ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹೊರವಲಯದಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕುಟುಂಬದ ಒಡೆತನದ ಸಿದ್ಧಸಿರಿ ಸಕ್ಕರೆ ಹಾಗೂ ಎಥೆನಾಲ್ ಘಟಕ ಕಾರ್ಯನಿರ್ವಹಣೆ ಹಾಗೂ ಅದರ ವಿಸ್ತರಣೆಗೆ ಅಗತ್ಯ ಅನುಮತಿ ನೀಡುವ ವಿಚಾರವನ್ನು ನಾಲ್ಕು ವಾರದಲ್ಲಿ ಪರಿಗಣಿಸಿ, ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಕರ್ನಾಟಕ ಹೈಕೋರ್ಟ್ ಗುರುವಾರ ಸೂಚಿಸಿದೆ.
ಅಗತ್ಯ ಅನುಮತಿ ಪಡೆಯದೇ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಘಟಕ ಮುಚ್ಚುವಂತೆ ಕೆಎಸ್‌ಪಿಸಿಬಿಯ ಕಲಬುರಗಿ ವಲಯದ ಅಧಿಕಾರಿಗಳು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಯತ್ನಾಳ್ ಅವರ ಪುತ್ರ ಹಾಗೂ ಸಂಸ್ಥೆಯ ನಿರ್ದೇಶಕ ರಮಣಗೌಡ ಬಿ. ಪಾಟೀಲ್ ಅವರು ನೋಟಿಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ ದಳವಾಯಿ ಅವರು ಕಾರ್ಖಾನೆಗೆ ಕಾರ್ಯ ನಿರ್ವಹಣೆ ಮತ್ತು ವಿಸ್ತರಣೆಗೆ ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಆ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ. ತಮ್ಮ ಮನವಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಅಲ್ಲಿಯವರಗೆ ಘಟಕದಲ್ಲಿ ಕಬ್ಬು ಅರೆಯುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಸಲ್ಲಿಸಿದರು.
ಇದನ್ನು ಪರಿಗಣಿಸಿದ ಪೀಠವು ಘಟಕವನ್ನು ಮುಚ್ಚಲು ಸೂಚಿಸಿ ಕೆಎಸ್‌ಪಿಸಿಬಿ ನೀಡಿರುವ ಆದೇಶವನ್ನು ಷೋಕಾಸ್ ನೋಟಿಸ್ ಆಗಿ ಪರಿವರ್ತಿಸಿತು. ಜೊತೆಗೆ ಘಟಕದ ಕಾರ್ಯನಿರ್ವಹಣೆಗೆ ಹಾಗೂ ವಿಸ್ತರಣೆಗೆ ಅನುಮತಿ ಕೋರಿ ಅರ್ಜಿದಾರ ಸಂಸ್ಥೆಯು ಸಲ್ಲಿಸಿರುವ ಮನವಿಯನ್ನು ನಾಲ್ಕು ವಾರದಲ್ಲಿ ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕು. ಅದಕ್ಕೂ ಮುನ್ನ ಅರ್ಜಿದಾರರ ಅಹವಾಲು ಆಲಿಸಬೇಕು ಎಂದು ಸರ್ಕಾರ ಮತ್ತು ಕೆಎಸ್‌ಪಿಸಿಬಿಗೆ ನಿದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ: ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆಯನ್ನು ಮುಚ್ಚುವಂತೆ ಕಲಬುರಗಿ ವಲಯದ ಹಿರಿಯ ಪರಿಸರ ಅಧಿಕಾರಿ 2024ರ ಜನವರಿ 18ರಂದು ನೋಟಿಸ್ ಜಾರಿ ಮಾಡಿದ್ದರು. ಆ ನಂತರ ಘಟಕ ಮುಚ್ಚಲು ಕೆಎಸ್‌ಪಿಸಿಬಿ ಅಧ್ಯಕ್ಷರು ಜನವರಿ 25ರಂದು ಆದೇಶ ಮಾಡಿದ್ದರು. ಈ ಎರಡೂ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಧ್ಯಂತರ ಪರಿಹಾರವಾಗಿ ಕೆಎಸ್‌ಪಿಸ್‌ಬಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ.
ಈ ಹಿಂದೆ ಅರ್ಜಿದಾರರ ಮಧ್ಯಂತರ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಕೆಎಸ್‌ಪಿಸಿಬಿಗೆ ತಡೆಯಾಜ್ಞೆ ನೀಡಿತ್ತು. ಈ ವೇಳೆ ನ್ಯಾಯಾಲಯವು, 2021ರಲ್ಲಿ ಕಾರ್ಖಾನೆ ಖರೀದಿಸಲಾಗಿದೆ, ನಾವೀಗ 2024ರಲ್ಲಿದ್ದೇವೆ. ಈ ಅವಧಿಯಲ್ಲಿ ನೀವು ಅಗತ್ಯ ಅನುಮತಿ ಪಡೆಯಬೇಕಿತ್ತು. ಕಾನೂನಿನ ಪ್ರಕಾರ ನೀವು ಅನುಮತಿ ಪಡೆಯುವವರೆಗೆ ಕಾರ್ಖಾನೆ ನಡೆಸಲಾಗದು ಎಂದಿತ್ತು. ಅದರಂತೆ ಕಾರ್ಖಾನೆ ಮುಚ್ಚುವ ಸಂಬಂಧ ನಿಲುವು ತಿಳಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು.