರ್ಭದಲ್ಲಿ ನ್ಯಾಯಾಲಯದ ಪ್ರಸ್ತಾಪಿಸಿದ ಏಳು ಪ್ರಮುಖ ವಿಚಾರಗಳು ಇಂತಿವೆ.

1. ರಾಷ್ಟ್ರೀಯ ಭದ್ರತೆ ಸರ್ವವ್ಯಾಪಿ ವಾದವಾಗಲು ಸಾಧ್ಯವಿಲ್ಲ

ರಾಷ್ಟ್ರೀಯ ಭದ್ರತೆ ಎಂಬ 'ಗುಮ್ಮ'ದ ಹೆಸರೇಳಿದಾಕ್ಷಣ ನ್ಯಾಯಾಂಗವು ತನ್ನ ಜವಾಬ್ದಾರಿಯನ್ನು ಮರೆತು ಸುಮ್ಮನಿರಲಾಗದು. ರಾಷ್ಟ್ರದ ಭದ್ರತೆ ವಿಚಾರವು ಖಂಡಿತವಾಗಿಯೂ ಪ್ರಮುಖ ವಿಚಾರವಾಗಿದ್ದು, ಇದನ್ನು ಆಧರಿಸಿ ಕೇಂದ್ರ ಸರ್ಕಾರವು ಮಾಹಿತಿ ನೀಡಲು ನಿರಾಕರಿಸಬಹುದು ಎನ್ನುವುದು ಒಪ್ಪುವಂಥದ್ದೇ.

ಅದರೆ, “ಹಾಗೆಂದು, ಪ್ರತಿಬಾರಿಯೂ ರಾಷ್ಟ್ರೀಯ ಭದ್ರತೆ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವು ನುಣಿಚಿಕೊಳ್ಳಲಾಗದು. ಇಂಥ ಸಂದರ್ಭಗಳಲ್ಲಿ ಕೇಳಲಾದ ಮಾಹಿತಿಯನ್ನು ಗೌಪ್ಯವಾಗಿಡಬೇಕು. ಇಲ್ಲವಾದರೆ ಅದರಿಂದ ರಾಷ್ಟ್ರದ ಭದ್ರತೆಗೆ ಧಕ್ಕೆ ಎದುರಾಗಬಹುದು ಎನ್ನುವುದನ್ನು ನಿರೂಪಿಸಿ ಈ ಸಂಬಂಧ ಕೋರಿಕೆ ಸಲ್ಲಿಸಬೇಕು," ಎಂದು ಪೀಠ ಹೇಳಿದೆ. ನೆಪಮಾತ್ರಕ್ಕೆ ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಪ್ರಸ್ತಾಪಿಸಿ ನ್ಯಾಯಾಲಯವನ್ನು ಮೌನವಾಗಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

2. ಖಾಸಗಿತನವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಕಳಕಳಿಯಷ್ಟೇ ಅಲ್ಲ

ನಾವು ಇಂದು ಮಾಹಿತಿ ಕ್ರಾಂತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಬ್ಬರ ಮಾಹಿತಿಯೂ ಕ್ಲೌಡ್‌ ಅಥವಾ ಡಿಜಿಟಲ್‌ ದಾಖಲೆಯ ರೂಪದಲ್ಲಿ ಅಡಕವಾಗುತ್ತದೆ. ಜನರ ಬದುಕು ಸುಧಾರಿಸಲು ತಂತ್ರಜ್ಞಾನವು ಒಂದು ಸಾಧನವಾಗಿದೆ. ಅಂತೆಯೇ ವ್ಯಕ್ತಿಯ ಅತ್ಯಂತ ಪವಿತ್ರವಾದ ಖಾಸಗಿತನವನ್ನು ಉಲ್ಲಂಘಿಸಲು ಅದನ್ನು ಬಳಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ, ಖಾಸಗಿತನ ಎಂಬುದು ಪತ್ರಕರ್ತರು ಅಥವಾ ಸಾಮಾಜಿಕ ಕಾರ್ಯಕರ್ತರಿಗಷ್ಟೇ ಸೀಮಿತವಾದ ಕಳಕಳಿಯಲ್ಲ. ಪ್ರತಿಯೊಬ್ಬ ಭಾರತೀಯನನ್ನು ಖಾಸಗಿತನದ ಉಲ್ಲಂಘನೆಯಿಂದ ರಕ್ಷಿಸಬೇಕಿದೆ. ಈ ನಿರೀಕ್ಷೆಯೇ ನಮ್ಮ ಆಯ್ಕೆಗಳು, ಸ್ವಾತಂತ್ರ್ಯ ಚಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

3. ಖಾಸಗಿತನದ ಮೇಲಿನ ನಿರ್ಬಂಧವು ಸಾಂವಿಧಾನಿಕ ಪರೀಕ್ಷೆಯಲ್ಲಿ ಗೆಲ್ಲಬೇಕು

ಎಲ್ಲಾ ಹಕ್ಕುಗಳಂತೆ ಖಾಸಗಿ ಹಕ್ಕು ಸಹ ನಿರ್ದಿಷ್ಟ ನಿರ್ಬಂಧಗಳಿಗೆ ಒಳಪಟ್ಟಿದೆ. ಆದರೆ, ಯಾವುದೇ ನಿರ್ಬಂಧ ವಿಧಿಸಿದಾಗ ಅದು ಸಾಂವಿಧಾನಿಕ ಪರಿಶೀಲನೆಯಲ್ಲಿ ಗೆಲ್ಲಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಬೇಹುಗಾರಿಕೆ ಮೂಲಕ ಗುಪ್ತ ದಳಗಳು ಸಂಗ್ರಹಿಸುವ ಮಾಹಿತಿಯು ಹಿಂಸೆ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡಲು ಅತ್ಯಗತ್ಯ. ಈ ಮಾಹಿತಿ ಪಡೆಯಲು ವ್ಯಕ್ತಿಯ ಖಾಸಗಿತನ ಹಕ್ಕಿನಲ್ಲಿ ಮಧ್ಯಪ್ರವೇಶಿಸಲು ಅಗತ್ಯವೆನಿಸಬಹುದು. ರಾಷ್ಟ್ರೀಯ ಭದ್ರತೆ/ಹಿತಾಸಕ್ತಿ ಕಾಪಾಡಲು ಇದು ಅತ್ಯಗತ್ಯ ಎನಿಸಿದಾಗಲಷ್ಟೇ ಇದು ಸರಿ ಎಂದು ನ್ಯಾಯಾಲಯ ಹೇಳಿದೆ.

“ಅಂತಹ ಆಕ್ಷೇಪಿತ ತಂತ್ರಜ್ಞಾನದ ಬಳಕೆಯ ಪರಿಗಣನೆಯು ಸೂಕ್ತ ಪುರಾವೆಗಳನ್ನು ಆಧರಿಸಿರಬೇಕು. ಕಾನೂನು ಬದ್ಧವಾದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಅಗತ್ಯ ಶಾಸನಬದ್ಧ ರಕ್ಷಣೆಗಳನ್ನು ಹೊರತುಪಡಿಸಿ, ಸಂವಿಧಾನದ ಅಡಿ ಜಾರಿಗೊಳಿಸಲಾಗಿರುವ ಕಾನೂನಿಗೆ ವಿರುದ್ಧವಾಗಿ ವ್ಯಕ್ತಿಗಳ ಮೇಲೆ ಬೇಹಗಾರಿಕೆ ಅಸ್ತ್ರ ಪ್ರಯೋಗಿಸಲಾಗದು” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

4. ಮಾಧ್ಯಮದ ಮೇಲೆ ಬೇಹುಗಾರಿಕೆ ಪರಿಣಾಮ ಗಂಭೀರ

ವ್ಯಕ್ತಿಯ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂಬ ವಿಚಾರ ಅರಿವಿಗೆ ಬಂದರೆ ಅದು ಅವರು ತಮ್ಮ ಹಕ್ಕುಗಳನ್ನು ಚಲಾಯಿಸುವ ರೀತಿಗೆ ಸಮಸ್ಯೆ ಉಂಟು ಮಾಡುತ್ತದೆ. ಇಂಥ ಸಂದರ್ಭದಲ್ಲಿ ಸ್ವಯಂ ನಿರ್ಬಂಧ ಹೇರಿಕೊಳ್ಳುವ ಸನ್ನಿವೇಶ ಉದ್ಭವಿಸಬಹುದು. “ಮಾಧ್ಯಮ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ಥಂಭವಾಗಿದೆ. ವಾಕ್‌ ಸ್ವಾತಂತ್ರ್ಯದ ಮೇಲಿನ ಗಂಭೀರ ಪರಿಣಾಮವು ಸಾರ್ವಜನಿಕವಾಗಿ ಕಣ್ಗಾವಲು ಇಡುವ ಮಾಧ್ಯಮದ ಪಾತ್ರದ ಮೇಲಿನ ಹಲ್ಲೆಯಾಗುತ್ತದೆ. ಇದರಿಂದ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿ ನೀಡುವ ಮಾಧ್ಯಮದ ಶಕ್ತಿಯನ್ನು ಕುಂದಿಸಬಹುದು” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

5. ಸ್ಪಷ್ಟ ನಿಲುವು ಕೈಗೊಳ್ಳದ ಭಾರತ ಸರ್ಕಾರ

ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಕೈಗೊಳ್ಳುವ ಸಂಬಂಧ ಮತ್ತು ಮೊದಲ ಬಾರಿಗೆ ಪೆಗಸಸ್‌ ದಾಳಿ ನಡೆದಿದೆ ಎಂಬುದು ಸೇರಿದಂತೆ ಕಳೆದ ಎರಡು ವರ್ಷಗಳಲ್ಲಿ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವ ಕುರಿತು ಭಾರತ ಸರ್ಕಾರಕ್ಕೆ ಸಾಕಷ್ಟು ಅವಕಾಶ ನೀಡಲಾಯಿತು ಎಂದು ನ್ಯಾಯಾಲಯ ಹೇಳಿದೆ.

“ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆಯಾಗುವಂಥ ಯಾವುದೇ ಮಾಹಿತಿ ಹಂಚಿಕೊಳ್ಳುವಂತೆ ನಾವು ಬಯಸುತ್ತಿಲ್ಲ ಎಂಬುದನ್ನು ಸಾಲಿಸಿಟರ್‌ ಜನರಲ್‌ ಅವರಿಗೆ ಹಲವು ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದೇವೆ. ಪುನರಾವರ್ತಿತ ಭರವಸೆಗಳು ಮತ್ತು ಅವಕಾಶಗಳನ್ನು ನೀಡಿದರೂ ಅಂತಿಮವಾಗಿ ಭಾರತ ಸರ್ಕಾರವು ತಾನೇ ಹೇಳಿದಂತೆ 'ಸೀಮಿತ ಪ್ರಮಾಣ ಪತ್ರ' ಮಾತ್ರವೇ ಸಲ್ಲಿಸಿದ್ದು, ವಿಷಯಕ್ಕೆ ಸಂಬಂಧಿಸಿದಂತೆ ಇದು ಯಾವುದೇ ಮಾಹಿತಿ ಅಥವಾ ನಿಲುವನ್ನು ಸ್ಪಷ್ಟಪಡಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಯನ್ನು ಪ್ರಸ್ತಾಪಿಸಿ ನ್ಯಾಯಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ಹೇಳಿದೆ.

Also Read
ಪೆಗಸಸ್‌ ಬೇಹುಗಾರಿಕೆ ಹಗರಣದ ತನಿಖೆಗೆ ನಿವೃತ್ತ ನ್ಯಾ. ರವೀಂದ್ರನ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ ಸುಪ್ರೀಂ

6. ನಿರ್ದಿಷ್ಟವಾಗಿ ಏನನ್ನೂ ನಿರಾಕರಿಸಿದ ಕೇಂದ್ರ ಸರ್ಕಾರ

ಪೆಗಸಸ್‌ ಮೂಲಕ ಗೂಢಚರ್ಯೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಎತ್ತಿರುವ ಆರೋಪಗಳನ್ನು ನಿರ್ದಿಷ್ಟವಾಗಿ ಕೇಂದ್ರ ಸರ್ಕಾರ ಅಲ್ಲಗಳೆದಿಲ್ಲ. “ಕೇಂದ್ರ ಸರ್ಕಾರವು ಸಲ್ಲಿಸಿರುವ ಸೀಮಿತ ಅಫಿಡವಿಟ್‌ನಲ್ಲಿ ಅಸ್ಪಷ್ಟವಾಗಿ ಆರೋಪಗಳನ್ನು ಅಲ್ಲಗಳೆಯಲಾಗಿದೆ. ಇದು ಸಾಕಾಗದು” ಎಂದ ನ್ಯಾಯಾಲಯ. ಇಂಥ ಸಂದರ್ಭದಲ್ಲಿ ಅರ್ಜಿದಾರರು ಮೇಲ್ನೋಟಕ್ಕೆ ಮಾಡಿರುವ ಆರೋಪಗಳನ್ನು ಪರಿಶೀಲಿಸುವ ಅವಕಾಶವನ್ನು ಬಿಟ್ಟು ನಮಗೆ ಬೇರೆ ಸಾಧ್ಯತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

7. ಭಾರತೀಯರ ಮೇಲೆ ವಿದೇಶಿ ಸಂಸ್ಥೆಯ ಬೇಹುಗಾರಿಕೆ

ಭಾರತೀಯರ ಮೇಲೆ ವಿದೇಶಿ ಸಂಸ್ಥೆ ಬೇಹುಗಾರಿಕೆ ನಡೆಸಿದೆ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು. ವಿದೇಶಿ ಸಂಸ್ಥೆ, ಏಜೆನ್ಸಿ, ಖಾಸಗಿ ಸಂಸ್ಥೆಯು ಈ ದೇಶದ ಜನರ ಮೇಲೆ ಬೇಹುಗಾರಿಕೆ ನಡೆಸಿರಬಹುದು ಎನ್ನುವ ಅರ್ಜಿದಾರರ ವಾದವು ತಜ್ಞರ ಸಮಿತಿಯನ್ನು ನ್ಯಾಯಾಲಯವು ರಚಿಸಲು ತೂಕ ಒದಗಿಸಿತು.

Kannada Bar & Bench
kannada.barandbench.com