ಪೆಗಸಸ್ ಹಗರಣ: ಸುಪ್ರೀಂಕೋರ್ಟ್ ಇಂದು ವಿಚಾರಣೆ  ನಡೆಸುತ್ತಿರುವ 9 ಅರ್ಜಿಗಳ ಮಾಹಿತಿ

ಪೆಗಸಸ್ ಹಗರಣ: ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸುತ್ತಿರುವ 9 ಅರ್ಜಿಗಳ ಮಾಹಿತಿ

ಅರ್ಜಿಗಳನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿರುವ ಪೀಠ ವಿಚಾರಣೆ ನಡೆಸುತ್ತಿದೆ.

ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಪೆಗಸಸ್‌ ಗೂಢಚರ್ಯೆ ಹಗರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಒಂಬತ್ತು ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಇಂದು ವಿಚಾರಣೆಗೆ ಕೈಗೆತ್ತಿಕೊಂಡಿದೆ.

ಮನವಿಗಳನ್ನು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರಿರುವ ಪೀಠ ವಿಚಾರಣೆ ನಡೆಸುತ್ತಿದೆ. ಒಂಬತ್ತು ಅರ್ಜಿಗಳ ವಿವರ ಹೀಗಿದೆ:

ವಕೀಲ ಮನೋಹರ್‌ ಲಾಲ್‌ ಶರ್ಮಾ ಸಲ್ಲಿಸಿರುವ ಅರ್ಜಿ

ಪೆಗಸಸ್‌ ಹಗರಣ ಸದ್ದು ಮಾಡಿದಾಗ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ ಮೊದಲ ವ್ಯಕ್ತಿ ಇವರು. ಕಲ್ಲಿದ್ದಲು ಹಗರಣವನ್ನು ಪ್ರಶ್ನಿಸಿದ ಪ್ರಮುಖ ಅರ್ಜಿದಾರರು ಇವರಾಗಿದ್ದರು. ಕೆಲ ಕ್ಷುಲ್ಲಕ ಪಿಐಎಲ್‌ಗಳನ್ನು ದಾಖಲಿಸಿದ್ದಕ್ಕಾಗಿ ಇವರು ನ್ಯಾಯಾಲಯಕ್ಕೆ ದಂಡ ತೆತ್ತದ್ದೂ ಇದೆ. ಪೆಗಸಸ್‌ಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿಯಲ್ಲಿ ಶರ್ಮಾ “ಈ ಹಗರಣ ಭಾರತೀಯ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು ರಾಷ್ಟ್ರೀಯ ಭದ್ರತೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಸಮಸ್ಯೆಗಳನ್ನು ಒಳಗೊಂಡಿದೆ” ಎಂದಿದ್ದಾರೆ.

ಪ್ರಾರ್ಥನೆ: ಹಗರಣದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು.

ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್

ಸಿಪಿಐ(ಎಂ) ಪಕ್ಷದ ರಾಜ್ಯಸಭಾ ಸದಸ್ಯರಾಗಿರುವ ಕೇರಳದ ಜಾನ್‌ ಬ್ರಿಟ್ಟಾಸ್‌ ಹಗರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಎರಡನೇ ವ್ಯಕ್ತಿ. “ಗೂಢಚರ್ಯೆ, ಫೋನ್‌ ಕದ್ದಾಲಿಕೆ, ವೈರ್‌ ಟ್ಯಾಪಿಂಗ್‌ (ಅಂತರ್ಜಾಲ ಸೇರಿದಂತೆ ಸಂಪರ್ಕ ಸಾಧನಗಳ ಮೇಲೆ ಕಣ್ಗಾವಲು), ಲೈನ್‌ ಬಗಿಂಗ್‌ ಇತ್ಯಾದಿಗಳು ಫೋನ್‌ ಅಥವಾ ಅಂತರ್ಜಾಲ ಆಧರಿತ ಸಂಭಾಷಣೆಗಳ ಮೇಲೆ ಮೂರನೇ ವ್ಯಕ್ತಿ ಕಣ್ಗಾವಲು ಇರಿಸುವುದು ವ್ಯಕ್ತಿಗತ ಗೌಪ್ಯತೆಗೆ ನಿರ್ಣಾಯಕವಾಗಿ ಆಕ್ರಮಣಕಾರಿಯಾಗಿವೆ” ಎನ್ನುತ್ತದೆ ಅವರ ಅರ್ಜಿ.

