ದಕ್ಷಿಣ ಪಿನಾಕಿನಿ ವಿವಾದ: ಕರ್ನಾಟಕ, ತಮಿಳುನಾಡು ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ

ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳನ್ನು ಒಳಗೊಂಡಿರುವ ವಿವಾದ ಬಗೆಹರಿಸಲು ಹೊರಟರೆ ತಾವು ಪರಸ್ಪರ ಜಗಳವಾಡಲು ಮುಂದಾಗಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಲಘು ಧಾಟಿಯಲ್ಲಿ ಪ್ರತಿಕ್ರಿಯಿಸಿದರು.
Justice AS Bopanna and Justice MM Sundresh
Justice AS Bopanna and Justice MM Sundresh

ದಕ್ಷಿಣ ಪಿನಾಕಿನಿ (ಪೆನ್ನಾರ್‌) ನದಿಗೆ ಸಂಬಂಧಿಸಿದ ಅಂತಾರಾಜ್ಯ ಜಲ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ತಾವು ಪ್ರಕರಣಕ್ಕೆ ಸಂಬಂಧೀಇಸದ ರಾಜ್ಯಗಳಿಗೆ ಸೇರಿರುವುದರಿಂದ ವ್ಯಾಜ್ಯದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.

ವಿವಾದ ಬಗೆಹರಿಸಲು ಹೊರಟರೆ ತಾವು ಪರಸ್ಪರ ಜಗಳವಾಡಲು ಮುಂದಾಗಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ (ಕರ್ನಾಟಕ ಮೂಲದವರು) ಹಾಗೂ ಎಂ ಎಂ ಸುಂದರೇಶ್‌ (ತಮಿಳುನಾಡು ಮೂಲದವರು) ಲಘು ಧಾಟಿಯಲ್ಲಿ ಮೌಖಿಕವಾಗಿ ಪ್ರತಿಕ್ರಿಯಿಸಿದರು.  

"ನಾವಿಬ್ಬರೂ ಪ್ರಕರಣ ಆಲಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಸುಂದರೇಶ್ ಹೇಳಿದರು. ಆಗ ಲಘು ಧಾಟಿಯಲ್ಲಿ ನ್ಯಾ ಬೋಪಣ್ಣ ಅವರು “ನಾವು ಹೊಡೆದಾಡಿಕೊಳ್ಳಲು ಶುರುಮಾಡುತ್ತೇವೆ” ಎಂದರು.

ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತಮಿಳುನಾಡು ಸರ್ಕಾರ ಮೂಲ ದಾವೆ ಹೂಡಿತ್ತು. ಕರ್ನಾಟಕದಲ್ಲಿ ದಕ್ಷಿಣ ಪಿನಾಕಿನಿ ಎಂದೇ ಕರೆಯಲ್ಪಡುವ ನದಿಯನ್ನು ತಮಿಳುನಾಡಿನಲ್ಲಿ ಪೆನ್ನಾರ್‌ ಎನ್ನಲಾಗುತ್ತದೆ.

ಪೆನ್ನಾರ್‌ ಜಲ ವಿವಾದ ನ್ಯಾಯಾಮಂಡಳಿ ರಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ  ಸಂಪುಟದ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರೂ ಅದಿನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವಾಲಯ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಅಂತಾರಾಜ್ಯ ವಿವಾದವನ್ನು ಮಾತುಕತೆಗಳ ಮೂಲಕ ಪರಿಹರಿಸಲು ವಿಳಂಬ ಮಾಡುತ್ತಿರುವುದಕ್ಕಾಗಿ ನ್ಯಾಯಾಲಯ ನವೆಂಬರ್ 2022 ರಲ್ಲಿ,  ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

Related Stories

No stories found.
Kannada Bar & Bench
kannada.barandbench.com