ಕಾಂಗ್ರೆಸ್‌ ಕಾರ್ಯಕರ್ತರ ಕೊಲೆ: 10 ಜನ ಸಿಪಿಐ(ಎಂ) ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ, ಮಾಜಿ ಶಾಸಕನಿಗೆ 5 ವರ್ಷ ಸಜೆ

ಕಾಸರಗೋಡಿನ ಪೆರಿಯಾ ಅವಳಿ ಕೊಲೆ ಎಂದೇ ಕರೆಯಲಾಗುವ ಈ ಪ್ರಕರಣದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಪಿ ಕೆ ಅವರನ್ನು ಹತ್ಯೆಗೈಯಲಾಗಿತ್ತು.
Gavel
Gavel
Published on

ಕೇರಳದಲ್ಲಿ 2019ರಲ್ಲಿ ನಡೆದಿದ್ದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ರಾಜಕೀಯ ಪ್ರೇರಿತ ಕೊಲೆಗೆ ಸಂಬಂಧಿಸಿದಂತೆ ಕೇರಳ ನ್ಯಾಯಾಲಯವು ಶುಕ್ರವಾರ 10 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಾಸರಗೋಡಿನ ಪೆರಿಯಾ ಅವಳಿ ಕೊಲೆ ಎಂದೇ ಕರೆಯಲಾಗುವ ಈ ಪ್ರಕರಣದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌ ಮತ್ತು ಶರತ್‌ಲಾಲ್‌ ಪಿ ಕೆ ಅವರನ್ನು ಹತ್ಯೆಗೈಯಲಾಗಿತ್ತು. ಸಿಪಿಐ(ಎಂ) (ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)) ಪೆರಿಯಾದ ಸ್ಥಳೀಯ ಸಮಿತಿಯ ಸದಸ್ಯ ಎ ಪೀತಾಂಬರನ್ ನೇತೃತ್ವದ 8 ಜನರ ತಂಡವು ಕೃತ್ಯವನ್ನು ಎಸಗಿತ್ತು ಎನ್ನಲಾಗಿತ್ತು.

ವರದಿಗಳ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂನ ಸಿಬಿಐ ವಿಶೇಷ ನ್ಯಾಯಾಲಯವು ಹತ್ತು ಜನ ಸ್ಥಳೀಯ ಸಿಪಿಐ (ಎಂ) ಕಾರ್ಯಕರ್ತರನ್ನು ದೋಷಿಗಳೆಂದು ತೀರ್ಮಾನಿಸಿ ದುಪ್ಪಟ್ಟು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಪ್ರಕರಣದಲ್ಲಿ ಸಿಪಿಐ(ಎಂ) ಮಾಜಿ ಶಾಸಕ ಕೆ ವಿ ಕುಂಞರಾಮನ್ ಸೇರಿದಂತೆ ಇತರ ನಾಲ್ವರಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ವಿವಾದಾತ್ಮಕ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೇಕಲ ಪೊಲೀಸರು ಮತ್ತು ನಂತರ ಕ್ರೈಂ ಬ್ರಾಂಚ್ ನಡೆಸಿತ್ತು. ಆದರೆ ನಂತರ ಸಂತ್ರಸ್ತರ ಪೋಷಕರ ಮನವಿ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ತನಿಖೆಯನ್ನು ಸಿಬಿಐಗೆ ವರ್ಗಾಯಿಸುವುದನ್ನು ರಾಜ್ಯ ಸರ್ಕಾರವು ಮೊದಲು ಕೇರಳ ಹೈಕೋರ್ಟ್‌ನಲ್ಲಿ, ನಂತರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು, ಆದಾಗ್ಯೂ, ಎರಡೂ ಪ್ರಯತ್ನಗಳು ವಿಫಲವಾಗಿದ್ದವು. ಅಂತಿಮವಾಗಿ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತು.

ಡಿಸೆಂಬರ್ 28, 2024 ರಂದು, ಸಿಬಿಐ ನ್ಯಾಯಾಲಯವು 24 ಆರೋಪಿಗಳಲ್ಲಿ 14 ಆರೋಪಿಗಳನ್ನು ಕೊಲೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ದೋಷಿಗಳೆಂದು ಘೋಷಿಸಿತು.

Kannada Bar & Bench
kannada.barandbench.com