ಪ್ರಾರ್ಥನೆ: ಹಗರಣದ ವಿಚಾರಣೆಗಾಗಿ ವಿಶೇಷ ತನಿಖಾ ತಂಡವನ್ನು ನ್ಯಾಯಾಲಯ ರಚಿಸಬೇಕು.

ಎನ್ ರಾಮ್ ಮತ್ತು ಶಶಿಕುಮಾರ್‌

ಹಿರಿಯ ಪತ್ರಕರ್ತರಾದ ಹಿಂದೂ ಗ್ರೂಪ್‌ ಆಫ್‌ ಪಬ್ಲಿಕ್ಷೇಷನ್‌ನ ನಿರ್ದೇಶಕ ಎನ್ ರಾಮ್ ಮತ್ತು ಏಷ್ಯಾನೆಟ್‌ನ ಶಶಿ ಕುಮಾರ್‌ ಅವರ ಅರ್ಜಿ “ಖಾಸಗಿತನದ ಹಕ್ಕು ಒಬ್ಬರ ಫೋನ್‌/ ಎಲೆಕ್ಟ್ರಾನಿಕ್‌ ಸಾಧನ ಬಳಕೆ ಮತ್ತು ನಿಯಂತ್ರಣದ ವ್ಯಾಪ್ತಿಯನ್ನೂ ಒಳಗೊಳ್ಳುತ್ತದೆ. ಹ್ಯಾಕಿಂಗ್‌/ ಟ್ಯಾಪಿಂಗ್‌ ಮೂಲಕ ನಡೆಸುವ ಯಾವುದೇ ಪ್ರತಿಬಂಧ ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದು ತಿಳಿಸುತ್ತದೆ. ಜೊತೆಗೆ “ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭದ್ರತಾ ಪ್ರಯೋಗಾಲಯ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳಿಂದ ಪೆಗಸಸ್‌ ಭದ್ರತಾ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ” ಎಂದು ಕೂಡ ಅರ್ಜಿ ವಿವರಿಸಿದೆ.

ಪ್ರಾರ್ಥನೆ: ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣೆ ನಡೆಯಬೇಕು.

ಭಾರತೀಯ ಸಂಪಾದಕರ ಕೂಟ

ಎಲೆಕ್ಟ್ರಾನಿಕ್ ಕಣ್ಗಾವಲು, ಹ್ಯಾಕಿಂಗ್ ಮತ್ತು ಬೇಹು- ತಂತ್ರಾಂಶ ಬಳಕೆ ಹಾಗೂ ಕಣ್ಗಾವಲು ಕುರಿತಂತೆ ಈಗಿರುವ ಕಾನೂನು ವ್ಯವಸ್ಥೆಯ ಸಾಂವಿಧಾನಿಕ ಅಧಿಕಾರವನ್ನು ಪತ್ರಿಕಾ ಸ್ವಾತಂತ್ರ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಲಾದ ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ತನ್ನ ಪಿಐಎಲ್‌ನಲ್ಲಿ ಪ್ರಶ್ನಿಸಿದೆ. “ಸಂವಿಧಾನದತ್ತವಾಗಿ ನೀಡಲಾದ ತನ್ನ ಅಧಿಕಾರದ ಎಲ್ಲೆಯನ್ನು ಆಡಳಿತಾರೂಢ ಸರ್ಕಾರ ಮೀರಿದೆಯೇ ಮತ್ತು ತಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಯವುದು ದೇಶದ ನಾಗರಿಕರ ಹಕ್ಕಾಗಿದೆ” ಎಂದು ಅರ್ಜಿ ತಿಳಿಸಿದೆ.

ಅಲ್ಲದೆ ಬೇಹು- ತಂತ್ರಾಂಶ ಬಳಸಿ ಪತ್ರಕರ್ತರನ್ನು ವಿಶೇಷವಾಗಿ ಗುರಿ ಮಾಡಲಾಗಿದ್ದು ಪತ್ರಿಕಾ ಸ್ವಾತಂತ್ರ್ಯ ಎಂಬುದು ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳು ಪತ್ರಕರ್ತರ ವರದಿಗಾರಿಕೆಯಲ್ಲಿ ಹಸ್ತಕ್ಷೇಪ ಮಾಡದೇ ಇರುವುದನ್ನು ಆಧರಿಸಿದೆ ಎಂದು ಕೂಟ ಹೇಳಿದೆ.

ಪ್ರಾರ್ಥನೆ: ವಿಶೇಷ ತನಿಖಾ ತಂಡದ ಮೂಲಕ ಹಗರಣದ ತನಿಖೆಯಾಗಬೇಕು.

