

“ವೈದ್ಯಕೀಯ ಅರ್ಹತೆಯಲ್ಲದೇ ಪಿಸ್ತುಲ್ಲಾಗೆ ಶಸ್ತ್ರಚಿಕಿತ್ಸೆ ಮಾಡಿರುವುದು ವಂಚನೆಯಲ್ಲದೆ ಮತ್ತೇನು” ಎಂದು ಶುಕ್ರವಾರ ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, ಕಾನೂನುಬಾಹಿರವಾಗಿ ಕ್ಲಿನಿಕ್ ನಡೆಸುತ್ತಿರುವುದು ಮತ್ತು ಜನರಿಗೆ ವಂಚಿಸಿದ ಆರೋಪದ ಮೇಲೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ನಯನಾ ಕ್ಲಿನಿಕ್‌ನ ಎಂ ಕೆ ಮಡಲ್ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿದೆ.
ಹಿರಿಯೂರಿನ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಮಿಲನ್ ಮಂಡಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಪೀಠವು “ಯಾರು ಯಾರನ್ನು ವೈದ್ಯರು ಎಂದು ಕರೆದುಕೊಳ್ಳಬಹುದು? ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘದಿಂದ ಸರ್ಟಿಫಿಕೇಟ್ ಪಡೆಯಲಾಗಿದೆ. ಅರ್ಜಿದಾರರಿಗೆ ಡಾಕ್ಟರೇಟ್ ನೀಡಿದ್ದು ಯಾರು? ಪಾರಂಪರಿಕ, ನಾಟಿ, ಆರ್‌ಎಂಪಿ ರಿಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಷನರ್ ಎಂದು ಹೇಳಿದ್ದೀರಿ. ಪಿಎಂಪಿ ಎಂದರೆ ಪೈಲ್ಸ್ ಮೆಡಿಕಲ್ ಪ್ರಾಕ್ಟಿಷನರೇ? ಡಾಕ್ಟರ್ ಪಿಸ್ತುಲ್ಲಾ! ಅರ್ಹತೆ ಇಲ್ಲದೇ ಪಿಸ್ತುಲ್ಲಾ ಶಸ್ತ್ರಚಿಕಿತ್ಸೆ ಮಾಡಿದ್ದೀರಿ. ಇದು ವಂಚನೆಯಲ್ಲದೇ ಇನ್ನೇನು?” ಎಂದು ಪ್ರಶ್ನಿಸಿತು.
“ಕ್ಲಿನಿಕ್‌ನಲ್ಲಿ ಕುಲ್ತಾಬ್ ಟ್ಯಾಬ್ಲೆಟ್, ಸರ್ಜಿಕಲ್ ಸ್ಪಿರಿಟ್, ಸೀಸರ್ಸ್ ಸಿಕ್ಕಿದೆ. ಶಸ್ತ್ರಚಿಕಿತ್ಸೆಯನ್ನೇ ಮಾಡುವುದಿಲ್ಲ ಎನ್ನುವುದಾದರೆ ಇದೆಲ್ಲಾ ಏತಕ್ಕಾಗಿ ಕ್ಲಿನಿಕ್‌ನಲ್ಲಿ ಸಿಕ್ಕಿದೆ? ಪಿಸ್ತುಲ್ಲಾ ಸರ್ಜರಿ ಮಾಡೋಣ” ಎಂದು ಲಘುದಾಟಿಯಲ್ಲಿ ಪೀಠ ಮೌಖಿಕವಾಗಿ ಹೇಳಿತು.
ಅರ್ಜಿದಾರರ ಪರ ವಕೀಲರು “ಕೆಪಿಎಂ ಕಾಯಿದೆಯ ಸೆಕ್ಷನ್ ೪ರ ಅಡಿ ಅರ್ಜಿದಾರರಿಗೆ ಸರ್ಟಿಫಿಕೇಟ್ ನೀಡಲಾಗಿದೆ. ಅಲೋಪಥಿಗಿಂತ ಇಲ್ಲಿನ ಚಿಕಿತ್ಸಾ ವಿಧಾನ ಪರಿಣಾಮಕಾರಿಯಾಗಿದೆ” ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿತು.
ಪ್ರಕರಣದ ಹಿನ್ನೆಲೆ: ಹುಳಿಯಾರು ರಸ್ತೆಯ ಎಸ್‌ಬಿಐ ಬ್ಯಾಂಕ್ ಪಕ್ಕದಲ್ಲಿರುವ ನಯನಾ ಕ್ಲಿನಿಕ್‌ನ ವೈದ್ಯ ಡಾ. ಎಂ ಕೆ ಮಂಡಲ್ ಅವರು ಯಾವುದೇ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆಯದೇ ಕೆಪಿಎಂಇ ಪ್ರಾಧಿಕಾರದಿಂದ ನೋಂದಣಿಯಾಗದೆ, ವೈದ್ಯಕೀಯ ನಿಪುಣತೆಯಿಲ್ಲದೆ ಆರೋಗ್ಯ ಇಲಾಖೆಯಿಂದ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಹಿರಿಯೂರು ತಾಲ್ಲೂಕಿನ ಮ್ಯಾಕ್ಲೂರಹಳ್ಳಿಯ ಪಾಂಡುರಂಗಪ್ಪ ಶನಿದೇವರಹಟ್ಟಿ ಅವರಿಗೆ 21-01-2021ರಂದು ಪಿಸ್ತೂಲ್ ಕಾಯಿಲೆಗೆ ಆಪರೇಷನ್ ಮಾಡಿರುವುದರಿಂದ ರೋಗಿಗೆ ಆಂತರಿಕ ಸ್ಪಿಂಕ್ಟರ್ಗೆ ಹಾನಿಯಾಗಿದೆ ಎಂದು ಅವರ ಪುತ್ರ 25.11.2025ರಂದು ದೂರು ನೀಡಿದ್ದರು.
ಇದನ್ನು ಆಧರಿಸಿ ಎಂ ಕೆ ಮಂಡಲ್ ವಿರುದ್ಧ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ ಸೆಕ್ಷನ್ 19, ಬಿಎನ್‌ಎಸ್ ಸೆಕ್ಷನ್‌ಗಳಾದ -318(2), 319(2)ರ ಅಡಿ ಹಿರಿಯೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.