ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸುಪ್ರೀಂ ನಿರ್ದೇಶನ; ಬಿಬಿಎಂಪಿಗೂ ಚುನಾವಣೆ ಸಾಧ್ಯತೆ

ತೀರ್ಪು ದೇಶದೆಲ್ಲೆಡೆ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಅನ್ವಯ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಶೀಘ್ರವೇ ಬಿಬಿಎಂಪಿಗೂ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಸುಪ್ರೀಂ ನಿರ್ದೇಶನ; ಬಿಬಿಎಂಪಿಗೂ ಚುನಾವಣೆ ಸಾಧ್ಯತೆ

ಮಧ್ಯಪ್ರದೇಶದಲ್ಲಿ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಾವುದೇ ವಿಳಂಬ ಮಾಡದೆ ಪ್ರಸ್ತುತ ನಡೆದಿರುವ ಸೀಟು ಹಂಚಿಕೆಯ ಪ್ರಕಾರವೇ ನಡೆಸುವಂತೆ ಸುಪ್ರೀಂ ಕೋರ್ಟ್‌ ಇಂದು ಆದೇಶ ನೀಡಿದ್ದು ತೀರ್ಪು ಕರ್ನಾಟಕದ ಬಿಬಿಎಂಪಿ ಸೇರಿದಂತೆ ಚುನಾವಣೆ ನಡೆಯಬೇಕಿರುವ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗುವ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ [ಸುರೇಶ್‌ ಮಹಾಜನ್‌ ಮತ್ತು ಮಧ್ಯಪ್ರದೇಶ ಸರ್ಕಾರದ ನಡುವಣ ಪ್ರಕರಣ].

ತೀರ್ಪು ದೇಶದೆಲ್ಲೆಡೆ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಅನ್ವಯ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಶೀಘ್ರವೇ ಬಿಬಿಎಂಪಿ ಸೇರಿದಂತೆ ಕರ್ನಾಟಕದ ಸ್ಥಳೀಯ ಸಂಸೈಗಳಿಗೂ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರಿಸಿವೆ.

ಬಿಬಿಎಂಪಿಯಲ್ಲಿ 198ರಷ್ಟಿದ್ದ ವಾರ್ಡ್‌ಗನ್ನು 243ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನ ಕೈಗೊಂಡಿದ್ದರಿಂದ ಚುನಾವಣೆ ವಿಳಂಬವಾಗಿತ್ತು. ಆದರೆ 243ರ ಬದಲಿಗೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ 2020ರಲ್ಲಿ ಕರ್ನಾಟಕ ಹೈಕೋರ್ಟ್‌ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸಿದ್ದ ಕರ್ನಾಟಕ ವಿಧಾನಸಭೆ, 243 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು ಎಂಬ ನಿರ್ಣಯ ಕೈಗೊಂಡಿತ್ತು. ಜೊತೆಗೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಇದೀಗ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಿಂದಾಗಿ ಬಿಬಿಎಂಪಿ ಸೇರಿದಂತೆ ಕರ್ನಾಟಕದ ಉಳಿದ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಹಸಿರು ನಿಶಾನೆ ದೊರೆತಂತಾಗಿದೆ.

ಆದೇಶದ ವಿವರ

ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಸುವುದು ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಎ ಎಸ್ ಓಕಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ತಿಳಿಸಿತು.

ತಮ್ಮ ಅಧಿಕಾರಾವಧಿ ಮುಗಿಯುವ ಸ್ವಲ್ಪ ಮೊದಲು ಸ್ಥಳೀಯ ಸಂಸ್ಥೆಗಳು ವಿಸರ್ಜನೆಗೊಂಡಾಗ ಮಾತ್ರ ಚುನಾವಣೆಗೆ ಸಂಬಂಧಿಸಿದಂತೆ ವಿರಾಮ ನೀಡಬಹುದು. ಆದರೆ ಮಧ್ಯಪ್ರದೇಶದಲ್ಲಿ 23,000 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದ್ದು 5 ವರ್ಷಗಳ ಅಧಿಕಾರಾವಧಿ ಮುಗಿಯುವ ಮೊದಲು ಎಲ್ಲಾ ಸಂಸ್ಥೆಗಳಲ್ಲಿ ಹೊಸದಾಗಿ ಚುನಾಯಿತ ಸದಸ್ಯರನ್ನು ಚುನಾಯಿಸಲು ನಾಗರಿಕರು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ತ್ರಿವಳಿ ಪರೀಕ್ಷೆಗಳಿಗೆ ಅನುಗುಣವಾಗಿ ಚುನಾವಣೆ ನಡೆಯಬೇಕಿದ್ದರೂ ಅಂತಹ ಪ್ರಯತ್ನಗಳು ಚುನಾವಣೆ ತಡೆಹಿಡಿಯುವುದನ್ನು ಮತ್ತು ಆಡಳಿತಕ್ಕೆ ಅಡ್ಡಿಪಡಿಸುವುದನ್ನು ನ್ಯಾಯಸಮ್ಮತ ಎಂದು ಪರಿಗಣಿಸಲಾಗದು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆಗೆ ಮೊದಲು ಅಸ್ತಿತ್ವದಲ್ಲಿದ್ದ ವಾರ್ಡ್ ಅಥವಾ ಸ್ಥಾನಗಳಿಗೆ ಅನುಗುಣವಾಗಿ ಚುನಾವಣೆ ನಡೆಸುವಂತೆ ನಿರ್ದೇಶಿಸಿದೆ.

ಸಾಮಾನ್ಯ ವರ್ಗದ ಸ್ಥಾನಗಳಿಗೆ ಒಬಿಸಿ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲು ಒಬಿಸಿ ಪರ ಪಕ್ಷಗಳು ಸ್ವತಂತ್ರವಾಗಿವೆ. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ತ್ರಿವಳಿ ಪರೀಕ್ಷೆ ಪಾಲಿಸುವುದು ಸಂಕೀರ್ಣವಾಗಿದ್ದು ಸಮಯ ಹಿಡಿಯುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪರೀಕ್ಷೆ ಪೂರ್ಣಗೊಳ್ಳದೇ ಇದ್ದಲ್ಲಿ ಭವಿಷ್ಯದಲ್ಲಿ ನಡೆಯಲಿರುವ ಚುನಾವಣೆಗಳಿಗೂ ಈ ನಿರ್ದೇಶನ ಅನ್ವಯವಾಗಲಿದೆ. ಆದ್ದರಿಂದ 2 ವಾರಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಲು ಮಧ್ಯಪ್ರದೇಶ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದ್ದು, ಇದಕ್ಕಾಗಿ ಸರ್ಕಾರ ಅಗತ್ಯವಿರುವ ಎಲ್ಲಾ ನೆರವು ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂದುಳಿದ ವರ್ಗಗಳ ಸಮಿತಿಯ ವರದಿ ತ್ರಿವಳಿ ಪರೀಕ್ಷೆಗೆ ಅನುಗುಣವಾಗಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಈ ಹಂತದಲ್ಲಿ ಅಂತಹ ವರದಿಯನ್ನು ಪರಿಶೀಲಿಸುವುದಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ. ಪ್ರಕರಣವನ್ನು ಜುಲೈ 12ಕ್ಕೆ ಪಟ್ಟಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com