ದೆಹಲಿ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶಗಳ ಅನುಪಾಲನೆಯನ್ನು ಮಾಡಲಾಗಿದ್ದು ಶಾಶ್ವತ ಮುಖ್ಯ ಅನುಪಾಲನಾ ಅಧಿಕಾರಿ, ಅಹವಾಲು ಅಧಿಕಾರಿ ಮತ್ತು ನೋಡಲ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿರುವುದಾಗಿ ಟ್ವಿಟರ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ (ಅಮಿತ್ ಆಚಾರ್ಯ ವರ್ಸಸ್ ಭಾರತ ಸರ್ಕಾರ ಮತ್ತಿತರರು).
ಟ್ವಿಟರ್ ಪರವಾಗಿ ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಹಿರಿಯ ವಕೀಲ ಸಜನ್ ಪೂವಯ್ಯ ಅವರು ಈ ಸಂಬಂಧ ನವೀಕರಿಸಿದ ಅಫಿಡವಿಟ್ ಸಲ್ಲಿಸಿರುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು, ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು 2021 ರ ಅನ್ವಯ ಮಾಡಬೇಕಾದ ಅನುಪಾಲನೆಯನ್ನು ಈ ನೇಮಕಾತಿಗಳ ಮೂಲಕ ಟ್ವಿಟರ್ ಮಾಡಿದೆ ಎಂದು ನ್ಯಾಯಾಲಯಕ್ಕೆ ಹೇಳಿದರು. ಅಲ್ಲದೆ, ಟ್ವಿಟರ್ ತನ್ನ ಹೊಸ ಅಫಿಡವಿಟ್‌ನಲ್ಲಿ ಸಲ್ಲಿಸಿರುವ ಮಾಹಿತಿಯನ್ನು ಔಪಚಾರಿಕವಾಗಿ ಪರಿಶೀಲಿಸಲು ಸಮಯಾವಕಾಶ ಕಲ್ಪಿಸುವಂತೆ ಅವರು ನ್ಯಾಯಪೀಠವನ್ನು ಕೋರಿದರು.
ಪ್ರಕರಣದ ಸಂಬಂಧ ನ್ಯಾಯಮೂರ್ತಿ ರೇಖಾ ಪಲ್ಲಿ ಅವರು, ಟ್ವಿಟರ್ ತನ್ನ ಹಿಂದಿನ ಆದೇಶಗಳನ್ನು ಅನುಪಾಲನೆ ಮಾಡಿದಂತೆ ತೋರಿದೆ ಎಂದು ದಾಖಲಿಸಿಕೊಂಡರು. ಪ್ರಕರಣವನ್ನು ಆಗಸ್ಟ್ 10, 2021ಕ್ಕೆ ಮುಂದೂಡಲಾಯಿತು.
ಈ ಹಿಂದಿನ ವಿಚಾರಣೆ ವೇಳೆ, ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಟ್ವಿಟರ್ ಸಲ್ಲಿಸಿದ್ದ ಅಫಿಡವಿಟ್ ಅಸಮರ್ಪಕವಾಗಿದ್ದ ಬಗ್ಗೆ ನ್ಯಾಯಾಲಯ ಅಸಮಾಧಾನ ಸೂಚಿಸಿತ್ತು. “ನಿಮ್ಮಸಂಸ್ಥೆ ಏನು ಮಾಡಬೇಕೆಂದು ಬಯಸಿದೆ ಎಂದು ನಮಗೆ ತಿಳಿಯುತ್ತಿಲ್ಲ. ನೀವು ಅನುಪಾಲನೆ ಮಾಡುವುದಾದರೆ ಅದನ್ನು ಮನಃಪೂರ್ವಕವಾಗಿ ಮಾಡಿ,” ಎಂದು ನ್ಯಾ. ರೇಖಾ ಪಲ್ಲಿ ಅವರು ನ್ಯಾಯಾಲಯದ ಆದೇಶಗಳನ್ನು ಅನುಪಾಲನೆ ಮಾಡುವುದರ ಸಂಬಂಧ ಟ್ವಿಟರ್ ಸಲ್ಲಿಸಿದ್ದ ಅಸಮರ್ಪಕ ಅಫಿಡವಿಟ್ ಬಗ್ಗೆ ಕಿಡಿ ಕಾರಿದ್ದರು.
ಅಲ್ಲದೆ, ಈ ಹುದ್ದೆಗಳ ಬಗ್ಗೆ “ಆಕಸ್ಮಿಕ ಅಧಿಕಾರಿ” ಎಂದು ಟ್ವಿಟರ್ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದರ ಕುರಿತಾಗಿಯೂ ಅಕ್ಷೇಪಿಸಿದ್ದರು. “ಏನಿದು ಆಕಸ್ಮಿಕ ಅಧಿಕಾರಿ? ಇಲ್ಲಿ ಏನೋ ಆಕಸ್ಮಿಕ ಘಟನೆ ಸಂಭವಿಸಿದೆ ಎನ್ನುವಂತಹ ಅಭಿಪ್ರಾಯವನ್ನು ಇದು ನೀಡುತ್ತದೆ” ಎಂದು ಟ್ವಿಟರ್ ಕಿವಿ ಹಿಂಡಿದ್ದರು.
ಟ್ವಿಟರ್ ಸ್ಥಾನಿಕ ಅಹವಾಲು ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು ಎಂದು ಅಮಿತ್ ಆಚಾರ್ಯ ಎಂಬುವರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ. ಮುಸ್ಲಿಂ ವ್ಯಕ್ತಿಯೊಬ್ಬರನ್ನು ಥಳಿಸಿದ ಪ್ರಕರಣವೊಂದರ ಸಂಬಂಧ ಕೆಲ ಟ್ವಿಟರ್ ಬಳಕೆದಾರರು ಗಾಜಿಯಾಬಾದ್ ಮೂಲದ ವಿಡಿಯೋವೊಂದನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಮನವಿದಾರರು ಟ್ವಿಟರ್‌ಗೆ ತಮ್ಮ ಅಹವಾಲು ಸಲ್ಲಿಸಲು ಮುಂದಾದಾಗ ಅಹವಾಲು ಅಧಿಕಾರಿ ಲಭ್ಯವಿಲ್ಲದ್ದರ ಬಗ್ಗೆ ಗಮನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನೂತನ ಐಟಿ ನಿಯಮಾವಳಿಗಳ ಅನ್ವಯ ನೇಮಿಸಬೇಕಾದ ವಿವಿಧ ಹುದ್ದೆಗಳ ಅನುಪಾಲನೆಯನ್ನು ಟ್ವಿಟರ್ ಸಂಸ್ಥೆಯು ಮಾಡಲು ನಿರ್ದೇಶಿಸುವಂತೆ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.