ಪಿಂಚಣಿ ಎಂಬುದು ನಿರಂತರ ವ್ಯಾಜ್ಯ ಕಾರಣ, ವಿಳಂಬವಾಗಿದೆ ಎಂದು ಪಿಂಚಣಿ ಬಾಕಿ ನಿರಾಕರಿಸುವಂತಿಲ್ಲ: ಸುಪ್ರೀಂ ಕೋರ್ಟ್

ಮೇಲ್ಮನವಿದಾರರಿಗೆ ಬಾಕಿ ಇರುವ ಪಿಂಚಣಿಯನ್ನು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Justice MR Shah, Justice BV Nagarathna and Supreme Court
Justice MR Shah, Justice BV Nagarathna and Supreme Court
Published on

ಪಿಂಚಣಿಯು ನಿರಂತರ ವ್ಯಾಜ್ಯ ಕಾರಣವಾಗಿದ್ದು ವಿಳಂಬದ ಕಾರಣಕ್ಕೆ ಪಿಂಚಣಿ ಬಾಕಿಯನ್ನು (ಅರಿಯರ್ಸ್‌) ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಮೃತ ಎಂ ಎಲ್‌ ಪಾಟೀಲ್‌ ಎಲ್‌ ಆರ್‌ ಅವರ ಮೂಲಕ ಸಲ್ಲಿಸಿದ ಅರ್ಜಿ ಮತ್ತು ಗೋವಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮೇಲ್ಮನವಿದಾರರಿಗೆ ಬಾಕಿ ಇರುವ ಪಿಂಚಣಿಯನ್ನು ಬಾಂಬೆ ಹೈಕೋರ್ಟ್‌ ನಿರಾಕರಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.

58 ವರ್ಷ ವಯಸ್ಸಿನಲ್ಲಿ ತಮ್ಮನ್ನು ವಯೋನಿವೃತ್ತಿ/ನಿವೃತ್ತಿಗೊಳಿಸುವ ಪ್ರತಿವಾದಿ ಗೋವಾ ಸರ್ಕಾರದ ಕ್ರಮವನ್ನು ಮೇಲ್ಮನವಿದಾರರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೇಲ್ಮನವಿದಾರರ ಪ್ರಕಾರ ಅವರ ನಿವೃತ್ತಿಯ ವಯಸ್ಸು 60 ವರ್ಷಗಳು.

ಅರ್ಜಿದಾರರ ನಿವೃತ್ತಿ ವಯಸ್ಸು 60 ವರ್ಷಗಳಾಗಿದ್ದು ಅವರನ್ನು 58ನೇ ವರ್ಷದಲ್ಲಿ ತಪ್ಪಾಗಿ ನಿವೃತ್ತಿಗೊಳಿಸಲಾಗಿದೆ ಎಂಬ ಅಂಶವನ್ನು ಹೈಕೋರ್ಟ್‌ ಪರಿಗಣಿಸಿದರೂ ಮೇಲ್ಮನವಿದಾರರು ತಡವಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಎಂಬ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅರ್ಜಿದಾರರು ಯಾವುದೇ ವೇತನ ಅಥವಾ ಬಾಕಿ ಪಿಂಚಣಿಗೆ ಅರ್ಹರಲ್ಲ ಎಂದು ಅದು ತೀರ್ಪು ನೀಡಿತ್ತು. ಇದನ್ನು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Also Read
ಕೇಂದ್ರದ 'ಒಂದು ಶ್ರೇಣಿ ಒಂದು ಪಿಂಚಣಿ' ಯೋಜನೆಯಲ್ಲಿ ಸಾಂವಿಧಾನಿಕ ಲೋಪವಿಲ್ಲ: ಸುಪ್ರೀಂ ಕೋರ್ಟ್

ಸರ್ವೋಚ್ಚ ನ್ಯಾಯಾಲಯದ ಪ್ರಮುಖ ಅವಲೋಕನಗಳು

  • ಮೇಲ್ಮನವಿದಾರರು ಯಾವುದೇ ಬಾಕಿ ಪಿಂಚಣಿಗೆ ಅರ್ಹರಲ್ಲ ಎಂದು ತೀರ್ಮಾನಿಸುವಲ್ಲಿ ಹೈಕೋರ್ಟ್‌ನಿಂದ ತಪ್ಪಾಗಿದೆ.

  • ತಡವಾಗಿರುವ ಕಾರಣಕ್ಕೆ, ಎರಡು ಹೆಚ್ಚುವರಿ ವರ್ಷಗಳ ಅವಧಿಗೆ ಸೇವೆಯಲ್ಲಿ ಮುಂದುವರಿದರೆ ಮೇಲ್ಮನವಿದಾರರಿಗೆ ಸಿಗುತ್ತಿದ್ದ ಯಾವುದೇ ವೇತನ ನಿರಾಕರಿಸಿದ ವಿಚಾರವಾಗಿ ಹೈಕೋರ್ಟ್‌ ಸರಿ ಮತ್ತು ಅಥವಾ ಸಮರ್ಥನೀಯ ಹೆಜ್ಜೆ ಇರಿಸಿದೆ. ಆದರೆ ನಿರಂತರ ವ್ಯಾಜ್ಯ ಕಾರಣವಾಗಿರುವ ಪಿಂಚಣಿಗೆ ಸಂಬಂಧಿಸಿದಂತೆ ಪಿಂಚಣಿ ಬಾಕಿಯನ್ನು ನಿರಾಕರಿಸುವಂತಿಲ್ಲ.

  • ಮೇಲ್ಮನವಿದಾರರಿಗೆ ಬಾಕಿ ಇರುವ ಪಿಂಚಣಿಯನ್ನು ನಿರಾಕರಿಸಿರುವುದಕ್ಕೆ ಯಾವುದೇ ಸಮರ್ಥನೆಯನ್ನು ಹೈಕೋರ್ಟ್‌ ನೀಡಿಲ್ಲ.

  • ಮೇಲ್ಮನವಿದಾರರಿಗೆ 60 ವರ್ಷ ಆದ ದಿನದಿಂದ ಅವರು ಪರಿಷ್ಕೃತ ದರಗಳಲ್ಲಿ ಪಿಂಚಣಿಗೆ ಅರ್ಹರಾಗಿರುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ಪಿಂಚಣಿಯ ಬಾಕಿಯನ್ನು ಅವರಿಗೆ ಪಾವತಿಸಬೇಕು.

ಪರಿಣಾಮ, ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ಮೇಲ್ಮನವಿಯನ್ನು ಭಾಗಶಃ ಅನುಮತಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
ML_Patil__Dead__through_LRs_v__State_of_Goa_and_Another.pdf
Preview
Kannada Bar & Bench
kannada.barandbench.com