ಇತರ ಎರಡು ಪಿಐಎಲ್‌ಗಳು

ಜಗದೀಪ್ ಎಸ್ ಚೋಕರ್ ಮತ್ತು ನರೇಂದ್ರ ಮಿಶ್ರಾ ಅವರು ಸಲ್ಲಿಸಿರುವ ಇನ್ನೆರಡು ಪಿಐಎಲ್ ಅರ್ಜಿಗಳು ಇಂದು ವಿಚಾರಣೆಗೆ ಬರಲಿವೆ, ಆದರೆ ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಿಲ್ಲ.

ರೂಪೇಶ್‌ ಕುಮಾರ್‌ ಸಿಂಗ್‌, ಇಪ್ಸಾ ಶತಾಕ್ಷಿ

ಪೆಗಸಸ್‌ ಬೇಹು- ತಂತ್ರಾಂಶ ವಿಚಕ್ಷಣೆಗೆ ಗುರಿಯಾಗಿದ್ದ ಇಬ್ಬರು ಪತ್ರಕರ್ತರಾದ ರೂಪೇಶ್‌ ಕುಮಾರ್‌ ಸಿಂಗ್‌, ಇಪ್ಸಾ ಶತಾಕ್ಷಿ ಅವರು ಸುಪ್ರೀಂಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಖುದ್ದಾಗಿ ತಾವೇ ಗೂಢಚರ್ಯೆಗೆ ಗುರಿಯಾದ ವ್ಯಕ್ತಿಗಳಾಗಿರುವುದರಿಂದ ಅವರು ಪಿಐಎಲ್‌ ಸಲ್ಲಿಸದೆ ರಿಟ್‌ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತಮ್ಮನ್ನು ಆಳವಾದ ಕಣ್ಗಾವಲಿಗೆ ಒಳಪಡಿಸಲಾಗಿದೆ ಮತ್ತು ಕೇಂದ್ರ ಸರ್ಕಾರ ಅಥವಾ ಯಾವುದೋ ಮೂರನೇ ವ್ಯಕ್ತಿ ಹ್ಯಾಕಿಂಗ್‌ಗೆ ಒಳಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರಾರ್ಥನೆ: ಪೆಗಸಸ್‌ ಬಳಕೆಗೆ ಸಂಬಂಧಿಸಿದ ಎಲ್ಲಾ ತನಿಖೆ, ಅಧಿಕಾರ ಮತ್ತು ಆದೇಶಗಳ ಕುರಿತಾದ ಸಾಕ್ಷ್ಯ ಮತ್ತು ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮತ್ತು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು. ಜೊತೆಗೆ ಖಾಸಗಿತನದ ಮೇಲಿನ ಆಕ್ರಮಣ ಮತ್ತು ಹ್ಯಾಕಿಂಗ್‌ ಕುರಿತು ಯಾವುದೇ ದೂರುಗಳನ್ನು ಪರಿಗಣಿಸಲು ಮತ್ತು ಅದಕ್ಕೆ ಕಾರಣರಾದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಶಿಕ್ಷಿಸಲು ನ್ಯಾಯಾಂಗ ಮೇಲ್ವಿಚಾರಣೆ ವ್ಯವಸ್ಥೆಯನ್ನು ಜಾರಿಗೆ ತರಬೇಕು.

ಪರಂಜಯ್‌ ಗುಹಾ ಠಾಕೂರ್ತಾ

ಪೆಗಸಸ್‌ ಗೂಢಚರ್ಯೆ ಪಟ್ಟಿಯಲ್ಲಿರುವ ಮತ್ತೊಬ್ಬ ಪತ್ರಕರ್ತ ಇವರು. ರೂಪೇಶ್‌ ಕುಮಾರ್‌ ಸಿಂಗ್‌, ಇಪ್ಸಾ ಶತಾಕ್ಷಿ ಅವರು ಸಲ್ಲಿಸಿರುವ ಅರ್ಜಿಯಲ್ಲಿರುವ ಸಮಾನ ಅಂಶಗಳೇ ಇವರ ಅರ್ಜಿಯಲ್ಲಿಯೂ ಕಂಡುಬರುತ್ತವೆ.

ಎಸ್‌ಎನ್‌ಎಂ ಅಬಿದಿ ಮತ್ತು ಪ್ರೇಮಶಂಕರ್‌ ಝಾ

ಇವರು ಕೂಡ ಪೆಗಸಸ್‌ ಪಟ್ಟಿಯಲ್ಲಿರುವ ಪತ್ರಕರ್ತರಾಗಿದ್ದು ಮೇಲಿನ ಮೂವರಂತೆಯೇ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com