ಸಂಚಾರಕ್ಕೆ ಅಡ್ಡಿ ಕಾರಣ ನೀಡಿ ರಾಜಕೀಯ ಸಮಾವೇಶಗಳಿಗೆ ಅನುಮತಿ ನಿರಾಕರಿಸಲಾಗದು: ಮದ್ರಾಸ್‌ ಹೈಕೋರ್ಟ್‌

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ತಿರುಚ್ಚಿಯಲ್ಲಿ ಸಮಾವೇಶ ನಡೆಸಲು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠದ ನ್ಯಾ. ಕೆ ಮುರಳಿ ಶಂಕರ್‌ ಅನುಮತಿಸಿದ್ದರು.
JP Nadda and Madurai bench of Madras High Court
JP Nadda and Madurai bench of Madras High CourtFacebook

ಸಂಚಾರಕ್ಕೆ ಅಡ್ಡಿಯಾಗುತ್ತದೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತದೆ ಎಂಬ ಆಧಾರದಲ್ಲಿ ರಾಜಕೀಯ ಸಮಾವೇಶಕ್ಕೆ ಅನುಮತಿ ನಿರಾಕರಿಸಲಾಗದು ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ಈಚೆಗೆ ಹೇಳಿದೆ.

ತಮಿಳುನಾಡಿನ ತಿರುಚ್ಚಿಯಲ್ಲಿ 2.5 ತಾಸುಗಳ ಸುದೀರ್ಘ ಸಮಾವೇಶ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾಗೆ ಅನುಮತಿಸಲು ತಿರುಚಿ ಪೊಲೀಸ್‌ ಮತ್ತು ಸಹಾಯಕ ಚುನಾವಣಾಧಿಕಾರಿಗೆ ನ್ಯಾ. ಕೆ ಮುರಳಿ ಶಂಕರ್‌ ಅವರ ಪೀಠ ನಿರ್ದೇಶಿಸಿತ್ತು.

ತಿರುಚಿರಾಪಳ್ಳಿಯ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯು ನಡ್ಡಾ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜಶೇಖರನ್‌ ಸಲ್ಲಿಸಿದ್ದ ಅರ್ಜಿಯನ್ನು ಭಾನುವಾರ ವಿಶೇಷ ವಿಚಾರಣೆ ನಡೆಸಿ ನ್ಯಾ. ಮುರಳಿ ಶಂಕರ್‌ ಮೇಲಿನ ಆದೇಶ ಮಾಡಿದ್ದರು.

“ಸಂಚಾರಕ್ಕೆ ಅಡ್ಡಿಯಾಗುತ್ತದೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತದೆ ಎಂಬುದು ಅನುಮತಿ ನಿರಾಕರಣೆಗೆ ಆಧಾರವಾಗದು. ಪ್ರತಿವಾದಿ ಅಧಿಕಾರಿಗಳು ವಿಧಿಸುವ ಷರತ್ತುಗಳಿಗೆ ಬದ್ಧವಾಗಿ ಸಮಾವೇಶವೂ ಯಾವುದೇ ಕಾನೂನಿನ ಸಮಸ್ಯೆ ಎದುರಾಗದಂತೆ ಶಾಂತಿಯುತವಾಗಿ ನಡೆಯುವಂತೆ ಅರ್ಜಿದಾರರು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿತ್ತು.

ನಡ್ಡಾ ಸಮಾವೇಶವು ಏಪ್ರಿಲ್‌ 7ಕ್ಕೆ ನಿಗದಿಯಾಗಿದ್ದು, ಅದೇ ಸಂದರ್ಭದಲ್ಲಿ ತಿರುಚ್ಚಿ ದೇವಸ್ಥಾನದಲ್ಲಿ ಹಬ್ಬ ನಡೆಯುತ್ತಿದೆ. ರಂಜಾನ್ ಹಿನ್ನೆಲೆಯಲ್ಲಿ ಸಂಜೆ ಜನರ ಓಡಾಟ ಹೆಚ್ಚಿರುತ್ತದೆ ಎಂದು ಪೊಲೀಸರು ನಡ್ಡಾ ಸಮಾವೇಶಕ್ಕೆ ಅನುಮತಿ ನಿರಾಕರಿಸಿದ್ದರು. 

Related Stories

No stories found.
Kannada Bar & Bench
kannada.barandbench.com